Advertisement

ಪಂಜಳ: ತೋಡಿಗೆ ಸೇತುವೆ ಇಲ್ಲದೆ ಸಮಸ್ಯೆ

01:46 AM Feb 17, 2022 | Team Udayavani |

ಸುಬ್ರಹ್ಮಣ್ಯ: ತೋಡಿಗೆ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಆಗ್ರಹಿಸಿದರೂ ಬೇಡಿಕೆ ಈಡೇರದ ಕಾರಣ ಇಂದಿಗೂ ಜನತೆ ಸಮಸ್ಯೆ ಅನುಭವಿಸುತ್ತಿದ್ದು, ಸುತ್ತು ಬಳಸಿ ಸಂಚರಿಸುವ ಪರಿಸ್ಥಿತಿ ಬಂದೊದಗಿದೆ.

Advertisement

ನೂಜಿಬಾಳ್ತಿಲ ಗ್ರಾಮದ ಕುಬಲಾಡಿ ಬಳಿಯ ಪಂಜಳದಲ್ಲಿ ಹರಿಯುತ್ತಿರುವ ಕೇಪಿಸಾರ್‌ ತೋಡಿಗೆ ಸೇತುವೆ ನಿರ್ಮಿ ಸಬೇಕೆಂಬ ಬೇಡಿಕೆ ಕೆಲವು ದಶಕಗಳಿಂದ ವ್ಯಕ್ತವಾಗುತ್ತಿದೆ. ಹಲವು ಬಾರಿ ಮನವಿ, ಬೇಡಿಕೆ ಸಲ್ಲಿಸಿದರೂ ಇಲ್ಲಿಗೆ ಸೇತುವೆ ನಿರ್ಮಿ ಸಲು ಸಂಬಂಧಿಸಿದವರು ಮುಂದಾಗದೇ ಇರುವ ಬಗ್ಗೆ ಇಲ್ಲಿನ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೂಜಿಬಾಳ್ತಿಲ ಭಾಗದ ಶಾಲೆ, ಬೆಥನಿ ವಿದ್ಯಾಸಂಸ್ಥೆಗಳಿಗೆ ತೆರಳುವ ವಿದ್ಯಾ ರ್ಥಿಗಳು, ಜನರು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು, ಬೇಸಗೆಯಲ್ಲಿ ತೋಡಿನಲ್ಲಿ ನೀರು ಇಲ್ಲದೇ ಸಂಚಾರಕ್ಕೆ ಸಮಸ್ಯೆ ಯಾಗುವುದಿಲ್ಲ. ಆದರೆ ಮಳೆಗಾಲದಲ್ಲಿ ತೋಡು ತುಂಬಿ ಹರಿಯುತ್ತಿರುವುದರಿಂದ ಜನರು, ವಿದ್ಯಾರ್ಥಿಗಳು ಹಲವು ಕಿ.ಮೀ. ಸುತ್ತು ಬಳಸಿ ಸಂಚರಿಸಬೇಕಾಗಿದೆ.

ದಶಕದ ಬೇಡಿಕೆ
ಇಲ್ಲಿ ಹರಿಯುವ ತೋಡಿಗೆ ಸೇತುವೆ ನಿರ್ಮಿಸುವಂತೆ ಹಲವು ದಶಕಗಳಿಂದ ಈ ಭಾಗದ ಸ್ಥಳೀಯರು ಜನಪ್ರತಿನಿಧಿಗಳು, ಸಂಬಂಧಿಸಿದವರಿಗೆ ಬೇಡಿಕೆ ಸಲ್ಲಿಸುತ್ತ ಬಂದಿದ್ದಾರೆ. ಅಲ್ಲದೇ ಆ ಭಾಗದ ಜಾಗದವರು ಅವಕಾಶ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿ ಸರ್ವಋತು ಸೇತುವೆ ನಿರ್ಮಾಣಗೊಂಡಲ್ಲಿ ಮಳೆಗಾಲದಲ್ಲಿ ಸುತ್ತುಬಳಸಿ ಸಂಚರಿಸುವುದಕ್ಕೆ ಕಡಿವಾಣ ಬೀಳಲಿದೆ.

ಇಲ್ಲಿ ಪ.ಜಾ. ಕಾಲನಿ ಹಾಗೂ ಜನವಸತಿ ಪ್ರದೇಶವಿದ್ದು, ತೋಡಿನ ಆಚೆ ಭಾಗದಲ್ಲೂ ಜನವಾಸ ಪ್ರದೇಶವಿದೆ. ಕಡಬ, ಕೊಲ್ಯದಕಟ್ಟ, ವಿಮಲಗಿರಿ, ಉಕ್ಕಿನಡ್ಕ ಭಾಗದಿಂದ ಪೇರಡ್ಕ, ನೂಜಿಬಾಳ್ತಿಲ, ರೆಂಜಿಲಾಡಿ, ಬೆಥನಿ ಸಂಪರ್ಕಕಕ್ಕೆ ಕೊಂಡಿಯಂತಿರುವ ಇಲ್ಲಿ ಸೇತುವೆ ನಿರ್ಮಾಣವಾಗಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.

Advertisement

ವಿದ್ಯಾರ್ಥಿಗಳಿಗೂ ಸಮಸ್ಯೆ
ಇಲ್ಲಿ ಸೇತುವೆ ಇಲ್ಲದೆ ಹತ್ತಿರದಲ್ಲಿರುವ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಸುತ್ತು ಬಳಸಿ ಸಂಚರಿಸುತ್ತಿದ್ದಾರೆ. ಸಮಯದ ಜತೆಗೆ ಖರ್ಚು ವೆಚ್ಚದ ಹೊರೆಯೂ ಪಾಲಕರ ಮೇಲೆ ಬೀಳುತ್ತಿದೆ. ಕುಬಲಾಡಿ ಕಾಲನಿ ಹಾಗೂ ಈ ಭಾಗದಿಂದಲೂ 8-10 ಮಕ್ಕಳು ಹೊಳೆಯ ಆ ಭಾಗದ ಕಾರ್ಖಳ ಶಾಲೆ ಹೋಗುತ್ತಿದ್ದು, ಮಳೆಗಾಲದಲ್ಲಿ ತೊಂದರೆಯಾಗಿತ್ತಿದೆ ಎನ್ನುತ್ತಾರೆ ಪಾಲಕರು.

ಸಂಬಂಧಿಸಿದವರು ಸ್ಪಂದಿಸಿ
ಬಹು ವರ್ಷಗಳ ಬೇಡಿಕೆ ಈಡೇರಿಸಬೇಕು. ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದಕ್ಕೂ ಪ್ರಯೋಜನವಾಗಿಲ್ಲ. ಇಲ್ಲಿನ ಸಮಸ್ಯೆ ಅರಿತು ಸಂಬಂಧಿಸಿದವರು ಶೀಘ್ರ ಸ್ಪಂದಿಸಲಿ.
-ವಸಂತ ಕುಬಲಾಡಿ,
ಸದಸ್ಯರು ಗ್ರಾ.ಪಂ. ನೂಜಿಬಾಳ್ತಿಲ.

ಜನತೆಗೆ ಸಂಕಷ್ಟ
ಇಲ್ಲಿ ಬಹುಬೇಡಿಕೆಯ ಸೇತುವೆ ನಿರ್ಮಾಣವಾದಲ್ಲಿ ಜನತೆಯ ಸಂಕಷ್ಟ ನಿವಾರಣೆಯಾಗಲಿದೆ. ಸೇತುವೆ ಇಲ್ಲದೆ ಸುತ್ತು ಬಳಸಿ ಸಂಚರಿಸುವ ಅನಿವಾರ್ಯತೆ ಸ್ಥಳೀಯರದ್ದು. ಕೂಡಲೇ ಇಲ್ಲಿ ಸೇತುವೆ ನಿರ್ಮಾಣವಾಗಲಿ ಎಂಬುದು ನಮ್ಮ ಬೇಡಿಕೆ.
-ಸಜಿ ಒ.ಕೆ.,
ಸ್ಥಳೀಯರು, ನೂಜಿಬಾಳ್ತಿಲ.

Advertisement

Udayavani is now on Telegram. Click here to join our channel and stay updated with the latest news.

Next