ಚನ್ನಪಟ್ಟಣ: ದೀಪದ ಕೆಳಗೆ ಕತ್ತಲು ಎಂಬಂತೆ, ರೋಗಿಗಳನ್ನು ಗುಣಪಡಿಸುವ ವೈದ್ಯರು ಹಾಗೂ ಸಿಬ್ಬಂದಿ ವಾಸ ಮಾಡುವ ವಸತಿ ಗೃಹಗಳ ಬಳಿ ಅಶುಚಿತ್ವ ತಾಂಡವವಾಡುತ್ತಿದ್ದು, ಹೇಳುವವರು ಕೇಳುವವರು ಯಾರು ಇಲ್ಲದೆ ಶೋಚನೀಯ ಸ್ಥಿತಿಯನ್ನು ನಿವಾಸಿಗಳು ಎದುರಿಸುತ್ತಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿ ವರ್ಗ ವಾಸ ಮಾಡುವ ವಸತಿ ಗೃಹಗಳ ಸುತ್ತಮತ್ತಲಿನ ಪರಿಸ್ಥಿತಿ ಹಾಳು ಕೊಂಪೆಯ ತಾಗಿದ್ದು, ಕಲುಷಿತ ಪರಿಸರವನ್ನು ಅಣಕಿಸುವಂತಿದೆ. ವಸತಿ ಗೃಹಗಳ ಸುತ್ತಾ ಅಳೆತ್ತರಕ್ಕೆ ಬೆಳದಿರುವ ಗಿಡ ಗಂಟೆಗಳು, ವಿಷ ಜಂತುಗಳ ವಾಸಸ್ಥಾನ ಹಾಗೂ ಸಾರ್ವಜನಿಕ ಆಸ್ಪತ್ರೆಯ ಕಸ ಇದೇ ಸ್ಥಳದಲ್ಲಿ ರಾಶಿ ಬಿದ್ದಿದ್ದು, ಭೂತ ಬಂಗಲೆ ನೋಡಿದದಂತೆ ಭಾಸವಾಗುತ್ತದೆ.
ಭಯದ ವಾತಾವರಣ: ರೋಗಿಗಳ ಸೇವೆಯಲ್ಲಿ ನಿರತರಾಗುವ ವೈದ್ಯರು, ಶುಶ್ರೂಷಕಿ ಹಾಗೂ ಸಿಬ್ಬಂದಿವರ್ಗ ತಮ್ಮ ಮನೆಗೆಬರಬೇಕಾದರೆ ಬಹಳ ಎಚ್ಚರಿಕೆ ಯಿಂದ ಬರಬೇಕಾದ ಅನಿ ವಾರ್ಯತೆ ಹಾಗೂ ಎಚ್ಚರಿಕೆ ವಹಿಸ ಬೇಕಾಗಿದೆ. ಏಕೆಂದರೆ ಎಲ್ಲೆಂದರಲ್ಲಿ ಚೇಳು ಹಾವುಗಳು ಹಾಗೂ ಕಳ್ಳರು ಯಾವ ಸಮಯದಲ್ಲಿ ಅಕ್ರಮಣ ಮಾಡಬಹುದೋ ಎಂಬುದು ಇವರ ಭಯವಾಗಿದೆ.
ಕಳ್ಳರ ಹಾವಳಿ: ವಸತಿ ಗೃಹದ ಕಟ್ಟಡಗಳು ಹಾಳು ಕೊಂಪೆಯಾಗಿ ಪರಿವರ್ತನೆಯಾಗಿದ್ದು, ಅಲ್ಲಿನ ಸ್ಥಿತಿಯನ್ನು ನೋಡಿದರೆ, ಎಷ್ಟೋ ವರ್ಷಗಳಿಂದ ವಸತಿ ಗೃಹಗಳ ಬಾಗಲು ತಗೆಯಲಿಲ್ಲವೋ ಎನ್ನುವಂತಿವೆ. ಕೆಲ ತಿಂಗಳಿಂದ ವಸತಿ ಗೃಹ ಹಾಗೂ ಆಸ್ಪತ್ರೆಯ ಸುತ್ತಲೂ ವಿದ್ಯುತ್ ದೀಪಗಳಿಲ್ಲದೆ ರಾತ್ರಿ ವೇಳೆ ಕಗ್ಗತ್ತಲು ಆವರಿಸಿದರೂ, ಕೂಡ ಯಾರೂ ಕೂಡ ತಲೆ ಕೆಡಿಸಿಕೊಳ್ಳದೆ ಕತ್ತಲೆಯಲ್ಲೇ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ವಸತಿ ಗೃಹಗಳ ಭದ್ರತೆಗೆ ಯಾವುದೇ ರೀತಿಯ ಗೇಟ್ ಅಳವಡಿಸದಿರುವುದು ಕೂಡ ಹಲವಾರು ರೀತಿಯ ಸಮಸ್ಯೆಗಳಿಗೆ ಕಾರಣವಾಗಿದ್ದು, ಕೆಲ ದಿನಗಳ ಹಿಂದೆ ಸರ್ಕಾರಿ ಆ್ಯಂಬುಲೆನ್ಸ್‌ನಲ್ಲಿ ಉಪಕರಣಗಳು ಕಳ್ಳತನವಾಗಿವೆ.
ಸಮಸ್ಯಗೆ ಪರಿಹಾರ ಸಿಗುವುದೆ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ವತ್ಛತೆಯ ಟೆಂಡರ್ ಪಡೆದಿರುವವರಿಗೆ ಕೇವಲ ಆಸ್ಪತ್ರೆಯ ಸ್ವತ್ಛತೆಗೆ ಸೀಮಿತವೋ, ಇಲ್ಲಾ ವಸತಿ ಗೃಹಗಳ ಸ್ವಚ್ಚತೆಯು ಸೇರಿಲ್ಲವೋ ಎಂಬುದು ತಿಳಿಯದಾಗಿದೆ. ನಮ್ಮ ಸಮಸ್ಯೆಯನ್ನು ಕೇಳುವವರೂ ಯಾರು ಇಲ್ಲವೇ ಎಂದು ವಸತಿ ನಿಲಯದ ನಿವಾಸಿ ಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಪ್ರಭಾರಿ ಆರೋಗ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಮಹೇಂದ್ರಕುಮಾರ್ ಇತ್ತ ಗಮನ ಹರಿಸಿ ಅವ್ಯವಸ್ಥೆಯಿಂದ ಕೂಡಿರುವ ವಸತಿ ನಿಲಯದ ಸಮಸ್ಯೆ ಹಾಗೂ ಆಸ್ಪತ್ರೆ ಯನ್ನು ಆವರಿಸಿಕೊಂಡಿರುವ ಕಗ್ಗತ್ತಲನ್ನು ಹೋಗಲಾಡಿಸುವರೇ ಕಾದು ನೋಡಬೇಕಿದೆ.
-ಎಂ.ಶಿವಮಾದು.