ಬನಹಟ್ಟಿ; ರಬಕವಿ ಬನಹಟ್ಟಿ ಅವಳಿನಗರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬನಹಟ್ಟಿ ನಗರದ ಘೋರಕನಾಥ ದೇವಸ್ಥಾನ ಅಕ್ಕಪಕ್ಕದ ಏರಿಯಾ, ಬನಹಟ್ಟಿ ದಾನಮ್ಮದೇವಿ ದೇವಸ್ಥಾನ ಹಿಂಬದಿಯ ಗಲ್ಲಿಗಳಲ್ಲಿ ನೀರಿನ ತೊಂದರೆ ತೀವ್ರವಾಗಿದ್ದು, ಅಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಕೊಡಲಾಗುತ್ತಿದೆ. ಟ್ಯಾಂಕರ್‌ಗಳಿಗೆ ಜನ ಮುಗಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ಸಾರ್ವಜನಿಕರು ಕೊಡ ನೀರಿಗೂ ರಾತ್ರಿಯೇ ಸರದಿಯಲ್ಲಿ ನಿಲ್ಲುವಂತಾಗಿದೆ. ಕೆಲವು ವಾರ್ಡ್‌ಗಳಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಕರೆ ತಂದು ನಾವು ನಿಮಗೇ ಮತ ಹಾಕಿದ್ದೇವೆ. ನಮಗೆ ನೀರು ಬೇಕು ಕೊಡಿ ಎಂದು ಕೇಳುತ್ತಿರುವ ಸನ್ನಿವೇಷಗಳನ್ನು ನಿತ್ಯ ಕಾಣುವಂತಾಗಿದೆ. ಸದಸ್ಯರು ನಗರಸಭೆ ಅಧಿಕಾರಿಗಳೊಂದಿಗೆ ನಿತ್ಯ ಸಂಪರ್ಕದಲ್ಲಿದ್ದುಕೊಂಡು ಸಮಸ್ಯೆ ಸರಿಪಡಿಸಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.
Advertisement
ಕಳೆದ ವಾರಕ್ಕೂ ಮತ್ತು ಈಗ ಹೋಲಿಸಿದರೆ ಅಂತರ್ಜಲ ಮಟ್ಟ ಖುಷಿದಿದೆ. ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಬೋರ್‌ವೆಲ್ಗಳಲ್ಲಿ ನೀರು ಬಾರದೆ ಹರಸಾಹಸ ಪಡುವಂತಾಗಿದೆ. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಸಮಸ್ಯೆ ಉಲ್ಬಣವಾಗುವ ಮುಂಚೆಯೇ ಟ್ಯಾಂಕ್‌ರಗಳ ಮೂಲಕ ನೀರು ಸರಬುರಾಜು ಮಾಡಲು ಅಧಿಕಾರಿಗಳಿಗೆ ಆದೇಶಿಸಿದ್ದರು. ಈಗ ನಗರಸಭೆಯವರು ಅತಿ ಹೆಚ್ಚು ಸಮಸ್ಯೆ ಇರುವ ಗುಡ್ಡದ ಪ್ರದೇಶಗಳ ಕೆಲವು ವಾರ್ಡ್‌ಗಳಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ.
ಟ್ಯಾಂಕರ್ ಯಾವಾಗ ಬರುತ್ತದೆಯೋ ತಿಳಿಯುವುದಿಲ್ಲ, ಅದಕ್ಕಾಗಿ ಬೆಳಗ್ಗೆ 5ಕ್ಕೆ ಕೊಡಗಳನ್ನು ಸರದಿಯಲ್ಲಿಟ್ಟು ಕಾಯುತ್ತ ಕುಳಿತುಕೊಳ್ಳಬೇಕು. ಮಧ್ಯಾಹ್ನ ಸುಡು ಬಿಸಿಲಿದ್ದರೂ ಮಕ್ಕಳು, ವೃದ್ಧರು ಕೊಡ ನೀರಿಗೂ ಪರಿತಪಿಸುವಂತಾಗಿದೆ. ಒಂದು ಏರಿಯಾಕ್ಕೆ ದಿನಕ್ಕೆ ಒಂದೇ ಟ್ಯಾಂಕರ್ ನೀರು ಕಳಿಸಿದರೆ ಸಾಲದು, ಎರಡು ಟ್ಯಾಂಕರ್ ಕಳಿಸಬೇಕು.•ರಾಜು ಜೋಡೆತ್ತಿನವರ, ಬನಹಟ್ಟಿ ನಿವಾಸಿ.
ನೀರಿನ ತೊಂದರೆಯಾಗದಂತೆ ಯೋಜನೆ ಹಾಕಿಕೊಂಡಿದ್ದೇವೆ. ಡಿಸಿಯವರ ಆದೇಶದ ಮೇರೆಗೆ ಸಿಬ್ಬಂದಿ ಕರೆದು ಯಾವ ಸ್ಥಳಗಳಲ್ಲಿ ನೀರಿನ ತೊಂದರೆ ಇದೆ ಎಂದು ಗಮನಿಸಿ ತುರ್ತಾಗಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಲ್ಲಿ ಚಿಕ್ಕ ಚಿಕ್ಕ ಟ್ಯಾಂಕರ್‌ಗಳನ್ನು ಅಳವಡಿಸಿ ಅದಕ್ಕೆ ಬೋರವೆಲ್ಗಳ ಸಂಪರ್ಕ ಕಲ್ಪಿಸಿ ಚಿಕ್ಕ ನಲ್ಲಿಗಳನ್ನು ಹಾಕಿ ನೀರು ಕೊಡಲಾಗುತ್ತಿದೆ. •ಆರ್.ಎಂ.ಕೊಡಗೆ, ಪೌರಾಯುಕ್ತರು ನಗರಸಭೆ ರಬಕವಿ ಬನಹಟ್ಟಿ.