ದೊಡ್ಡಬಳ್ಳಾಪುರ: ರಾಗಿ ಖರೀದಿಗೆ ಮೇ 6ರಿಂದ ಮತ್ತೆ ನೋಂದಣಿ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದ ಹಿನ್ನೆಲೆ, ನಗರದ ಎಪಿಎಂಸಿ ಆವರಣದಲ್ಲಿನ ರಾಗಿ ಖರೀದಿ ಕೇಂದ್ರದ ಮುಂದೆ ಜಮಾಯಿಸಿದ್ದ ರೈತರಿಗೆ ಸರ್ಕಾರದ ಯಾವುದೇ ಆದೇಶ ಬಂದಿಲ್ಲ ಎನ್ನುವ ಅಧಿಕಾರಿಗಳ ಉತ್ತರದಿಂದ ನಿರಾಸೆಯುಂಟಾಗಿದ್ದು, ಸರ್ಕಾರದ ಬೇಜವಾಬ್ದಾರಿ ನಡವಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಹೆಸರು ನೋಂದಣಿ ಮಾಡಿಸಲು ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ನಗರದ ಎಪಿಎಂಸಿ ಆವರಣದಲ್ಲಿ ಕಾದು ಕುಳಿದ್ದ ರೈತರಿಗೆ ಏ.26ರಂದು ಎರಡನೇ ಬಾರಿಗೆ 1.15 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಸರ್ಕಾರ ನೀಡಿದ್ದ ಅನುಮತಿ ಎರಡೇ ದಿನದಲ್ಲಿ ಮುಕ್ತಾಯವಾಗಿತ್ತು. ಇದರಿಂದ ರೈತರು ರಸ್ತೆ ತಡೆ ನಡೆಸಿ ಮತ್ತಷ್ಟು ರಾಗಿ ಖರೀದಿಗೆ ಆಗ್ರಹಿಸಿದ್ದರು. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇ 6ರಿಂದ ಮತ್ತೆ ರಾಗಿ ಖರೀದಿಗೆ ನೋಂದಣಿ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆ, ಶುಕ್ರವಾರ ಬೆಳಗಿನ ಜಾವದಿಂದಲೇ ರೈತರು ಖರೀದಿ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿದ್ದರು.
ಮಾಧ್ಯಮಗಳಲ್ಲಿ ವರದಿ: ಮುಖ್ಯಮಂತ್ರಿಗಳು ರೈತರಿಂದ 2 ಲಕ್ಷ ಟನ್ ರಾಗಿ ಹೆಚ್ಚುವರಿಯಾಗಿ ಖರೀದಿಸಲು ಆದೇಶ ಹೊರಡಿಸಲಾಗಿದೆ ಎಂದು ಗುರುವಾರ ಹೇಳಿದ್ದು, ರಾಜ್ಯದಲ್ಲಿ ರಾಗಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಶುಕ್ರವಾರದಿಂದಲೇ ನೋಂದಣಿ ಆರಂಭಿಸಲು ಆದೇಶ ನೀಡಲಾಗಿದೆ. ನೋಂದಣಿಯ ಬಳಿಕ ಖರೀದಿ ಆರಂಭವಾಗಲಿದೆ ಎಂದು ತಿಳಿಸಿದ್ದು, ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಕುರಿತಂತೆ ನಗರದ ಎಪಿಎಂಸಿ ನೋಂದಣಿ ಕೇಂದ್ರದ ಬಳಿ ಬೆಳಗಿನ ಜಾವದಿಂದಲೇ 300ಕ್ಕೂ ಹೆಚ್ಚು ರೈತರು ಬಂದಿದ್ದಾರೆ. ಆದರೆ, ನೋಂದಣಿ ಪ್ರಕ್ರಿಯೆಗೆ ಆದೇಶ ಬಾರದ ಹಿನ್ನೆಲೆ, ಪೋರ್ಟಲ್ ಒಪನ್ ಆಗದ ಕಾರಣ ಅಧಿಕಾರಿಗಳು ಯಾವುದೇ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ನಂತರ ಸ್ಥಳಕ್ಕೆ ಶಾಸಕ ಟಿ. ವೆಂಕಟರಮಣಯ್ಯ, ತಹಶೀಲ್ದಾರ್ ಮೋಹನಕುಮಾರಿ, ಡಿವೈಎಸ್ಪಿ ನಾಗರಾಜ್, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿ ರಾಘವೇಂದ್ರ ಬಂದು ಸಭೆ ನಡೆಸಿದರು. ಸಭೆಯಲ್ಲಿ ರಾಗಿ ಖರೀದಿ ನೋಂದಣಿ ಯಾವ ಸಮಯದಲ್ಲಿ ಅವಕಾಶ ನೀಡುವುದೋ ಸ್ಪಷ್ಟ ಮಾಹಿತಿ ಇಲ್ಲದೆ ಇರುವುದಾಗಿ ಅಧಿಕಾರಿಗಳು ತಿಳಿಸಿದರು.
ಆದೇಶ ಬಂದು ಪೋರ್ಟಲ್ ತೆರೆದ ಕೂಡಲೇ ಉಂಟಾಗುವ ನೂಕುನುಗ್ಗಲು ತಡೆಗಟ್ಟಲು ನಾಲ್ಕು ಸೂತ್ರವನ್ನು ಜಾರಿಗೆ ತರಲು ಸಭೆಯಲ್ಲಿ ತೀರ್ಮಾನಿಸಲಾಯಿತು. ನೋಂದಣಿಗೆ ಸಹಕರಿಸಲು ಮನವಿ: ಸರ್ಕಾರದ ಆದೇಶದ ಅನ್ವಯ 4 ಎಕರೆ 39 ಗುಂಟೆ ಜಮೀನು ಒಳಗಿರುವ ರೈತರಿಂದ ಮಾತ್ರ ಖರೀದಿ. ಕಳೆದ ಸಲ ಕೂಪನ್ ಪಡೆದವರಿಗೆ ಪ್ರತ್ಯೇಕ ಸಾಲು. ಹೊಸದಾಗಿ ನೋಂದಣಿ ಚೀಟಿ ಪಡೆಯಲು ಬರುವವರಿಗೆ ಮತ್ತೂಂದು ಸಾಲು. ಈ ಮುಂಚೆ ರಾಗಿ ಖರೀದಿಗೆ ನೋಂದಣಿ ಮಾಡಿ ರಾಗಿ ಮಾರಿರುವವರಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಯಿತು. ಅಲ್ಲದೇ ನೋಂದಣಿ ಸಮಯ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಿಗದಿ ಮಾಡಿದ್ದು, ರೈತರು ವ್ಯವಸ್ಥಿತವಾಗಿ ನೋಂದಣಿಗೆ ಸಹಕರಿಸಲು ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಅಧಿಕಾರಿಗಳು ಮನವಿ ಮಾಡಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್, ಇನ್ಸ್‌ಪೆಕ್ಟರ್ ಗೋವಿಂದ್ ಇದ್ದರು.
ನೋಂದಣಿಗೆ ಆಹಾರ ನಿಗಮದ ವೆಬ್‌ಸೈಟ್ ಒಪನ್ ಆಗುತ್ತಿಲ್ಲ : ಬೆಳಗ್ಗೆ 10ಗಂಟೆಗೆ ಖರೀದಿ ಕೇಂದ್ರಕ್ಕೆ ಬಂದ ಅಧಿಕಾರಿಗಳು, ರಾಗಿ ಖರೀದಿ ಕುರಿತಂತೆ ಸರ್ಕಾರದಿಂದ ನಮಗೆ ಇನ್ನು ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಅಲ್ಲದೆ, ರೈತರ ಹೆಸರು ನೋಂದಣಿಗೆ ಆಹಾರ ನಿಗಮದ ವೆಬ್‌ಸೈಟ್ ಸಹ ಒಪನ್ ಆಗುತ್ತಿಲ್ಲ. ಹೀಗಾಗಿ, ನಾವು ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರು. ಆದರೂ, ಮಧ್ಯಾಹ್ನ 4ಗಂಟೆವರೆಗೂ ರೈತರು ರಾಗಿ ಖರೀದಿ ಕೇಂದ್ರದ ಬಳಿ ಕಾದು ಕುಳಿತಿದ್ದ ದೃಶ್ಯ ಕಂಡು ಬಂತು.