Advertisement

ಐಎಂಎ ದತ್ತು ಪಡೆದ ಸರ್ಕಾರಿ ಶಾಲೆಗೆ ಸಂಕಷ್ಟ!

07:04 AM Jun 15, 2019 | Team Udayavani |

ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್‌ ಖಾನ್‌ ದತ್ತು ಪಡೆದಿದ್ದ ಸರ್ಕಾರಿ ಶಾಲೆ ಈಗ ಶಿಕ್ಷಕರ ಕೊರತೆ ಎದುರಿಸುತ್ತಿರುವುದರಿಂದ ಮಕ್ಕಳ ಪಾಲಕ, ಪೋಷಕರು ವರ್ಗಾವಣೆ ಪತ್ರಕ್ಕೆ ಆಗ್ರಹಿಸುತ್ತಿದ್ದಾರೆ.

Advertisement

ಶಿವಾಜಿ ನಗರದಲ್ಲಿ ಸರ್ಕಾರಿ ವಿಕೆಒ ಶಾಲೆಯನ್ನು ಮನ್ಸೂರ್‌ ಖಾನ್‌ 2016ರಲ್ಲಿ ದತ್ತು ಪಡೆದು ಸರ್ಕಾರದೊಂದಿಗೆ ಐದು ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿದ್ದರು. ಸರ್ಕಾರಿ ಶಾಲೆಗೆ ಶಿಕ್ಷಕರ ನೇಮಕಾತಿ ಸೇರಿ ಎಲ್ಲ ರೀತಿಯ ಸೌಲಭ್ಯವನ್ನು ಐಎಂಎ ಮೂಲಕವೇ ನೀಡಲಾಗುತಿತ್ತು.

ಶಾಲೆಯ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸ್ಥಳೀಯ ಶಾಸಕ ರೋಷನ್‌ ಬೇಗ್‌ ನೇತೃತ್ವದಲ್ಲೇ ಈ ಒಪ್ಪಂದ ನಡೆದಿತ್ತು. ಈಗ ಅಲ್ಲಿನ ಮಕ್ಕಳು ಹಾಗೂ ಶಾಲೆ ಸಂಕಷ್ಟದಲ್ಲಿದೆ. ಆದರೆ, ಸರ್ಕಾರದಿಂದ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಸ್ಪಷ್ಪಪಡಿಸಿದ್ದಾರೆ.

ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಎಲ್‌ಕೆಜಿ ಹಾಗೂ ಯುಕೆಜಿಯನ್ನು ಆರಂಭಿಸಿದ್ದು, ಸರ್ಕಾರಿ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗವಾಗುವಂತೆ ಮಾಡಿ, ಐಎಂಎನಿಂದಲೇ ಖಾಸಗಿಯಾಗಿ ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ ಎಂಬ ಆರೋಪವು ಇದೆ. ಬಹುಕೋಟಿ ಹಗರಣದಿಂದಾಗಿ ಐಎಂಎನಿಂದ ನೇಮಕವಾಗಿರುವ ಶಿಕ್ಷಕರಿಗೆ ವೇತನದ ಸಮಸ್ಯೆ ಎದುರಾಗುವುದರಿಂದ ಶಾಲೆ ಪುನಃ ಸರ್ಕಾರದ ಹಿಡಿತಕ್ಕೆ ಬರಲಿದೆ.

ಸರ್ಕಾರಿ ಶಾಲೆ ಹೇಗೆ ನಡೆಸಬೇಕು ಎಂಬುದು ನಮಗೆ ಗೊತ್ತಿದೆ. ಇಲ್ಲಿ ಮಕ್ಕಳನ್ನು ಸೇರಿಸಲು ಇಷ್ಟ ಇಲ್ಲದವರೆ ವರ್ಗಾವಣೆ ಪತ್ರ ಪಡೆದುಕೊಂಡು ಹೋಗಬಹುದು. 2016ರಲ್ಲಿ ಮಾಡಿಕೊಂಡಿರುವ ಒಪ್ಪಂದ ಇನ್ನು ಚಾಲ್ತಿಯಲ್ಲಿ ಇರುವುದರಿಂದ ಕಾನೂನಿನ ಪ್ರಕಾರ ಶಾಲೆಗೆ ಮೂಲ ಸೌಕರ್ಯ ಇತ್ಯಾದಿ ಅದೇ ಸಂಸ್ಥೆ ನೀಡಬೇಕಾಗುತ್ತದೆ.

Advertisement

ಆದರೆ, ಸಮಸ್ಯೆ ಬೇರೆ ಇರುವುದರಿಂದ ಸರ್ಕಾರದಿಂದ ಈ ಶಾಲೆ ಮುಂದುವರಿಸಿಕೊಂಡು ಹೋಗುತ್ತೇವೆ. ಯುಕೆಜಿ, ಎಲ್‌ಕೆಜಿ ಸೇರಿದಂತೆ 10ನೇ ತರಗತಿಯವರೆಗೆ 1070 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಾರ್ವಜನಿಕರ ಆಗ್ರಹ: ಐಎಂಎನಲ್ಲಿ ಹಣ ಹೂಡಿಕೆ ಮಾಡಿದ ಪೋಷಕರ ಮಕ್ಕಳಿಗೆ ಮಾತ್ರ ಶಾಲೆಯಲ್ಲಿ ಸೀಟು ನೀಡುವುದಾಗಿ ಆದೇಶ ಕೂಡ ಹೊರಡಿಸಿದ್ದರು. ಹಣ ಕಟ್ಟದ ಪೋಷಕರ ಮಕ್ಕಳಿಗೆ ಶಾಲೆಯಲ್ಲಿ ಸೀಟು ಕೊಡುತ್ತಿರಲಿಲ್ಲ.

ನವೆಂಬರ್‌ನಲ್ಲಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ಪೋಷಕರು ದೂರು ಸಲ್ಲಿಸಿದ್ದರು. ಆದರೆ, ಆಯೋಗ ನೀಡಿರುವ ದೂರಿಗೆ ಇಲಾಖೆ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಶಾಲೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ: ಪ್ರಕರಣದ ನಂತರ ಶಾಲೆಗೆ ಭೇಟಿ ನೀಡಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂತೋಣಿ ಸೆಬಾಸ್ಟಿಯನ್‌ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ. ನಂತರ ಸಂಬಂಧಪಟ್ಟ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿದೆ.

ಶಿಕ್ಷಕರ ಕೊರತೆಯನ್ನು ನಿಗಿಸಿ, ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ತರಗತಿ ಮುಂದುವರಿಸಲು ಆಯೋಗ ಸೂಚನೆ ನೀಡಿದೆ. ಶಾಲೆಯು ಉತ್ತಮ ಕಟ್ಟಡದ ಸೌಲಭ್ಯವನ್ನು ಹೊಂದಿದ್ದು, ಮಕ್ಕಳಿಗೆ ಕಲಿಯಲು ಪೂರಕ ವಾತಾವರಣ ಇದೆ. ಅಗತ್ಯ ಸಿಬ್ಬಂದಿ ನೇಮಿಸಲು ಉಪನಿರ್ದೇಶಕರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಯೋಗ ಸೂಚಿಸಿದೆ.

ಸರ್ಕಾರಿ ವಿಕೆಒ ಶಾಲೆ ಮುಂದುವರಿಸಿಕೊಂಡು ಹೋಗಲು ಸಿದ್ಧರಿದ್ದೇವೆ. ಒಪ್ಪಂದ ಮಾಡಿಕೊಂಡ ಸಂಸ್ಥೆ ಸರ್ಕಾರದ ಮಾರ್ಗಸೂಚಿ ಹಾಗೂ ಒಪ್ಪಂದಂತೆ ನಡೆದುಕೊಳ್ಳಬೇಕಾಗುತ್ತದೆ. ಇಲ್ಲಿ ಯಾರ ದಬ್ಟಾಳಿಕೆಯೂ ನಡೆಯುವುದಿಲ್ಲ. ಇದರ ಬಗ್ಗೆ ಅತಿ ಶೀಘ್ರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದೇವೆ.
-ಡಾ.ಪಿ.ಸಿ.ಜಾಫ‌ರ್‌, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next