Advertisement

ಅಪೂರ್ಣ ಕಾಮಗಾರಿ ಪರಿಣಾಮ: ಚರಂಡಿ ಸ್ಥಿತಿ ಶೋಚನೀಯ

08:25 AM May 14, 2018 | Team Udayavani |

ವಿಟ್ಲ : ಈಗಾಗಲೇ ವಿಟ್ಲಕ್ಕೆ ಐದಾರು ಮಳೆ ಬಂದಿದೆ. ಆಗಾಗ ಮತ್ತಷ್ಟು ಮಳೆ ಸುರಿಯುವ ವಾತಾವರಣವಿದೆ. ಆದರೆ ಮಳೆ ನೀರು ಸರಾಗವಾಗಿ ಹರಿಯಲು ಇಲಾಖೆಗಳು ಯಾವ ರೀತಿ ತಯಾರಾಗಿದೆ ಎಂದು ಕೇಳಿದರೆ ಚುನಾವಣೆಯೊಂದೇ ಉತ್ತರ. ಚುನಾವಣೆಯ ಪರಿಣಾಮ ಅಧಿಕಾರಿಗಳಿಗೆ ಸಮಯ ಇರಲಿಲ್ಲ, ನೀತಿಸಂಹಿತೆ ಎರಡನೆಯ ಅಡ್ಡಿಯಾಗಿತ್ತು. ಆದರೆ ನನೆಗುದಿಗೆ ಬಿದ್ದ ವಿಟ್ಲ ಪೇಟೆಯ ಚರಂಡಿಯ ಅಪೂರ್ಣ ಕಾಮಗಾರಿಯ ಪರಿಣಾಮ ರಸ್ತೆಯಲ್ಲೇ ಕೃತಕ ಪ್ರವಾಹ ಉಂಟಾಗಲಿದೆ ಮತ್ತು ಕಸ ಕಡ್ಡಿಗಳು ಪೇಟೆಯ ಸ್ವಚ್ಛತೆಗೆ ಧಕ್ಕೆಯಾಗಲಿವೆ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಚರಂಡಿ ಸಮಸ್ಯೆ ಹಳೆಯದೇ!
ವಿಟ್ಲ ಪೇಟೆಯ ಚರಂಡಿ ಅವ್ಯವಸ್ಥೆ ಇಂದು ನಿನ್ನೆಯದಲ್ಲ. ಕಳೆದ ಹತ್ತಾರು ವರ್ಷಗಳಿಂದ ಪರಿಹರಿಸಲಾಗದೇ ಉಳಿದಿರುವ, ಅತ್ಯಂತ ಅವಶ್ಯವಾಗಿರುವ ಚರಂಡಿ ಕಾಮಗಾರಿ ಪೂರ್ತಿಯಾಗದೇ ಇರುವುದಂತೂ ನಿತ್ಯಸತ್ಯ. ವಿಟ್ಲ ಜಂಕ್ಷನ್‌ನಿಂದ ಮಂಗಳೂರು ರಸ್ತೆ ಮತ್ತು ಅರಮನೆ ರಸ್ತೆಯ ಚರಂಡಿಗಳು ನಾದುರಸ್ತಿಯಲ್ಲೇ ಇದ್ದರೆ, ಜಂಕ್ಷನ್‌ನಲ್ಲಿ ಅಪೂರ್ಣ ಚರಂಡಿ ಕಾಮಗಾರಿ ಅವ್ಯವಸ್ಥೆಯ ಆಗರವಾಗಿ ಉಳಿದುಬಿಟ್ಟಿದೆ.

ಜಂಕ್ಷನ್‌ ನಲ್ಲಿ ಏನು ಸಮಸ್ಯೆ ?
ವಿಟ್ಲ ಪುತ್ತೂರು ರಸ್ತೆ ಮತ್ತು ಶಾಲಾ ರಸ್ತೆಯ ಚರಂಡಿ ಕಾಮಗಾರಿ ನಡೆದಾಗ ಜಂಕ್ಷನ್‌ನಲ್ಲಿ ಅಂಗಡಿಗಳಿದ್ದವು. ಅಂಗಡಿಗಳು ತೆರವಾದ ಬಳಿಕವೂ ಆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ. ಶಾಲಾ ರಸ್ತೆಯ ಪೊಲೀಸ್‌ ಸ್ಟೇಶನ್‌ ಬಳಿಯಲ್ಲಿ ಚರಂಡಿ ಕಾಮಗಾರಿಯೂ ಪೂರ್ತಿಯಾಗಿಲ್ಲ. ಅರ್ಧಕ್ಕೇ ಉಳಿದ ಕಾಮಗಾರಿಯ ಪರಿಣಾಮ, ರಸ್ತೆ ಬದಿಯಲ್ಲಿ ಚರಂಡಿಯ ದುಷ್ಪರಿಣಾಮಗಳು ನಾಗರಿಕರನ್ನು ಬಾಧಿಸುತ್ತವೆ. ನೀರು ಚರಂಡಿಗಿಳಿಯದೇ ರಸ್ತೆಯಲ್ಲೇ ಹರಿಯುತ್ತದೆ. ಪರಿಣಾಮವಾಗಿ ಕೃತಕ ಪ್ರವಾಹ ಸೃಷ್ಟಿಯಾಗುತ್ತದೆ. ಜತೆಗೆ ಉಳಿದೆಲ್ಲೆಡೆಯ ಕಸಕಡ್ಡಿಗಳು, ಪ್ಲಾಸ್ಟಿಕ್‌ಗಳು ರಸ್ತೆಗೇ ಬರುತ್ತವೆ.

ಅರಮನೆ ರಸ್ತೆ ಚರಂಡಿ
ಅರಮನೆ ರಸ್ತೆ ಮತ್ತು ಮಂಗಳೂರು ರಸ್ತೆಯಲ್ಲಿ ಚರಂಡಿಗಳ ಸ್ಲ್ಯಾಬ್‌ ಗಳು ಮುರಿದು ಬೀಳುವ ಹಂತದಲ್ಲಿವೆ. ಕೆಲವು ಮುರಿದುಬಿದ್ದಿವೆ. ಅಲ್ಲದೇ ಹೂಳು ತುಂಬಿಕೊಂಡಿದೆ. ರಸ್ತೆ ಬದಿಯ ವ್ಯಾಪಾರಿಗಳು ಮೂಗು ಮುಚ್ಚಿ ಕುಳಿತು ಕೊಳ್ಳುವ ಪರಿಸ್ಥಿತಿಯಿದೆ. ರಸ್ತೆ ವಿಸ್ತರಣೆಯ ಜತೆ ಆರಂಭವಾದ ಚರಂಡಿ ಸಮಸ್ಯೆ ಇನ್ನೂ ಪರಿಹಾರ ಕಂಡಿಲ್ಲ. ಈಗ ಇರುವ ಸ್ಲಾéಬ್‌ಗಳು  ಹಳೆಯದು. ಚಿಕ್ಕ ವಾಹನ ಸಂಚರಿ ಸಿದರೂ ಮುರಿದು ಬೀಳುವ ಸಂಭವವಿದೆ.

ಒಳರಸ್ತೆಗಳ ಚರಂಡಿ
ಒಳರಸ್ತೆಗಳ ಚರಂಡಿ ಹೂಳೆತ್ತುವ ಕಾರ್ಯವೂ ಅವಶ್ಯವಾಗಿದೆ. ದೇವಸ್ಥಾನ ರಸ್ತೆ, ಟೆಲಿಫೋನ್‌ ಎಕ್ಸ್‌ಚೇಂಜ್‌ ರಸ್ತೆ, ಸಮುದಾಯ ಆಸ್ಪತ್ರೆ ರಸ್ತೆ, ಅಡ್ಡದಬೀದಿ ರಸ್ತೆ, ಕಾಲೇಜು ರಸ್ತೆ ಇತ್ಯಾದಿ ರಸ್ತೆಗಳ ಬದಿಯಲ್ಲಿರುವ ಚರಂಡಿಗಳ ಹೂಳೆತ್ತುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಕಳೆದ ಸಾಲಿನಲ್ಲಿ ಅನುದಾನವಿಲ್ಲದೆ ಕಾಮಗಾರಿ ನಡೆಸಲಾಗಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಅನುದಾನ ಮಂಜೂರು ಮಾಡಿ, ಕಾಮಗಾರಿ ಕೈಗೆತ್ತಿಕೊಳ್ಳಲೇಬೇಕೆಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

Advertisement

ಚರಂಡಿಗಳ ಅಭಿವೃದ್ಧಿ
ಕಳೆದ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ಅನೇಕ ಕಡೆಗಳಲ್ಲಿ ಚರಂಡಿಗಳ ಹೂಳೆತ್ತುವ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಮಾಡಿತ್ತು. ಆದುದರಿಂದ ರಸ್ತೆಗೆ ಹೆಚ್ಚು ಹಾನಿಯಾಗಲಿಲ್ಲ. ಈ ಬಾರಿ ಚುನಾವಣೆಯೇ ಕಾಮಗಾರಿಗಳಿಗೆ ಅಡ್ಡಿಯಾಗಿತ್ತು. ಇನ್ನು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಆರಂಭವಾಗಬೇಕು. ಮೇ 15ರ ಅನಂತರ ಈ ಕಾಮಗಾರಿಯನ್ನು ನಿರೀಕ್ಷಿಸಬಹುದಾಗಿದೆ.

ಚರಂಡಿ ಕಾಮಗಾರಿ ನಮ್ಮದಲ್ಲ
ವಿಟ್ಲದ ಪ್ರಮುಖ ರಸ್ತೆ ಬದಿಯಲ್ಲಿರುವ ಚರಂಡಿಗಳ ಕಾಮಗಾರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿದೆ. ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಅದನ್ನು ಇಲಾಖೆಯೇ ಗುತ್ತಿಗೆದಾರರ ಮೂಲಕ ಮಾಡಿಸಬಹುದು. ಒಳರಸ್ತೆಗಳ ಚರಂಡಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಣ ಪಂಚಾಯತ್‌ ಕೈಗೆತ್ತಿಕೊಳ್ಳಲಿದೆ. ಚುನಾವಣೆ ಮತ್ತು ನೀತಿಸಂಹಿತೆಯ ಕಾರಣದಿಂದ ಮುಂದೂಡಲ್ಪಟ್ಟಿದೆ. ಅವಶ್ಯ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರೈಸಲಾಗುವುದು.
– ಮಾಲಿನಿ, ಮುಖ್ಯಾಧಿಕಾರಿ, ವಿಟ್ಲ ಪಟ್ಟಣ ಪಂಚಾಯತ್‌

— ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next