Advertisement

Problem Solve: ಬಿಪಿಸಿಎಲ್‌ ಅಧಿಕಾರಿಗಳ ಅಸಹಕಾರ: ತೈಲ ಸಾಗಾಟ ಟ್ಯಾಂಕರ್‌ ಮುಷ್ಕರ

01:41 AM Sep 11, 2024 | Team Udayavani |

ಬೈಕಂಪಾಡಿ: ಬೈಕಂಪಾಡಿಯ ಬಿಪಿಸಿಎಲ್‌ ಪೆಟ್ರೋಲಿಯಂ ಡಿಪೋದಲ್ಲಿ ಟ್ಯಾಂಕರ್‌ ಚಾಲಕರ ಸಮಸ್ಯೆಗಳಿಗೆ ಬಿಪಿಸಿಎಲ್‌ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಜತೆಗೆ ಈ ಹಿಂದೆ ಇದ್ದಂತೆ ಮಾಸಿಕ ಐದು – ಆರು ಸಾವಿರ ಕಿಲೋಮೀಟರ್‌ಗಳ ಬದಲಾಗಿ ಕೇವಲ 2 ಸಾವಿರ ಕಿ.ಮೀ.ಗಳಿಗೆ ಸಂಚಾರ ನಿರ್ಬಂಧಿಸಿರುವುದನ್ನು ವಿರೋಧಿಸಿ ಎರಡು ದಿನಗಳ ಕಾಲ ನಡೆಯುತ್ತಿದ್ದ ಟ್ಯಾಂಕರ್‌ ಮುಷ್ಕರಕ್ಕೆ ತಾತ್ಕಾಲಿಕವಾಗಿ ವಿರಾಮ ದೊರೆತಿದೆ.

Advertisement

ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ಟ್ರಾನ್ಸ್‌ಫೋರ್ಟ್‌ ಪದಾಧಿಕಾರಿಗಳು, ಟ್ಯಾಂಕರ್‌ ಮಾಲಕರು ಸೇರಿ ಬಿಪಿಸಿಎಲ್‌ ಅಧಿಕಾರಿಗಳ ಜತೆ ಸುದೀರ್ಘ‌ ಮಾತುಕತೆ ನಡೆಸಿದರು. ಮಂಗಳವಾರ ಜಿಲ್ಲಾಧಿಕಾರಿಯ ಪ್ರತಿನಿಧಿಯಾಗಿ ಬಂದಿರುವ ಅಧಿಕಾರಿ ಗೋಕುಲ್‌ದಾಸ್‌ ನಾಯಕ್‌ ಅವರು ಮಾತುಕತೆ ನಡೆಸಿ, ಟ್ಯಾಂಕರ್‌ ಚಾಲಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪ್ರಯತ್ನವಾಗಿದೆ.

ತೈಲ ಸಾಗಾಟವನ್ನು ಒಂದು ಟ್ಯಾಂಕರ್‌ಗೆ ಹಿಂದಿನಂತೆಯೇ ಆರೇಳು ಸಾವಿರ ಕಿ.ಮೀ. ಸಂಚಾರಕ್ಕೆ ನೀಡುವ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ತೀರ್ಮಾನವಾಗಬೇಕಿದೆ. ಇದರ ಬಗ್ಗೆ ಬಿಪಿಸಿಎಲ್‌ ಡಿಪೋ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಮುಂದಿನ ಎರಡು ವಾರದೊಳಗಾಗಿ ಚಾಲಕರ ಸಮಸ್ಯೆ ಪರಿಹಾರವಾಗುವ ವಿಶ್ವಾಸವಿದೆ. ತತ್‌ಕ್ಷಣ ಮುಷ್ಕರವನ್ನು ನಿಲ್ಲಿಸಿ ತೈಲ ಸರಬರಾಜಿಗೆ ಟ್ಯಾಂಕರ್‌ ಚಾಲಕರ ಮುಂದಾಗಬೇಕು ಎಂದು ಮನವಿ ಮಾಡಿದರು.

ಸಮಸ್ಯೆಗಳ ಕುರಿತಾಗಿ ಟ್ಯಾಂಕರ್‌ ಚಾಲಕರು ಅಭಿಪ್ರಾಯ ವ್ಯಕ್ತಪಡಿಸಿ, ತೈಲ ಸಾಗಾಟ ಟ್ಯಾಂಕರ್‌ಗೆ ಸೂಕ್ತ ಸಮಯಕ್ಕೆ ಲೋಡಿಂಗ್‌ ಆಗುತ್ತಿಲ್ಲ, ಇದರಿಂದ ನಿಗದಿತ ಸಮಯದಲ್ಲಿ ಸಂಚಾರ, ಮನೆ ತಲುಪುವುದು ಕಷ್ಟವಾಗುತ್ತದೆ. ಕೆಲವು ಕಡೆ ಅನ್‌ಲೋಡಿಂಗ್‌ಗೆ ಮೂರ್‍ನಾಲ್ಕು ದಿನಗಳ ಕಾಲ ಕಾಯುವ ಸ್ಥಿತಿಯಿದೆ.
ಹಲವು ಸಂದರ್ಭಗಳಲ್ಲಿ ಸಂಸ್ಥೆಯ ನಿಗದಿತ ಅವಧಿಗಿಂತ ಹೆಚ್ಚು ಸಮಯ ಅನಿವಾರ್ಯವಾಗಿ ಟ್ಯಾಂಕರ್‌ಗಳನ್ನು ನಿಲ್ಲಿಸಿದ ಸಂದರ್ಭ ಜಿಪಿಎಸ್‌ ಲಾಕ್‌ ಸಿಸ್ಟಮ್‌ ತೆರವು ಮಾಡಲು ಹೇಳಿದರೆ ಇಲ್ಲಿನ ಡಿಪೋದ ಅಧಿಕಾರಿಗಳು ಸರಿಯಾದ ಸ್ಪಂದಿಸುತ್ತಿಲ್ಲ. ಜತೆಗೆ ಚಾಲಕರ ವಿಶ್ರಾಂತಿ ಕೊಠಡಿಯಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತಿತರ ಸಮಸ್ಯೆಗಳು ಇವೆ. ಇದನ್ನು ಕೂಡ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗೆ ಸ್ಪಂದನೆ
ಟ್ಯಾಂಕರ್‌ ಚಾಲಕರ ಬೇಡಿಕೆಗೆ ಸ್ಪಂದಿಸಿರುವ ಅಧಿಕಾರಿಗಳು ನಿಗದಿತ ಸಮಯದಲ್ಲಿ ಈಡೇರಿಸಲಾಗುವುದು ಎಂದು ಬಿಪಿಸಿಎಲ್‌ ಭರವಸೆ ನೀಡಿದ ಬಳಿಕ ತೈಲ ಲೋಡಿಂಗ್‌ ಆರಂಭಿಸಲಾಯಿತು. ತೈಲ ಸಾಗಾಟ ಟ್ಯಾಂಕರ್‌ ಮಾಲಕರ ವತಿಯಿಂದ ಸುಜಿತ್‌ ಆಳ್ವ, ಇಕ್ಬಾಲ್‌, ಬಿಪಿಸಿಎಲ್‌ನ ಹಿರಿಯ ಅಧಿಕಾರಿ ನೀರಜ್‌ ಅಗರ್ವಾಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next