ಲಕ್ಚ್ಮೇಶ್ವರ: ಪಟ್ಟಣದ ಪುರಸಭೆಯ 16ನೇ ವಾರ್ಡ್ ವ್ಯಾಪ್ತಿಗೊಳಪಡುವ ರಂಭಾಪುರಿ ಆಶ್ರಯ ಪ್ಲಾಟ್‌ನಲ್ಲಿ ಮೂಲಸೌಲಭ್ಯವಿಲ್ಲದೇ ಜನ ಪರದಾಡುವಂತಾಗಿದೆ.
ಬಡಾವಣೆಯಲ್ಲಿ ಬಡ ಮತ್ತು ಕೂಲಿಕಾರರ 150ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿವೆ. ಆದರೆ 25 ವರ್ಷ ಕಳೆದರೂ ಈ ಬಡಾವಣೆಯಲ್ಲಿ ಮೂಲ ಸೌಲಭ್ಯಗಳಿಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮೂಲ ನಕ್ಷೆ ಕಡೆಗಣಿಸಿ ರಸ್ತೆ, ಚರಂಡಿಗಳ ಜಾಗದ ಮೇಲೆಯೇ ಮನೆ ನಿರ್ಮಿಸಿಕೊಂಡಿದ್ದರಿಂದ ಈಗ ಚರಂಡಿ, ರಸ್ತೆಗಳದ್ದೇ ಸಮಸ್ಯೆಯಾಗಿದೆ. ಇದರಿಂದಾಗಿ ಬಡಾವಣೆಯ ನೀರು ಎಲ್ಲೆಂದರಲ್ಲಿ ಹರಿದು ತಗ್ಗು ಪ್ರದೇಶವೊಂದಲ್ಲಿ ನಿಲ್ಲುವುದರಿಂದ ಇಡೀ ಪ್ರದೇಶ ಕೊಳಚೆಮಯವಾಗಿದೆ.
ಸಂಚಾರಕ್ಕೆ ಬಳಸುತ್ತಿರುವ ರಸ್ತೆಯೇ ಮೇಲೆ ನೀರು ನಿಂತು ಕಸ ಬೆಳೆದು ಸೊಳ್ಳೆ, ವಿಷಜಂತುಗಳು, ಹಂದಿಗಳ ತಾಣವಾಗಿ ಅನಾರೋಗ್ಯದ ತವರಾಗಿದೆ. ಹೊರವಲಯದಲ್ಲಿರುವ ಈ ಬಡಾವಣೆ ಪುರಸಭೆಯ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿದೆ. ಸ್ವಚ್ಛತೆ ಬಗ್ಗೆ ಇಲ್ಲಿನ ನಿವಾಸಿಗರು ದೂರಿದಾಗ ವರ್ಷದಲ್ಲಿ ಯಾವಾಗಲಾದರೊಮ್ಮೆ ಕಾಟಾಚಾರಕ್ಕೆಂಬಂತೆ ಬಂದು ಸ್ವತ್ಛತೆ ಶಾಸ್ತ್ರ ಮಾಡುತ್ತಾರೆ. ಮಳೆಗಾಲದಲ್ಲಂತೂ ಇಲ್ಲಿನ ಜನರ ಗೋಳು ಹೇಳತೀರದು. 2000ದಷ್ಟು ಜನಸಂಖ್ಯೆ ಹೊಂದಿದ್ದರೂ ಸಮರ್ಪಕ ಕುಡಿಯುವ ನೀರು, ಬೀದಿ ದೀಪ, ಸಾರ್ವಜನಿಕ ಶೌಚಾಲಯ, ಅಂಗನವಾಡಿ, ಆರೋಗ್ಯ ಸೇವೆ, ಬಸ್ ತಂಗುದಾಣ, ಪಡಿತರ, ಸಾರಿಗೆ ಹೀಗೆ ಹತ್ತಾರು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. 6 ವರ್ಷಗಳ ಹಿಂದೆ ನೀರು ಸರಬರಾಜಿಗಾಗಿ ನಿರ್ಮಿಸಿದ ಒಂದು ನೀರಿನ ತೊಟ್ಟಿಗೆ ಇದುವರೆಗೂ ಹನಿ ನೀರು ಪೂರೈಕೆಯಾಗದೇ ಹೆಸರಿಗೆ ಮಾತ್ರ ಎನ್ನುವಂತಾಗಿದೆ.
ಬಡಾವಣೆಯ ಸುತ್ತಲೂ ಅಪಾರ ಪ್ರಮಾಣದ ಜಾಲಿಕಂಟಿ ಬೆಳೆದು ಜನರು ಹಗಲು ಹೊತ್ತಿನಲ್ಲೂ ವಿಷಜಂತುಗಳ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಮತ್ತು ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಆಶ್ವಾಸನೆ ಕೊಟ್ಟು ಹೋಗುವ ಜನಪ್ರತಿನಿಧಿಗಳು ಮತ್ತೆ ಇತ್ತ ತಿರುಗಿಯೂ ನೋಡುವುದಿಲ್ಲ ಎಂದು ಇಲ್ಲಿನ ನಿವಾಸಿಗರಾದ ಯಲ್ಲಪ್ಪ ಕೋರದಾಳ, ಮಂಜಪ್ಪ ಮಿಳ್ಳಿ, ಸಂತೋಷ ಸರ್ವದೆ, ಚನ್ನಪ್ಪ ಧರಮಂತರ ಅಸಮಾಧಾನ ವ್ಯಕ್ತಪಡಿಸುತ್ತಾರೆ.