ಪಣಜಿ(ವಾಸ್ಕೊ): ಕಳೆದ ಅನೇಕ ವರ್ಷಗಳಿಂದ ವಾಸ್ಕೊ ಖಾರಿವಾಡಾದ 207 ಮನೆಗಳನ್ನು ತೆರವುಗೊಳಿಸುವುದಾಗಿ ಮುರಗಾಂವ ನಗರಪಾಲಿಕೆ ಆದೇಶ ಹೊರಡಿಸಿದ್ದು ಈ ಮನೆಗಳನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಮುಂಬೈ ಹೈಕೋರ್ಟ್ ಗೋವಾ ಖಂಡಪೀಠದ ಬಳಿ ಹೇಳಿಕೆ ನೀಡಿದ್ದು ಮತ್ತೆ ಕನ್ನಡಿಗರಿಗೆ ಕಂಟಕ ಎದುರಾಗಿದೆ.
ಖಾರಿವಾಡಾದ 207 ಮನೆಗಳನ್ನು ತೆರವುಗೊಳಿಸುವುದಾಗಿ ನೀಡಿದ್ದ ನೋಟಿಸ್ ವಿರುದ್ಧ ಸ್ಥಳೀಯ 17 ನಿವಾಸಿಗಳು ಮುಂಬೈ ಹೈಕೋರ್ಟ್ ಗೋವಾ ಪೀಠದ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿದೆ.
ಗೋವಾ ಪೋರ್ಚುಗೀಸರ ಆಳ್ವಿಕೆ ಸಂದರ್ಭದಿಂದಲೂ ಖಾರಿವಾಡಾದಲ್ಲಿ ಮನೆ ಕಟ್ಟಿಕೊಂಡು ಜನತೆ ವಾಸಿಸುತ್ತಿದ್ದು, ಇದೀಗ ಇದ್ದಕ್ಕಿದ್ದಂತೆಯೇ ಈ ಮನೆಗಳನ್ನು ತೆರವುಗೊಳಿಸಿದರೆ ನಾವೆಲ್ಲ ಎಲ್ಲಿಗೆ ಹೋಗಬೇಕು ಎಂಬುದು ಖಾರಿವಾಡಾ ನಿವಾಸಿಗರ ಅಳಲು. ಆದರೆ, ಖಾರಿವಾಡಾ ಕಿನಾರಿ ಭಾಗದಲ್ಲಿ ಸಾಗರಮಾಲಾ ಯೋಜನೆಯಡಿ 100 ಕೋಟಿಯ ಪ್ರೊಜೆಕ್ಟ್ ಸಿದ್ಧಗೊಂಡಿದ್ದು ಇದನ್ನು ಆರಂಭಿಸಲು ಇಲ್ಲಿರುವ ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಖಾರಿವಾಡಾದಲ್ಲಿ ಮುರಗಾಂವ ನಗರಪಾಲಿಕೆಯು ನೋಟಿಸ್ ನೀಡಿರುವ 207 ಮನೆಗಳನ್ನು ಸೇರಿಸಿ ಒಟ್ಟೂ 450ಕ್ಕೂ ಹೆಚ್ಚು ಮನೆಗಳಿವೆ. ಈ ಎಲ್ಲ ಕುಟುಂಬಗಳು ಇದೀಗ ಮನೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ವಾಸ್ಕೊ ಕಿನಾರೆ ಭಾಗದಲ್ಲಿ ಮತ್ತೆ ಜೆಸಿಬಿ ಸದ್ದು!: 2004 ರಿಂದ ವಾಸ್ಕೊ ಬೈನಾ ಬೀಚ್‌ನಲ್ಲಿ ಗೋವಾ ಸರ್ಕಾರವು ಹಂತ ಹಂತವಾಗಿ ಮನೆಗಳನ್ನು ತೆರವುಗೊಳಿಸುವ ಕಾರ್ಯ ಕೈಗೆತ್ತಿಕೊಂಡು 2016ರವರೆಗೆ ಸಾವಿರಾರು ಮನೆಗಳನ್ನು ತೆರವುಗೊಳಿಸಿದೆ. ಈ ಎಲ್ಲ ಮನೆಗಳ ತೆರವು ಕಾರ್ಯಾಚರಣೆ ಕೈಗೊಳ್ಳುವಾಗ ಅಲ್ಲಿನ ಕನ್ನಡಿಗರು ನ್ಯಾಯಾಲಯದ ಮೆಟ್ಟಿಲೇರಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಯಾವುದೆ ಶಾಶ್ವತ ಪುನರ್ವಸತಿ ಕಲ್ಪಿಸದೆಯೇ ಗೋವಾ ಸರ್ಕಾರ ಬೈನಾ ಆಪರೇಶನ್ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿತ್ತು. ಈ ತೆರವು ಕಾರ್ಯಾಚರಣೆಯಿಂದ ಸಾವಿರಾರು ಕುಟುಂಬಗಳು ಸೂರು ಕಳೆದುಕೊಂಡಿದ್ದವು.