Advertisement

ಇಳಕಲ್ಲದಲ್ಲಿ ಶುದ್ಧ ಕುಡಿವ ನೀರಿಗೆ ಪರದಾಟ

04:06 PM Apr 27, 2022 | Team Udayavani |

ಇಳಕಲ್ಲ: ಆಲಮಟ್ಟಿಯ ಹಿನ್ನಿರಿನಲ್ಲಿ ಪ್ರಾರಂಭಗೊಂಡ ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ನಗರಕ್ಕೆ ನೀರಿನ ಕೊರತೆ ಇಲ್ಲ. ಆದರೆ, ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಲಕ್ಷ್ಯಕ್ಷೆ ಒಳಗಾಗಿವೆ.

Advertisement

ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೇವಲ 8 ಮಾತ್ರ. ಆದರೇ ಇರುವ 8 ಘಟಕಗಳಲ್ಲಿ ಅರ್ಧದಷ್ಟು ಘಟಕಗಳು ಕಳಪೆ ಉಪಕರಣಗಳು ಮತ್ತು ನಿರ್ವಹಣೆಯ ಕೊರತೆ ಹಾಗೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮದಿಂದ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ನಗರದ ಎಸಿಒ ಸ್ಕೂಲ್‌, ಕೇಂದ್ರ ಶಾಲೆ ಹಾಗೂ ಸಿದ್ದಾರ್ಥ ಪ್ರೌಢಶಾಲೆ ಹತ್ತಿರ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಪೂರ್ಣವಾಗಿ ಸುಮಾರು 4-5 ವರ್ಷಗಳಿಂದ ಸ್ಥಗಿತಗೊಂಡಿದೆ. ಕೆಇಬಿ ರೋಡ್‌ದ ಬನ್ನಿಮಹಾಂಕಾಳಿ ದೇವಸ್ಥಾನದ ಹತ್ತಿರ ಇರುವ ಘಟಕವೂ ಇದಕ್ಕೆ ಹೊರತಾಗಿಲ್ಲ. ಅದು ನಿರ್ವಹಣೆಗಿಂತ ಸ್ಥಗಿತವಾಗಿರುವ ದಿನಗಳೇ ಹೆಚ್ಚು.

ಸಾರ್ವಜನಿಕರಿಗೆ ಶುದ್ಧ ನೀರು ಪೂರೈಸುವ ಉದ್ದೇಶದಿಂದ ಆರಂಭಿಸಲಾದ ಈ ಘಟಕಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯೇ ಇಲ್ಲ. ಜವಾಬ್ದಾರಿ ಹೊತ್ತ ಗುತ್ತಿಗೆದಾರರು ಕಡ್ಡಾಯ ನಿರ್ವಹಣೆಯ ಅವಧಿಯಲ್ಲೂ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಮತ್ತು ಕಳಪೆ ಉಪಕರಣ ಹಾಗೂ ನಿರ್ವಹಣೆಯ ಕೊರತೆಯಿಂದ ಕೆಲವು ಘಟಕಗಳು ಕೆಲಸ ಮಾಡಿದ್ದಕ್ಕಿಂತ ಸ್ಥಗಿತಗೊಂಡಿರುವ ದಿನಗಳೇ ಹೆಚ್ಚು. ಈಚೆಗೆ 3-4 ವರ್ಷಗಳಿಂದ ಘಟಕಗಳು ಸ್ಥಗಿತಗೊಂಡಿದ್ದರೂ ನಗರಸಭೆ ಗಮನ ಹರಿಸುತ್ತಿಲ್ಲ, ಸಾರ್ವಜನಿಕರ ಒತ್ತಾಯ ಹೆಚ್ಚಾದಾಗ ಮಾತ್ರ ದುರಸ್ತಿಯಾಗುವ ಘಟಕಗಳು ನಿರ್ವಹಣೆ ಹಾಗೂ ಮೇಲು ಉಸ್ತುವಾರಿಗೆ ಸರಿಯಾದ ವ್ಯವಸ್ಥೆಯಿಲ್ಲದ್ದಕ್ಕಾಗಿ ಮತ್ತೆ ಕೆಲವು ದಿನಗಳಲ್ಲಿ ಸ್ಥಗಿತಗೊಳ್ಳುತ್ತಿವೆ. ಈ ವಿಷಯವಾಗಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪೌರಾಯುಕ್ತರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.

2014-15ರಲ್ಲಿ ಈ ಘಟಕಗಳ ನಿರ್ಮಾಣಕ್ಕೆ ನಗರಸಭೆಯ 13ನೇ ಹಣಕಾಸು ನಿಧಿ ಯ ಅನುದಾನ, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಎಸ್‌ ಎಫ್‌ಸಿ ಅನುದಾನದ ಮೂಲಕ 60 ಲಕ್ಷ ಖರ್ಚು ಮಾಡಲಾಗಿದ್ದು, ಉದ್ದೇಶ ಈಡೇರಿಲ್ಲ. ಘಟಕಗಳ ನಿರ್ವಹಣೆಯಲ್ಲಿ ನಗರಸಭೆ ಅಧಿ ಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಈಗಾಗಲೇ ಹಲವು ಘಟಕಗಳ ಬಿಡಿಭಾಗಗಳು ಹಾಗೂ ಕೊಠಡಿಯ ಗ್ಲಾಸ್‌ಗಳನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ಸ್ಥಗಿತಗೊಂಡಿರುವ ಘಟಕಗಳ ಒಳಭಾಗದಲ್ಲಿ ಜೀಡುಗಟ್ಟಿದ್ದಲ್ಲದೇ ಗುಟಕಾ ಉಗುಳಿದ ಕಲೆಗಳು, ಬೀಡಿ, ಸಿಗರೇಟ್‌ ತುಂಡುಗಳೊಂದಿಗೆ ಸಾಕಷ್ಟು ಧೂಳು ಆವರಿಸಿಕೊಂಡಿದ್ದು ನಗರಸಭೆ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

Advertisement

ಶುದ್ಧ ಕುಡಿಯುವ ಘಟಕಗಳನ್ನು ರಿಪೇರಿ ಮಾಡಿಸುವದರಲ್ಲಿ ಯಾವುದೇ ಅರ್ಥವಿಲ್ಲ. ಯಾವುದಾದರೂ ಅನುದಾನದಲ್ಲಿ ಹೊಸ ಶುದ್ಧೀಕರಣ ಯಂತ್ರಗಳನ್ನು ಅಳವಡಿಸಿ ಖಾಸಗಿಯವರಿಗೆ ಅದರ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ನೀಡಲಾಗುವುದು. -ಮಂಜುನಾಥ ಶೆಟ್ಟರ, ಇಳಕಲ್ಲ ನಗರಸಭೆ ಅಧ್ಯಕ್ಷರು

ಸ್ಥಗಿತಗೊಂಡಿರುವ ಶುದ್ಧ ಕುಡಿಯುವ ಘಟಕಗಳನ್ನು ರಿಪೇರಿ ಮಾಡಿಸಿಕೊಂಡು ನಿರ್ವಹಣೆ ಮಾಡಲು ಹೊಣೆ ಹೊತ್ತುಕೊಂಡವರಿಗೆ ಟೆಂಡರ್‌ ಕೊಡಲು ಸಿದ್ಧ. –ರಾಮಕೃಷ್ಣ ಸಿದ್ದನಕೊಳ್ಳ, ಪೌರಾಯುಕ್ತರು ನಗರಸಭೆ

ಘಟಕಗಳ ಬಗ್ಗೆ ಉದಾಸೀನತೆ ಮುಂದುವರಿದರೇ ಘಟಕಗಳ ಸಾಮಗ್ರಿಗಳು ಮಾಯವಾದರೂ ಅಚ್ಚರಿ ಪಡಬೇಕಿಲ್ಲ. ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಿ, ಜನರಿಗೆ ಶುದ್ಧ ನೀರು ಒದಗಿಸಬೇಕು.  -ಮಹಾಂತೇಶ ಹನಮನಾಳ, ನಗರಸಭೆ ಮಾಜಿ ಉಪಾಧ್ಯಕ್ಷ 

-ಮಲ್ಲಿಕಾರ್ಜುನ ಇಂದರಗಿ

Advertisement

Udayavani is now on Telegram. Click here to join our channel and stay updated with the latest news.

Next