Advertisement
ಉಡುಪಿ ಜಿಲ್ಲೆಯಲ್ಲಿ ಸುಮಾರು 12 ಸರಕಾರಿ ಪ್ರಥಮ ದರ್ಜೆ ಕಾಲೇಜು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 19 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. 2022-23ನೇ ಸಾಲಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪೀಠೊಪಕರಣ ಹಾಗೂ ಪಠ್ಯಪುಸ್ತಕ ಮತ್ತು ಇತರ ವೆಚ್ಚಕ್ಕಾಗಿ ಉಭಯ ಜಿಲ್ಲೆಯ 8 ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 4,35,870 ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 3,22,509 ರೂ. ಬಳಕೆಯಾಗಿದ್ದು, 1,13,361 ಕಾಲೇಜಿನ ಖಾತೆಯಲ್ಲೇ ಉಳಿದುಕೊಂಡಿದೆ. ದೂರವಾಣಿ ವೆಚ್ಚಕ್ಕಾಗಿ 6 ಕಾಲೇಜುಗಳಿಗೆ 22,500 ಬಂದಿದ್ದು, ಇದರಲ್ಲಿ ಕೇವಲ 3,882 ರೂ.ಗಳನ್ನು ಬಳಕೆ ಮಾಡಿ, 18,618 ರೂ.ಗಳನ್ನು ತಮ್ಮಲ್ಲೆ ಉಳಿಸಿಕೊಂಡಿವೆ. ನೀರು ಮತ್ತು ವಿದ್ಯುತ್ ಬಿಲ್ ಪಾವತಿಗೆ 8 ಕಾಲೇಜುಗಳಿಗೆ 67,686 ರೂ. ಬಿಡುಗಡೆಯಾಗಿದ್ದು, 31,170 ರೂ.ಗಳು ಬಳಕೆಯಾಗಿದ್ದು, 36,448 ಹಾಗೆಯೇ ಉಳಿದುಕೊಂಡಿದೆ.
ಸರಕಾರದಿಂದ ಬಂದಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಅದಾಗ್ಯೂ ಅನೇಕ ಕಾಲೇಜುಗಳು ಅನುದಾನ ಬಳಸಿಕೊಳ್ಳದೆ ಖಾತೆಯಲ್ಲೇ ಉಳಿಸಿಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸೂಕ್ತ ಮಾಹಿತಿ ನೀಡದೆ ಇದ್ದಲ್ಲಿ ಕಾಲೇಜಿಗೆ ಯಾವುದೇ ಮುನ್ಸೂಚನೆ ನೀಡದೆ ಅನುದಾನದ ಆವಶ್ಯಕತೆ ಇರುವುದಿಲ್ಲ ಎಂದು ಪರಿಗಣಿಸಿ ವಾಪಸ್ ಪಡೆಯಲಾಗುತ್ತದೆ. ಮುಂದಿನ ವರ್ಷದಲ್ಲಿ ಇದೇ ಉದ್ದೇಶಕ್ಕೆ ಅನುದಾನ ಪಡೆಯಲು ಸಮಸ್ಯೆಯಾಗಬಹುದು ಎಂದು ಇಲಾಖೆ ನಿರ್ದೇಶನ ನೀಡಿದೆ.