Advertisement

ಸಾರ್ಕ್‌ ಒಕ್ಕೂಟದಲ್ಲಿ ಸಮಸ್ಯೆ, ಬಿಮ್‌ಸ್ಟೆಕ್‌ಗೆ ಅವಕಾಶ: ಜೈಶಂಕರ್‌

11:33 AM Jun 08, 2019 | sudhir |

ನವದೆಹಲಿ: ಪಾಕಿಸ್ತಾನವನ್ನು ಪರೋಕ್ಷವಾಗಿ ಉಲ್ಲೇಖೀಸಿ ಮಾತನಾಡಿದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಸಾರ್ಕ್‌ ಒಕ್ಕೂಟದಲ್ಲಿ ಕೆಲವು ಸಮಸ್ಯೆಗಳಿವೆ. ಈ ಸಮಸ್ಯೆಗಳು ಎಲ್ಲರಿಗೂ ಗೊತ್ತಿರುವಂಥದ್ದು. ಭಯೋತ್ಪಾದನೆ ಸಮಸ್ಯೆಯನ್ನು ಹೊರತುಪಡಿಸಿದರೂ, ಸಂಪರ್ಕ ಹಾಗೂ ವ್ಯಾಪಾರ ಸಮಸ್ಯೆಗಳೂ ಇವೆ. ಆದರೆ ಬಿಮ್‌ಸ್ಟೆಕ್‌ನಲ್ಲಿ ಅವಕಾಶಗಳಿವೆ ಎಂದಿದ್ದಾರೆ.

Advertisement

ಸಾರ್ಕ್‌ನಲ್ಲಿ ಪಾಕಿಸ್ತಾನವೂ ಸದಸ್ಯತ್ವ ಹೊಂದಿದ್ದು, ಭಯೋತ್ಪಾದನೆ ಸಮಸ್ಯೆಯಿಂದಾಗಿ ಪಾಕ್‌ ಜೊತೆಗೆ ಭಾರತ ಯಾವ ಸಂಬಂಧವನ್ನೂ ಸಾಧಿಸಲಾಗುತ್ತಿಲ್ಲ. ಕಳೆದ ಬಾರಿ ಸಾರ್ಕ್‌ ದೇಶಗಳ ನಾಯಕರನ್ನು ಪ್ರಧಾನಿ ಮೋದಿ ಪ್ರಮಾಣ ವಚನಕ್ಕೆ ಆಹ್ವಾನಿಸಲಾಗಿತ್ತು. ಅದರಂತೆ ಪಾಕಿಸ್ತಾನದಲ್ಲಿ ಆಗ ಪ್ರಧಾನಿಯಾಗಿದ್ದ ನವಾಜ್‌ ಷರೀಫ್ ಆಗಮಿಸಿದ್ದರು.

ಸಾರ್ಕ್‌ನಲ್ಲಿ ಸಮಸ್ಯೆ ಇರುವ ಕಾರಣಕ್ಕೇ ನಾವು ಬಿಮ್‌ಸ್ಟೆಕ್‌ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಸಾರ್ಕ್‌ನಲ್ಲಿರುವ ಪಾಕಿಸ್ತಾನವೊಂದನ್ನು ಬಿಟ್ಟು, ಇತರ ಆರು ದೇಶಗಳು ಈ ಬಿಮ್‌ಸ್ಟೆಕ್‌ನಲ್ಲಿ ಸದಸ್ಯತ್ವ ಹೊಂದಿವೆ. ಬಿಮ್‌ಸ್ಟೆಕ್‌ ದೇಶಗಳಲ್ಲಿ ಶಕ್ತಿ, ಸಾಧ್ಯತೆ ಮತ್ತು ಉತ್ತಮ ಮನಸ್ಥಿತಿ ಇವೆ. ಬಿಮ್‌ಸ್ಟೆಕ್‌ ಎಂಬುದು ಬಂಗಾಳಕೊಲ್ಲಿ ಕರಾವಳಿಯಲ್ಲಿರುವ ಏಳು ದೇಶಗಳ ಒಕ್ಕೂಟವಾಗಿದೆ. ಬಾಂಗ್ಲಾದೇಶ, ಭೂತಾನ್‌, ಭಾರತ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್‌ ಮತ್ತು ಥಾಯ್ಲೆಂಡ್‌ ಈ ಒಕ್ಕೂಟದಲ್ಲಿವೆ.

ನಾವು ಪ್ರೋತ್ಸಾಹದಾಯಕ ಸಹಕಾರವನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ಉದಾರ ನೀತಿಯನ್ನು ಅನುಸರಿಸಬೇಕು. ವಿದೇಶಗಳಿಗೆ ಸಾಲ ನೀಡುವುದು, ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದರಿಂದ ಭಾರತದಲ್ಲಿ ಆರ್ಥಿಕ ಚಟುವಟಿಕೆ ಸುಧಾರಿಸಲಿದೆ ಎಂದು ಅವರು ಹೇಳಿದ್ದಾರೆ.

ಭೂತಾನ್‌ಗೆ ಜೈಶಂಕರ್‌: ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಇದೇ ಮೊದಲ ಬಾರಿಗೆ ಜೈಶಂಕರ್‌ ಭೂತಾನ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ಇವರು ಭೂತಾನ್‌ಗೆ ತೆರಳಲಿದ್ದು, ಅಲ್ಲಿ ಪ್ರಧಾನಿ ಲೋಟೆ ಶೆರಿಂಗ್‌ರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೇ, ಅಲ್ಲಿನ ವಿದೇಶಾಂಗ ಸಚಿವ ತಂಡಿ ದೋರ್ಜಿಯವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next