Advertisement

ದೀಪ ಉರಿಯದೆ ಸಂಚಾರಿಗಳಿಗೆ ಸಮಸ್ಯೆ; ಅಪಘಾತಗಳಿಗೂ ಕಾರಣ

11:14 PM Feb 08, 2020 | Sriram |

ಉಡುಪಿ: ಪರ್ಯಾಯ ಸಮಯದಲ್ಲಿ ನಗರಸಭೆಯ ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆ ಮಾಡಲಾಗಿದ್ದು, ನಗರದ ಒಳಭಾಗದಲ್ಲಿ ಸುಸ್ಥಿತಿಯಲ್ಲಿವೆ. ಆದರೆ ಕಲ್ಸಂಕದಿಂದ ಅಂಬಾಗಿಲು ರಸ್ತೆ, ಪೆರಂಪಳ್ಳಿ, ರಾಷ್ಟ್ರೀಯ ಹೆದ್ದಾರಿ ಮಾರ್ಗವಾದ ಅಂಬಾಗಿಲಿನಿಂದ- ಅಂಬಲಪಾಡಿವರೆಗೆ, ಕಿನ್ನಿಮೂಲ್ಕಿಯ ಕೆಲವು ಭಾಗದಲ್ಲಿ ಬೀದಿದೀಪಗಳು ಕೆಲಸ ಮಾಡದೆ ಇಲ್ಲಿನ ಪರಿಸರ ಕತ್ತಲಿನಲ್ಲಿದೆ.

Advertisement

ನಗರ ಸಭೆಯ ವ್ಯಾಪ್ತಿಯಲ್ಲಿ 17,800 ದೀಪಗಳಿವೆ. 3.93 ಲಕ್ಷ ಮೊತ್ತವನ್ನು ನಿರ್ವಹಣೆಗೆ ಕಳೆದ ಬಾರಿ ಗುತ್ತಿಗೆದಾರರಿಗೆ ನೀಡಲಾಗಿದೆ. ನಗರದ ಕೆಲಭಾಗದಲ್ಲಿ ದೀಪಗಳ ಅಳವಡಿಕೆ ಆಗದೆ ಬಾಕಿ ಉಳಿದಿದೆ. ಈ ಬಾರಿ ದೀಪಗಳ ನಿರ್ವಹಣೆಗೆಂದು 5 ಲಕ್ಷ 80 ಸಾವಿರ ಹಣವನ್ನು ಮೀಸಲಿಡಲಾಗಿತ್ತು.

ಕಲ್ಸಂಕ ಅಂಬಾಗಿಲು
ಕಲ್ಸಂಕ -ಅಂಬಾಗಿಲು ರಸ್ತೆಗಳಲ್ಲಿ ಬೀದಿ ದೀಪಗಳು ಹಲವು ತಿಂಗಳಿನಿಂದ ಉರಿಯುತ್ತಿಲ್ಲ. ಕೆಲವು ಕಡೆ ಬರೆ ಕಂಬಗಳು ಮಾತ್ರವಿದ್ದು ದೀಪಗಳೇ ಇಲ್ಲ. ದೀಪ ಇರುವಲ್ಲಿ ಅವು ಉರಿಯುತ್ತಿಲ್ಲ. ಇದರಿಂದ ಇಲ್ಲಿ ದಿನಂಪ್ರತಿ ಓಡಾಡುವ ನಿವಾಸಿಗಳು ಕತ್ತಲೆಯಲ್ಲೇ ಸಂಚರಿಸಬೇಕಾಗಿದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಪೆರಂಪಳ್ಳಿ -ಮಣಿಪಾಲ ರಸ್ತೆ
ಅಂಬಾಗಿಲಿನಿಂದ ಪೆರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ತೆರಳುವ ರಸ್ತೆಯಲ್ಲೂ ಇದೇ ಸ್ಥಿತಿ ಇದೆ. ಕಾಲೇಜು, ಆಸ್ಪತ್ರೆ, ಕೈಗಾರಿಕಾ ಪ್ರದೇಶಕ್ಕೆ ನೂರಾರು ವಾಹನಗಳು ಓಡಾಡುತ್ತವೆ. ರಾತ್ರಿ ಹೊತ್ತು ಈ ರಸ್ತೆಯಲ್ಲಿ ದೀಪಗಳ ಬೆಳಕು ಗೋಚರಿಸುತ್ತಿಲ್ಲ. ಕೆಲವು ಕೆಲಸ ಮಾಡುತ್ತಿಲ್ಲ. ಇದರಿಂದ ರಾತ್ರಿ ಓಡಾಡುವವರಿಗೆ ಸುರಕ್ಷತೆಯ ಭಯ ಆವರಿಸಿದೆ.

ಕತ್ತಲಲ್ಲಿ ರಾಷ್ಟ್ರೀಯ ಹೆದ್ದಾರಿ
ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ದಾರಿ ದೀಪಗಳ ಸಮಸ್ಯೆ, ಸಮಸ್ಯೆಯಾಗಿಯೇ ಉಳಿದಿದಿದೆ. ಅಂಬಾಗಿಲು ಜಂಕ್ಷನ್‌ನಿಂದ ಅಂಬಲಪಾಡಿವರೆಗೆ ಮುಂದೆ ಕಿನ್ನಿಮೂಲ್ಕಿಯ ಕೆಲವು ಭಾಗದ ರಾ.ಹೆದ್ದಾರಿಯಲ್ಲಿ ಕತ್ತಲು ಆವರಿಸಿದೆ. ಮತ್ತೆ ಕೆಲವು ಕಡೆ ದೀಪಗಳನ್ನೇ ಅಳವಡಿಸಿಲ್ಲ. ಇದರಿಂದ ಪಾದಚಾರಿ ಸೇರಿದಂತೆ ಈ ವ್ಯಾಪ್ತಿಯ ಬಸ್‌ ನಿಲ್ದಾಣದಲ್ಲಿ ಬಸ್‌ಗೆ ರಾತ್ರಿ ಹೊತ್ತು ಕಾಯುವ ಪ್ರಯಾಣಿಕರು ಕಷ್ಟಪಡಬೇಕಾಗಿದೆ. ವಾಹನ ಚಾಲಕರಿಗೂ ರಸ್ತೆಯ ಅಂದಾಜು ಸಿಗದೆ ಅನೇಕ ಅಪಘಾತಗಳು ಕೂಡ ಇಲ್ಲಿ ನಡೆದಿವೆ.

Advertisement

ಎನ್‌.ಎಚ್‌. 169ಎ
ಕುಂಜಿಬೆಟ್ಟುನಿಂದ ಮಣಿಪಾಲದವರೆಗೂ ಬೀದಿದೀಪಗಳು ಕಾಣ ಸಿಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಂಕ್ರೀಟ್‌ ಕೆಲಸ ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ ಬಳಿ ಪ್ರಗತಿಯಲ್ಲಿದೆ. ಆದರೆ ಉಳಿದ ಕಡೆ ಈಗಾಗಲೇ ರಸ್ತೆ ಕಾಮಗಾರಿ ಕೆಲಸ ಮುಗಿದಿದ್ದು , ದಾರಿದೀಪಗಳ ಅಳವಡಿಕೆ ಮಾತ್ರ ಇನ್ನು ಬಾಕಿ ಇದೆ. ರಾತ್ರಿ ಹೊತ್ತು ವಾಹನದಟ್ಟನೆ ಈ ಭಾಗದಲ್ಲಿ ಹೆಚ್ಚಿರುವುದರಿಂದ ಸಹ‌ಜವಾಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ವಾರದೊಳಗೆ ಅಳವಡಿಕೆ
ಕಲ್ಸಂಕ ಅಂಬಾಗಿಲು ಮಾರ್ಗದ ಕೆಲವು ಭಾಗದ ಬೀದಿದೀಪಗಳು ಉರಿಯುತ್ತಿಲ್ಲ ಎಂಬುವುದು ಗಮನಕ್ಕೆ ಬಂದಿದ್ದು, ಗುತ್ತಿಗೆದಾರರ ಗಮನಕ್ಕೂ ತರಲಾಗಿದೆ. ವಾರದೊಳಗೆ ಈ ಭಾಗಗಳಲ್ಲಿ ಬೀದಿ ದೀಪಗಳ ಅಳವಡಿ ಮಾಡಲಾಗುವುದು.
-ಆನಂದ ಕಲ್ಲೋಳಿಕರ್‌,ಪೌರಾಯುಕ್ತರು ನಗರಸಭೆ.

17,800 ದೀಪ
ನಗರ ಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಒಟ್ಟು 17,800 ಬೀದಿದೀಪಗಳಿವೆ. ಅದರಲ್ಲಿ 815 ಕಂಟ್ರೋಲಿಂಗ್‌ ಪಾಯಿಂಟ್‌ಗಳಿವೆ.

200 ಮಂದಿ ಸಹಿ
ಅಂಬಾಗಿಲಿನಿಂದ ಅಂಬಲಾಪಾಡಿ ವರೆಗೆ ರಾ.ಹೆದ್ದಾರಿಯಲ್ಲಿ ಬೀದಿ ದೀಪಗಳೆ ಇಲ್ಲ. ಇರುವಂತಹ ಕೆಲ ದೀಪಗಳ ಪೈಕಿ ಅವು ಉರಿಯುತ್ತಿಲ್ಲ. 2ವರ್ಷದ ಹಿಂದೆಯೇ 200 ಮಂದಿಯ ಸ್ಥಳೀಯರ ಸಹಿ ಪಡೆದು ಸಮಸ್ಯೆ ಬಗ್ಗೆ ನಗರ ಸಭೆಗೆ ದೂರು ನೀಡಲಾಗಿತ್ತು. ಬಳಿಕ ಅಧಿಕಾರಿಗಳು ಬಂದು ಪರಿಸ್ಥಿತಿ ಅವಲೋಕಿಸಿ ತೆರಳಿದ್ದು ಬಿಟ್ಟರೆ ಸಮಸ್ಯೆ ಪರಿಹಾರ ಕಂಡಿಲ್ಲ.
-ವಸಂತ್‌ ಅಮೀನ್‌ ನಿಟ್ಟೂರು, ಆಟೋ ಚಾಲಕರು

ಹೆಚ್ಚಿನ ಬೀದಿದೀಪದ ಆವಶ್ಯ
ಪೆರಂಪಳ್ಳಿ ಮಣಿಪಾಲ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಇಲ್ಲಿ ಯಾವುದೇ ರಿಫ್ಲೆಕ್ಟರ್‌ಗಳು ಕೂಡ ಇಲ್ಲ. ದೀಪಗಳು ಪ್ರಕಾಶ ಕಡಿಮೆ ಇರುವುದರಿಂದ ಚಾಲಕ, ಪಾದಚಾರಿ ಇಬ್ಬರಿಗೂ ಸಮಸ್ಯೆ ಉಂಟಾಗಿದೆ. ಹೆಚ್ಚಿನ ಕಡೆ ದೀಪಗಳು ಉರಿಯುತ್ತಿಲ್ಲ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್‌ ದೀಪಗಳ ಅಗತ್ಯವಿದೆ.
-ಸುಧಾಕರ್‌, ಸ್ಥಳೀಯರು

ಜಾಹೀರಾತು ಫ‌ಲಕಕ್ಕೆ ಮಾತ್ರ ಬೆಳಕು
ನಿಟ್ಟೂರ್‌ ಜಂಕ್ಷನ್‌ ಇಂದ ಕಲ್ಸಂಕದವರೆಗೂ ದಾರಿದೀಪಗಳು ಉರಿಯುತ್ತಿಲ್ಲ. ಕಂಬದ ಕೆಳಗೆ ಇರುವ ಜಾಹೀರಾತು ಫ‌ಲಕಗಳು ಮಾತ್ರ ಉರಿಯುತ್ತಿವೆ. ಇಲ್ಲಿ ಬೆಳಗ್ಗೆ ವಾಕಿಂಗ್‌ಗೆಂದು ತೆರಳುವ ಹಿರಿಯರಿಗೆ ಸಮಸ್ಯೆ ಆಗಿದೆ. ಈ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು ಪ್ರಯೋಜ ಮಾತ್ರ ಕಂಡಿಲ್ಲ.
-ಮನೋಜ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next