Advertisement
ಕುಂದಾಪುರ: ಇಲ್ಲಿಯ ಸಂಗಮ್‌ನಿಂದ ಶಿರೂರುವರೆಗೆ ಸಿಗುವ ಪ್ರತಿ ಜಂಕ್ಷನ್‌ಗಳಲ್ಲೂ ಮೈಯೆಲ್ಲಾ ಕಣ್ಣಾಗಿಟ್ಟುಕೊಂಡು ಇರಲೇಬೇಕು. ಇಲ್ಲವಾದರೆ ಅಪಾಯವನ್ನು ಆಹ್ವಾನಿಸಿದಂತೆಯೇ.
ಈ ಎಲ್ಲ ಜಂಕ್ಷನ್‌ಗಳ ಕಾಮಗಾರಿ ಹೇಗಿದೆಯೆಂದರೆ, ಎಸಿ ಕಚೇರಿಯಲ್ಲಿ ಕುಳಿತು ಎಂಜಿನಿಯರ್ ಯೋಜನೆಯ ಕರಡು ನಕ್ಷೆ ತಯಾರಿಸಿದರು. ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನುಮೋದಿಸಿದರು. ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆ ಕಾಮಗಾರಿ ನಿರ್ವಹಿಸಿದರು. ಆದರೆ ಎಲ್ಲೂ ಸಹ ಸ್ಥಳೀಯರ ಆದ್ಯತೆಯೇನು? ಅವರಿಗೆ ಈ ಕಾಮಗಾರಿಯಿಂದ ಆಗಬೇಕಾದ ಅನುಕೂಲವೇನು? ಒಂದುವೇಳೆ ನಮ್ಮ ಲೆಕ್ಕದಲ್ಲಿ ಕಾಮಗಾರಿ ನಿರ್ವಹಿಸಿದರೆ ಸ್ಥಳೀಯರಿಗೆ ಆಗುವ ಸಮಸ್ಯೆಯೇನು? ಇದ್ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದಿರುವುದು ಜಂಕ್ಷನ್‌ಗಳ ಸಮಸ್ಯೆಯಿಂದಲೇ ಸ್ಪಷ್ಟವಾಗುತ್ತಿದೆ.
Related Articles
ಆನಗಳ್ಳಿಯಿಂದ ಕುಂದಾಪುರ ನಗರಕ್ಕೆ ಹೋಗಬೇಕಾದರೆ ಅಥವಾ ಚಿಕನ್‌ಸಾಲ್ ರಸ್ತೆ ಯಿಂದ ಆನಗಳ್ಳಿಗೆ ಸಂಚರಿಸಬೇಕಾದರೆ ಸಂಗಮ್ ಬಳಿ ವಾಹನ ಚಾಲಕರು ದೊಡ್ಡ ಸಾಹಸವೇ ಮಾಡಬೇಕು. ಎಲ್ಲಿಂದ ಹೇಗೆ ಯಾವ ವಾಹನ ಬರುತ್ತದೋ ತಿಳಿಯದು. ಇನ್ನು ಹೆದ್ದಾರಿ ದಾಟುವುದಂತೂ ಸಾಧ್ಯವೇ ಇಲ್ಲ. ಈ ಜಂಕ್ಷನ್‌ನಲ್ಲಿ ಪ್ರಮುಖವಾಗಿ ಬಸ್ ಬೇ ಇರಬೇಕಿತ್ತು, ಅದೇ ಇಲ್ಲ. ಹಾಗಾಗಿ ಬಸ್‌ಗಳೆಲ್ಲ ಹೆದ್ದಾರಿಯಲ್ಲೇ ನಿಲ್ಲುತ್ತವೆ. ಇದರಿಂದ ಟ್ರಾಫಿಕ್ ಜಾಮ್ ಆಗುತ್ತದೆ. ಅದರೊಂದಿಗೆ ಹೆದ್ದಾರಿಗೆ ಹೊಂದಿಕೊಂಡೇ ಖಾಸಗಿ ಕಾಲೇಜು, ಆಸ್ಪತ್ರೆಗಳಿವೆ. ಇಲ್ಲಿ ಜನಸಂದಣಿ ಹೆಚ್ಚು. ಅವರೆಲ್ಲರೂ ಅತಿ ಪ್ರಯಾಸದಿಂದ ಸಂಚರಿಸುವಂತಾಗಿದೆ.
Advertisement
ಎರಡು ಹೆಜ್ಜೆಯ ಬ್ಯಾಂಕಿಗೆ ಮೂರೂವರೆ ಕಿ.ಮೀ. ಸುತ್ತಬೇಕುಹೆಮ್ಮಾಡಿಯ ಜಂಕ್ಷನ್‌ನ ಕಥೆ ಬೇರೆಯದ್ದೇ ಆಗಿದೆ. ಇಲ್ಲಿ ಬಸ್ ಬೇ ಕಲ್ಪಿಸಲಾಗಿದೆ. ಆದರೆ ಬೇರಾವುದೇ ಕೆಲಸ ಆಗಿಲ್ಲ. ಬಸ್ಸಿಗಾಗಿ ಕಾಯುವವರೂ ಸಹ ಹೆದ್ದಾರಿಯಲ್ಲೇ ನಿಲ್ಲಬೇಕು. ಇಲ್ಲಿರುವುದು ಒಂದೇ ಒಂದು ರಾಷ್ಟ್ರೀಕೃತ ಬ್ಯಾಂಕ್. ಅಲ್ಲಿಗೆ ಹೋಗಬೇಕಾದರೆ ಜನರು ಸುಮಾರು ಮೂರೂವರೆ ಕಿ.ಮೀ. ದೂರದ ತಲ್ಲೂರಿಗೆ ಹೋಗಿ ಬರಬೇಕು. ಇಲ್ಲದಿದ್ದರೆ ಜಂಕ್ಷನ್‌ನಲ್ಲಿ ವಾಹನವಿಟ್ಟು, ನಡೆದೇ ಹೋಗಬೇಕು. ಕೊಲ್ಲೂರು ಕಡೆ ಹಾಗೂ ಹೆಮ್ಮಾಡಿ ಪಂಚಾಯತ್ ಕಡೆಯಿಂದ ಇಳಿಜಾರು ಆಗಿದ್ದು, ಎರಡೂ ಕಡೆಗಳ ಒಳ ರಸ್ತೆಗಳಲ್ಲಿ ವೇಗ ನಿಯಂತ್ರಕಗಳಿಲ್ಲದೆ ವಾಹನಗಳು ಒಮ್ಮೆಗೆ ಹೆದ್ದಾರಿಗೆ ನುಗ್ಗುವ ಸ್ಥಿತಿಯೂ ಇದೆ. ಹಾಗಾಗಿ ನಡೆದು ಹೋಗುವುದೂ ದುಬಾರಿ ಎಂಬಂತಾಗಿದೆ. ಬೈಂದೂರು ಹೊಸ ಬಸ್ ನಿಲ್ದಾಣ ಜಂಕ್ಷನ್
ಬೈಂದೂರಿನ ಹೊಸ ಬಸ್ ನಿಲ್ದಾಣ ಸಮೀಪದ ಡಿವೈಡರ್ ಕ್ರಾಸಿಂಗ್ ಸಹ ಅವೈಜ್ಞಾನಿಕ ಹಾಗೂ ಅಪಾಯಕಾರಿಯಾಗಿದೆ. ತಾಲೂಕು ಕೇಂದ್ರವಾಗಿರುವುದರಿಂದ ಇಲ್ಲಿ ಅನೇಕ ಸರಕಾರಿ ಕಚೇರಿಗಳು, ಶಾಲಾ- ಕಾಲೇಜುಗಳು, ರೈಲು ನಿಲ್ದಾಣ ಸಂಪರ್ಕ ಬರುವುದರಿಂದ ನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ರಸ್ತೆ ದಾಟುವುದು ತೀರಾ ಕಷ್ಟವಾಗಿದೆ. ಇದರೊಂದಿಗೆ ನಾವುಂದ, ಅರೆಹೊಳೆ ಕ್ರಾಸ್, ಕಂಬದಕೋಣೆ, ಉಪ್ಪುಂದ, ಯಡ್ತರೆ (ಕೊಲ್ಲೂರು ಕ್ರಾಸ್) ಬಳಿಯೂ ಸಮರ್ಪಕ ವ್ಯವಸ್ಥೆಯಿಲ್ಲ. ಆಗಬೇಕಾದದ್ದು ಏನು?
ಬಹಳ ಮುಖ್ಯವಾಗಿ ಜಂಕ್ಷನ್‌ಗಳಲ್ಲಿ ವೇಗ ನಿಯಂತ್ರಕಗಳನ್ನು (ವಾಹನಗಳು ಬರುವ ಎಲ್ಲ ಬದಿಯಲ್ಲಿ)ಅಳವಡಿಸಬೇಕು. ಜಂಕ್ಷನ್ ನ ಎಲ್ಲ ಬದಿಗಳಲ್ಲೂ ಅನತಿ ದೂರದಲ್ಲೇ ಸೂಚನಾ ಫಲಕಗಳನ್ನು ಹಾಕಬೇಕು. ಅಗತ್ಯವಾಗಿ ಬಸ್ ಬೇ ಗಳನ್ನು ಒದಗಿಸಿ ಬಸ್ ನಿಲುಗಡೆಯನ್ನು ಅದರಲ್ಲಿ ಕಡ್ಡಾಯಗೊಳಿಸಬೇಕು. ಪ್ರತಿ ಜಂಕ್ಷನ್‌ನಲ್ಲೂ ಸರ್ವೀಸ್ ರೋಡ್ ಕಡ್ಡಾಯವಾಗಿ ನೀಡಬೇಕು. ತ್ರಾಸಿ: ಅಪಘಾತದ ತಾಣ
ತ್ರಾಸಿ ಜಂಕ್ಷನ್ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಪಘಾತದ ತಾಣವಾಗಿ ಮಾರ್ಪಟ್ಟಿದೆ. ಮೊವಾಡಿಯಿಂದ ಗಂಗೊಳ್ಳಿ ಕಡೆಗೆ ಹೋಗಬೇಕಾದರೆ ಪ್ರಯಾಸಪಡಲೇಬೇಕು. ಹೆದ್ದಾರಿ ಕ್ರಾಸ್ ಮಾಡುವಾಗ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಬಸ್‌ಗಳು ಹೆದ್ದಾರಿಯಲ್ಲೇ ನಿಲ್ಲುತ್ತಿವೆೆ. ಒಂದು ಕಡೆ ನಿಲ್ದಾಣವಿದೆ. ಇನ್ನೊಂದು ಕಡೆ ಬಸ್ ನಿಲ್ದಾಣವಿಲ್ಲ. ಮುಳ್ಳಿಕಟ್ಟೆ ಜಂಕ್ಷನ್ ಕಥೆಯೂ ಇದೇ. ಗಂಗೊಳ್ಳಿ, ಆಲೂರು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಇದಾಗಿದ್ದರೂ ಸಮರ್ಪಕ ವ್ಯವಸ್ಥೆ ಇಲ್ಲಿಲ್ಲ. ಆಲೂರು ಕಡೆಯಿಂದ ಬರುವ ರಸ್ತೆ ಕೆಳ ಮಟ್ಟದಲ್ಲಿದ್ದು, ಹೆದ್ದಾರಿಗೆ ಬಂದು ಗಂಗೊಳ್ಳಿಗೆ ಹೋಗಬೇಕಾದರೆ ದೊಡ್ಡ ಸಾಹಸವೇ ಮಾಡಬೇಕಿದೆ. ತಲ್ಲೂರು: ಘನ ವಾಹನ ತಿರುಗುವುದೇ ಇಲ್ಲ
ಕುಂದಾಪುರ, ಬೈಂದೂರು, ಕೊಲ್ಲೂರು, ಹಟ್ಟಿಯಂಗಡಿ, ಉಪ್ಪಿನಕುದ್ರು ಊರುಗಳನ್ನು ಸಂಧಿಸುವ ಪ್ರಮುಖ ಜಂಕ್ಷನ್ ತಲ್ಲೂರು. ಇಲ್ಲಿ ನಿರ್ಮಿಸಿರುವ ಜಂಕ್ಷನ್ ಹೇಗಿದೆಯೆಂದರೆ, ಕುಂದಾಪುರದಿಂದ ಬಂದ ಘನ ವಾಹನ, ಟ್ರಕ್, ಕಂಟೈನರ್‌ಗಳು ಹಟ್ಟಿಯಂಗಡಿ, ನೇರಳಕಟ್ಟೆ ಕಡೆಗೆ ತಿರುಗುವುದೇ ಕಷ್ಟ. ಉಪ್ಪಿನಕುದ್ರುವಿನಿಂದ ಬಂದ ಬಸ್ ಕುಂದಾಪುರಕ್ಕೆ ಹೆದ್ದಾರಿ ಮಧ್ಯೆಯೇ ತಿರುಗಿ ಹೋಗಬೇಕಿದೆ. ಪ್ರಮುಖ ಜಂಕ್ಷನ್ ಆಗಿದ್ದು, ಯಾವುದೇ ಸೌಲಭ್ಯವೂ ಇಲ್ಲ. – ಪ್ರಶಾಂತ್ ಪಾದೆ