Advertisement
ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯಾದ ಕಾಶಿ ಕಾರಿಡಾರ್‌ಗೆ ರಾಜ್ಯದ ಯಾತ್ರಿಗಳ ಭೇಟಿಗೆ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ 5000 ರೂ. ಸಹಾಯಧನ ಘೋಷಿಸಿದೆ. ಈ ಕುರಿತು ಮುಜರಾಯಿ ಇಲಾಖೆಯಿಂದ ಅಧಿಕೃತ ಆದೇಶ ಕೂಡ ಹೊರಡಿಸಲಾಗಿದೆ. ಇದಕ್ಕಾಗಿ 2022ನೇ ಸಾಲಿನ ಬಜೆಟ್‌ನಲ್ಲಿ 15 ಕೋಟಿ ರೂ. ಮೀಸಲಿಡಲಾಗಿದ್ದು, ಇದಕ್ಕಾಗಿ ಕೆಲವೊಂದು ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ. ಸಹಾಯಧನಕ್ಕೆ ಆಪೇಕ್ಷಿಸುವವರು ವಾರಣಾಸಿಯ ಹುನಾಮನ ಘಾಟ್‌ನಲ್ಲಿರುವ ರಾಜ್ಯ ಸರ್ಕಾರಿ ವಸತಿ ಗೃಹ(ರಾಜ್ಯ ಛತ್ರ) ವ್ಯವಸ್ಥಾಪಕರಿಂದ ಬಯೋಮೆಟ್ರಿಕ್ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ಈ ನಿಯಮ ಯಾತ್ರಿಗಳಿಗೆ ವಿಶ್ವನಾಥನ ದರ್ಶನಕ್ಕಿಂತ ದುಸ್ತರವಾಗಿದೆ. ಈ ಪ್ರಮಾಣ ಪತ್ರ ಪಡೆಯುವುದಕ್ಕಾಗಿಯೇ ಕಚೇರಿಗೆ ಅಲೆದಾಡಿದ ಯಾತ್ರಿಕರು ರೋಸಿ ಹೋಗಿ ವಾಪಸ್ಸಾಗಿರುವ ಘಟನೆ ನಡೆದಿವೆ.
Related Articles
Advertisement
ಜೂ.30ಕ್ಕಿಂತ ಮೊದಲು ಕಾಶಿ ಯಾತ್ರೆ ಕೈಗೊಂಡವರಿಗೆ ಈ ಬಯೋಮೆಟ್ರಿಕ್ ತಾಪತ್ರಯವಿರಲಿಲ್ಲ. ಕಾಶಿ ವಿಶ್ವನಾಥ ಸ್ವಾಮಿ ದರ್ಶನಕ್ಕೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಹಾಗೂ ಹಿಂದಿರುಗಿದ ಟಿಕೆಟ್, ಛಾಯಾಚಿತ್ರ, ಪೂಜಾ ರಶೀದಿ, ದೇವಾಲಯಕ್ಕೆ ತೆರಳಿ/ಮರಳಿದ ಬಗ್ಗೆ ಯಾವುದಾದರೂ ದಾಖಲೆಗಳನ್ನು ಖುದ್ದಾಗಿ ಬೆಂಗಳೂರಿನಲ್ಲಿರುವ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಚೇರಿಗೆ ಸಲ್ಲಿಬೇಕಾಗಿದ್ದು, 5000 ಸಾವಿರ ರೂ. ಸಹಾಯಧನ ಪಡೆಯಲು ಬೀದರ ಸೇರಿದಂತೆ ಇತರೆ ಜಿಲ್ಲೆಯವರು ಬೆಂಗಳೂರಿಗೆ ಹೋಗುವುದು ಸುಲಭವೇ ಎನ್ನುವ ಪ್ರಶ್ನೆಯಿದೆ. ಇನ್ನೂ ಜು.1ರ ನಂತರದಲ್ಲಿನ ಯಾತ್ರಿಗಳು ಅಲ್ಲಿನ ಬಯೋಮೆಟ್ರಿಕ್ ದೃಢೀಕರಣ ಪಡೆದು ಆನ್ ಲೈನ್/ಖುದ್ದಾಗಿ/ ನೋಂದಾಯಿತ ಅಂಚೆ ಮೂಲಕ ಆಯುಕ್ತರ ಕಚೇರಿಗೆ ಸಲ್ಲಿಸಬೇಕಾಗಿದೆ.
ವಾರಣಾಸಿಯ ಕರ್ನಾಟಕ ಛತ್ರದಲ್ಲಿರುವ ಅವ್ಯವಸ್ಥೆ ನೋಡಿದರೆ ಸರ್ಕಾರ ಕೇವಲ ಪ್ರಚಾರಕ್ಕೆ ಮಾಡಿದ ಯೋಜನೆ ಎನ್ನುವ ಭಾವನೆ ಮೂಡಿಸಿದೆ. ಕಚೇರಿಯಲ್ಲಿ ವ್ಯವಸ್ಥಾಪಕರಿಲ್ಲ, ಪ್ರಮಾಣ ಪತ್ರ ಕೇಳಿದರೆ ಎಲ್ಲವೂ ಅಧಿಕಾರಿಗಳಿಗೆ ಗೊತ್ತು ಎನ್ನುವ ಹಾರಿಕೆ ಉತ್ತರ. ವ್ಯವಸ್ಥಾಪಕರ ಬಗ್ಗೆ ಕೇಳಿದರೆ ತಿರುಪತಿಯ ಉಸ್ತುವಾರಿಯಿದೆ ಅಲ್ಲಿಗೆ ಹೋಗಿದ್ದಾರೆ ಎನ್ನುವ ಉತ್ತರ ಸಿಕ್ಕಿತು. ಅರ್ಧ ದಿನ ಕಳೆದರೂ ಬಯೋಮೆಟ್ರಿಕ್ ತೆಗೆದುಕೊಳ್ಳಲಿಲ್ಲ. ಸಚಿವ ಪ್ರಹ್ಲಾದ ಜೋಶಿ ಅವರ ಪತ್ರಕ್ಕೆ ಸೀಲು ಹಾಕಿ ಕೊಡುವಂತೆ ಕೇಳಿದರೂ ಅದು ಕ್ಯಾರೇ ಎನ್ನಲಿಲ್ಲ. –ಬಿ.ಎ.ಪಾಟೀಲ, ಅಧ್ಯಕ್ಷರು, ಸರ್ಕಾರಿ ನಿವೃತ್ತ
ನೌಕರರ ಮತ್ತು ಹಿರಿಯ ನಾಗರಿಕರ ಸಂಘ ಖಾಸಗಿ ಟ್ರಾವೆಲ್ಸ್‌ಗಳಲ್ಲಿ ಪ್ಯಾಕೇಜ್ ಮೂಲಕ ಯಾತ್ರೆ ಕೈಗೊಂಡಿರುತ್ತೇವೆ. ಯಾತ್ರೆಗೆ ಪೂರಕವಾಗಿ ಸಮಯ ಹಾಗೂ ದಿನಗಳನ್ನು ನಿಗದಿ ಮಾಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಬಯೋಮೆಟ್ರಿಕ್ ದೃಢೀಕರಣ ಸಾಧ್ಯವೇ. ಇದಕ್ಕಾಗಿ ಗಂಟೆಗಟ್ಟಲೆ ಸಾಲಾಗಿ ನಿಲ್ಲಬೇಕು. ಈ ಹಿಂದೆ ಹೋದವರಿಗೆ ಒಂದು ನಿಯಮ ನಂತರ ಮತ್ತೂಂದು ಸರಿಯಲ್ಲ. ಕಚೇರಿಯಲ್ಲಿ ನೋಡಿದಾಗ ಬಯೋಮೆಟ್ರಿಕ್ ವ್ಯವಸ್ಥೆ ಇರಲಿಲ್ಲ. ಯಾತ್ರೆ ಮಾಡಿದ್ದೇವೆ ಎನ್ನುವ ಕಾರಣಕ್ಕೆ ಛತ್ರದ ವ್ಯವಸ್ಥಾಪಕ ಖುರ್ಚಿ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದೇವೆ. ಮೊದಲು ಈ ಅವೈಜ್ಞಾನಿಕ ನಿಯಮ ತೆಗೆಯಬೇಕು. –ಈರಪ್ಪ ಕಾಡಪ್ಪನವರ, ಹುಬ್ಬಳ್ಳಿ ನಿವಾಸಿ
-ಹೇಮರಡ್ಡಿ ಸೈದಾಪುರ