Advertisement

ಜನಸಂಖ್ಯೆ ಸ್ಫೋಟದಿಂದ ಸಮಸ್ಯೆ ಹೆಚ್ಚಳ

11:10 AM Jul 13, 2019 | Suhan S |

ಹಾವೇರಿ: ಜನಸಂಖ್ಯೆ ನಿಯಂತ್ರಣ ಸಾಧ್ಯವಾಗದಿದ್ದರೆ ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಗಂಭೀರವಾಗಲಿವೆ ಎಂದು ಜಿಪಂ ಸಿಇಒ ಕೆ. ಲೀಲಾವತಿ ಹೇಳಿದರು.

Advertisement

ವಿಶ್ವ ಜನಸಂಖ್ಯೆ ದಿನಾಚರಣೆ ಅಂಗವಾಗಿ ನಗರದ ಹುಕ್ಕೇರಿ ಮಠದ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜನಸಂಖ್ಯಾ ಬೆಳವಣಿಗೆಯಲ್ಲಿ ಜಗತ್ತಿನ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ 121 ಕೋಟಿಗೂ ಅಧಿಕ ಜನರಿದ್ದಾರೆ. ಪ್ರಸ್ತುತ ದೇಶದ ಭೂ ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಹೋಲಿಸಿದರೆ ಭವಿಷ್ಯದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗಬಹುದು. ಆರ್ಥಿಕ ಮತ್ತು ಸಾಮಾಜಿಕ ದುಷ್ಪರಿಣಾಮ ದೇಶ ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌. ದೇವರಾಜ ಪ್ರಾಸ್ತಾವಿಕ ಮಾತನಾಡಿ, 2011ರ ಜನಗಣತಿ ಆಧಾರದ ಮೇಲೆ ವಿಶ್ವದ ಜನಸಂಖ್ಯೆ 770 ಕೋಟಿ. ಇದರಲ್ಲಿ ಭಾರತದ ಪಾಲು 121 ಕೋಟಿಯಾಗಿದೆ. ದೇಶದ ಜನಸಂಖ್ಯೆ ಬೆಳವಣಿಗೆ ಹೀಗೆ ಮುಂದುವರೆದರೆ 2024ರ ವೇಳೆಗೆ ಜನಸಂಖ್ಯಾ ಬೆಳವಣಿಗೆಯಲ್ಲಿ ಭಾರತ ಮೊದಲ ಸ್ಥಾನ ಪಡೆಯಲಿದೆ. ಇದರಿಂದ ಉಲ್ಬಣವಾಗುವ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ದುಷ್ಪರಿಣಾಮ ತಡೆಯಲು, ಜನಸಂಖ್ಯೆ ನಿಯಂತ್ರಣಕ್ಕೆ ಇಂದಿನಿಂದಲೇ ಮುಂದಾಗಬೇಕು ಎಂದು ವಿವರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ, ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ ಎಂಬ ಘೋಷಣೆಯೊಂದಿಗೆ ಜಿಲ್ಲಾಸ್ಪತ್ರೆ ಆವರಣದಿಂದ ಹಮ್ಮಿಕೊಂಡ ಬೃಹತ್‌ ಜಾಗೃತಿ ಜಾಥಾಕ್ಕೆ ಹುಕ್ಕೇರಿಮಠದ ಸದಾಶಿವ ಶ್ರೀ ಹಾಗೂ ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ ಚಾಲನೆ ನೀಡಿದರು.

ಸುಧಾ ಎಚ್.ಸಂಗಾಪುರ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಬಸಪ್ಪ ದುಗ್ಗತ್ತಿ, ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಸವಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರಸ್ವಾಮಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಎಂ.ಜಯಾನಂದ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಲೇಶ ಎನ್‌., ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಸುಹೀಲ್ ಹರವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next