Advertisement

ಸರ್ವರ್‌ ಇಲ್ಲದೆ ಪಡಿತರ ಪಡೆಯಲು ಪರದಾಟ

09:32 PM Sep 24, 2019 | mahesh |

ಪುತ್ತೂರು: ಜನಸಾಮಾನ್ಯರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ನೀಡುವ ಪಡಿತರ ಸಾಮಗ್ರಿಯನ್ನು ಪಡಿತರ ಅಂಗಡಿಗಳ ಮೂಲಕ ಪಡೆದುಕೊಳ್ಳಲು ಕೆಲವು ದಿನಗಳಿಂದ ಫಲಾನುಭವಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಪಡಿತರ ಪಡೆಯಲು ನೀಡುವ ಬೆರಳಚ್ಚನ್ನು ಸ್ವೀಕರಿಸುವ ಸರ್ವರ್‌ನಲ್ಲಿ ಸಮಸ್ಯೆ ಇರುವುದು ಇದಕ್ಕೆ ಕಾರಣ.

Advertisement

ಹಾಲಿ ಪಡಿತರದ ಫಲಾನುಭವಿ ಬಿಪಿಎಲ್‌ ಕಾರ್ಡುದಾರರಿಗೆ ಅಕ್ಕಿ, ಬೇಳೆ ಹಾಗೂ ಎಪಿಎಲ್‌ ಕಾರ್ಡುದಾರರಿಗೆ ಕನಿಷ್ಠ ಪಾವತಿ ದರದಲ್ಲಿ ಅಕ್ಕಿ ಮಾತ್ರ ಸಿಗುತ್ತದೆ. ಫಲಾನುಭವಿಗಳು ಪಡಿತರ ಸಾಮಗ್ರಿ ಗಳನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಕಾರ್ಡ್‌ನಲ್ಲಿ ಹೆಸರಿರುವವರು ಬೆರಳಚ್ಚನ್ನು ನೀಡಬೇಕಾಗುತ್ತದೆ. ಆದರೆ ಆಹಾರ ಇಲಾಖೆಯ ಬೆರಳಚ್ಚು ನೋಂದಣಿಯ ಸರ್ವರ್‌ ಕೆಲವು ದಿನಗಳಿಂದ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಸರ್ವರ್‌ ಸಮಸ್ಯೆಯ ಕಾರಣದಿಂದ ಫಲಾನುಭವಿಗಳು ಹಲವು ಬಾರಿ ಪಡಿತರ ಅಂಗಡಿಗೆ ಓಡಾಡಬೇಕಾಗಿದೆ. ಬೆಳಗ್ಗೆ ಸರ್ವರ್‌ ಸರಿಯಿದ್ದರೆ ಕೆಲವೇ ಕ್ಷಣಗಳಲ್ಲಿ ಸ್ಥಗಿತಗೊಳ್ಳುತ್ತದೆ. ಮತ್ತೆ ಇಡೀ ದಿನ ಕೈಕೊಡುತ್ತಿದೆ. ತಮ್ಮ ದೈನಂದಿನ ಕೆಲಸಗಳನ್ನೂ ಬಿಟ್ಟು ಪಡಿತರ ಅಂಗಡಿಗೆ ಹಲವು ಬಾರಿ ಅಲೆದಾಡಬೇಕಾದ ಅನಿವಾರ್ಯತೆಯಲ್ಲಿ ಫಲಾನುಭವಿಗಳು ಪರದಾಡುತ್ತಿದ್ದಾರೆ.

ಸಾಮಗ್ರಿ ವಿತರಣೆ ಬಾಕಿ
ಪಡಿತರ ವಿತರಣೆಯ ಸೊಸೈಟಿಗಳಲ್ಲಿ ತಿಂಗಳ 10ನೇ ತಾರೀಕಿನಿಂದ 25 ತಾರೀಕಿನವರೆಗೆ ಮಾತ್ರ ಪಡಿತರ ವಿತರಣೆ ನಡೆಯುತ್ತದೆ. ಸೆಪ್ಟಂಬರ್‌ ತಿಂಗಳಿನಲ್ಲಿ ಈ ಅವಧಿಯಲ್ಲಿ ಒಂದು ದಿನವೂ ಸರ್ವರ್‌ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಈ ಕಾರಣದಿಂದ ಎಲ್ಲ ಪಡಿತರ ವಿತರಣೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಸಾಮಗ್ರಿ ವಿತರಣೆ ಬಾಕಿಯಾಗಿದೆ. ಸೆ. 25 ಕಡೆಯ ದಿನವಾಗಿರುವುದರಿಂದ ಮುಂದೇನು? ಎನ್ನುವ ಆತಂಕ ಫಲಾನುಭವಿಗಳಲ್ಲಿ ಕಾಡುತ್ತಿದೆ.

ಮುಂದಿನ ತಿಂಗಳಿನಿಂದ ಸರಿಯಾಗಲಿದೆ
ನಾಲ್ಕು ದಿನಗಳಿಂದ ಇ -ಕೆವೈಸಿ ಮಾಡುವುದನ್ನು ನಿಲ್ಲಿಸಲಾಗಿದೆ. ಪ್ರತಿ ಮಂಗಳವಾರ ನಿರ್ವಹಣೆಯ ಕಾರಣದಿಂದ ಬೆಳಗ್ಗೆ 11 ಗಂಟೆಯಿಂದ 6 ಗಂಟೆಯ ತನಕ ಸರ್ವರ್‌ ನಿಧಾನಗತಿಯಲ್ಲಿ ಇರುತ್ತದೆ. ಮುಂದಿನ ತಿಂಗಳಿನಿಂದ ತಿಂಗಳ 1-10 ಹಾಗೂ 25 ತಾಲೂಕಿನ ಬಳಿಕ ಇ-ಕೆವೈಸಿ ಮಾಡುವಂತೆ ಸರಕಾರದಿಂದ ಸೂಚನೆ ಬಂದಿದೆ. ಈ ಕಾರಣದಿಂದ ಫಲಾನುಭವಿಗಳಿಗೆ ಬೆರಳಚ್ಚು ನೀಡಲು ಸರ್ವರ್‌ ಸಮಸ್ಯೆ ಉಂಟಾಗದು ಎಂದು ಆಹಾರ ಇಲಾಖೆ ಅಧಿಕಾರಿ ಸರಸ್ವತಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next