ಭೋಪಾಲ್: ಮಧ್ಯ ಪ್ರದೇಶದಲ್ಲಿ ಮಿತ್ರಪಕ್ಷಗಳ ನೆರವಿನಿಂದ ಸರಕಾರ ರಚಿಸಿದ ಕಾಂಗ್ರೆಸ್ ವಿಶ್ವಾಸ ಮತ ಸಾಬೀತುಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಆಂತರಿಕ ಸಂಘರ್ಷ ದಿಂದಾಗಿ ಕಾಂಗ್ರೆಸ್ ಶಾಸಕರು ಪಕ್ಷದ ಜತೆಗೆ ಇಲ್ಲ. ಆದುದರಿಂದ ವಿಶೇಷ ಅಧಿವೇಶನವನ್ನು ಕರೆಯಬೇಕು ಮತ್ತು ವಿಶ್ವಾಸಮತ ಸಾಬೀತುಪಡಿಸುವಂತೆ ಕಾಂಗ್ರೆಸ್‌ಗೆ ಸೂಚಿಸಬೇಕು ಎಂದು ಆಗ್ರಹಿಸಿ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್‌ರನ್ನು ಭೇಟಿ ಮಾಡಲು ಬಿಜೆಪಿ ನಿರ್ಧರಿಸಿದೆ.
ಬಿಜೆಪಿಗೆ ಕಾಂಗ್ರೆಸ್ ಎದಿರೇಟು ನೀಡಿದ್ದು, ನಾವು ವಿಶ್ವಾಸಮತ ಕೋರಲು ಸಿದ್ಧವಿದ್ದೇವೆ. ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಕೆಡವಲು ಬಿಜೆಪಿ ಯತ್ನಿಸುತ್ತಿದೆ. ಈಗಾಗಲೇ 5 ತಿಂಗಳಲ್ಲಿ 4 ಬಾರಿ ವಿಶ್ವಾಸಮತ ಸಾಬೀತುಪಡಿಸಿದ್ದೇವೆ. ಇನ್ನೊಮ್ಮೆ ಬೇಕಾದರೆ ವಿಶ್ವಾಸಮತ ಸಾಬೀತುಪಡಿಸುತ್ತೇವೆ ಎಂದು ಸಿಎಂ ಕಮಲ್‌ನಾಥ್ ಹೇಳಿದ್ದಾರೆ.
230 ವಿಧಾನಸಭೆ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 114 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆಡಳಿತಾರೂಢ ಬಿಜೆಪಿ 109 ಸ್ಥಾನ ಪಡೆದಿತ್ತು. ಬಿಎಸ್‌ಪಿಯ 2 ಮತ್ತು ಎಸ್‌ಪಿಯ ಓರ್ವ ಶಾಸಕನ ಬೆಂಬಲದಿಂದ ಕಾಂಗ್ರೆಸ್ ಸರಕಾರ ರಚಿಸಿತ್ತು.
ಸರಕಾರ ಕೆಡವಲು ಯತ್ನ: ಈ ಮಧ್ಯೆ ಬಿಜೆಪಿ ಸರಕಾರವನ್ನು ಕೆಡವಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ಆರೋಪಿಸಿದ್ದಾರೆ.