ಧಾರವಾಡ: ಕೋಟಿ ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಆದರೆ ಅಲ್ಲಲ್ಲಿ ಸೋರುತ್ತಿದೆ. ನೆಲ ಮಹಡಿಯಲ್ಲಿಯೋ ಚರಂಡಿ ನೀರು ಮತ್ತು ಮಳೆ ನೀರಿನ ಸೆಲೆ ಉಕ್ಕುತ್ತಿದೆ. ಎರಡನೇ ಹಂತದ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸ್ವತ್ಛತೆ ದೇವರಿಗೆ ಪ್ರೀತಿ…
ಒಟ್ಟಿನಲ್ಲಿ ಹೈಟೆಕ್ ಸ್ವರೂಪದಲ್ಲಿ ಜಿಲ್ಲೆಯ ಪ್ರಯಾಣಿಕರಿಗೆ ನೆರವಾಗಬೇಕಿದ್ದ ಧಾರವಾಡದ ನೂತನ ಬಸ್ ನಿಲ್ದಾಣಕ್ಕೆ ಬಾಲಗ್ರಹ ಹಿಡಿದುಕೊಂಡಿದೆ. ಪ್ರಾಯೋಗಿಕ ಸಾರಿಗೆ ಸಂಚಾರ ಆರಂಭಗೊಂಡು ಒಂದು ವರ್ಷ ಗತಿಸುತ್ತ ಬಂದರೂ ನಿಲ್ದಾಣದ ಅಧಿಕೃತ ಉದ್ಘಾಟನೆ ಆಗುವ ಲಕ್ಷಣ ಕಾಣುತ್ತಿಲ್ಲ. 2014ರಲ್ಲಿ ಹಳೇ ಬಸ್ ನಿಲ್ದಾಣ ತೆರವುಗೊಳಿಸಿದ ಬಳಿಕ 2015ರಲ್ಲಿ ನೂತನ ನಿಲ್ದಾಣ ಕಾಮಗಾರಿಗೆ ಚಾಲನೆ ಸಿಕ್ಕರೂ ಈವರೆಗೂ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಕ್ತಾಯ ಆಗುತ್ತಲೇ ಇಲ್ಲ.
ಬಿಆರ್‌ಟಿಎಸ್ ಯೋಜನೆಯಡಿ 17.9 ಕೋಟಿ ರೂ.ನಲ್ಲಿ ಹೊಸ ರೂಪ ಪಡೆದಿರುವ ಧಾರವಾಡದ ಹಳೇ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 2018 ನ. 27ರಿಂದ ಪ್ರಾಯೋಗಿಕ ಬಸ್ ಸಂಚಾರಕ್ಕೆ ಚಾಲನೆ ದೊರೆತಿತ್ತು. ಇದಾದ ಬಳಿಕ 2-3 ತಿಂಗಳೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಅಧಿಕೃತ ಉದ್ಘಾಟನೆ ಮಾಡುವುದಾಗಿ ಹೇಳಲಾಗಿತ್ತು. ಆದರೆ ಈಗ ಪ್ರಾಯೋಗಿಕ ಸಂಚಾರ ಆರಂಭಗೊಂಡು ವರ್ಷವೇ ಗತಿಸುತ್ತಿದ್ದು, ಉದ್ಘಾಟನೆ ಇನ್ನೆಷ್ಟು ದಿನ? ಪೂರ್ಣ ಪ್ರಮಾಣದಲ್ಲಿ ಸಂಚಾರ ಯಾವಾಗ? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
758 ಸಲ ಬಸ್‌ಗಳ ನಿರ್ಗಮನ: ನಿಲ್ದಾಣದಲ್ಲಿ ಉಪನಗರ ಸಾರಿಗೆಗಳ ಅಂಕಣ ಹಾಗೂ ಸಾಮಾನ್ಯ ಸಾರಿಗೆಗಳ ಅಂಕಣ ಎಂಬ ವಿಭಾಗವಿದೆ. ಉಪನಗರ ಸಾರಿಗೆಯಲ್ಲಿ 8 ಅಂಕಣ ನಿರ್ಮಾಣ ಮಾಡಿದ್ದರೆ, ಸಾಮಾನ್ಯ ಸಾರಿಗೆಯಲ್ಲಿ 6 ಅಂಕಣ ರೂಪಿಸಲಾಗಿದೆ. ಈ ಎಲ್ಲ ಅಂಕಣಗಳಲ್ಲಿ ಪ್ರತಿನಿತ್ಯ 758 ಸಲ ಬಸ್‌ಗಳ ನಿರ್ಗಮನ ಆಗುತ್ತಲಿದ್ದು, ಉಪನಗರ ಸಾರಿಗೆಯಲ್ಲಿ 506 ಹಾಗೂ ಗ್ರಾಮಾಂತರ ಸಾರಿಗೆಯಲ್ಲಿ 252 ಸಲ ಬಸ್‌ಗಳ ನಿರ್ಗಮನ ಆಗುತ್ತಲಿದೆ.
ಉಸ್ತುವಾರಿ ಸಚಿವರೇ, ಉದ್ಘಾಟನೆ ಯಾವಾಗ?: 2018 ನ. 27ರಂದು ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದ್ದ ಸಚಿವ ಜಗದೀಶ ಶೆಟ್ಟರ, ಎರಡೂವರೆ ತಿಂಗಳೊಳಗೆ ನಿಲ್ದಾಣದ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ಕೇಂದ್ರ ಸಚಿವರನ್ನು ಕರೆತಂದು ಅಧಿಕೃತವಾಗಿ ಉದ್ಘಾಟಿಸುವುದಾಗಿ ಹೇಳಿದ್ದರು. ಶಾಸಕ ಅರವಿಂದ ಬೆಲ್ಲದ ಅವರು ಸಹ 2-3 ತಿಂಗಳೊಳಗೆ ಸುಸಜ್ಜಿತ ನಿಲ್ದಾಣ ಸಾರ್ವಜನಿಕರಿಗೆ ಮುಕ್ತಗೊಳಿಸುವುದಾಗಿ ಹೇಳಿದ್ದರು. ಆದರೆ, ಇದನ್ನು ಹೇಳಿ ವರ್ಷ ಗತಿಸಲು ಬಂದರೂ ನಿಲ್ದಾಣ ಮಾತ್ರ ಉದ್ಘಾಟನೆ ಆಗಿಲ್ಲ. ಸದ್ಯ ಜಗದೀಶ ಶೆಟ್ಟರ ಅವರೇ ಜಿಲ್ಲಾ ಉಸ್ತುವಾರಿ ಮಂತ್ರಿ ಆಗಿದ್ದು, ಆಸಕ್ತಿವಹಿಸಿ ನಿಲ್ದಾಣ ಉದ್ಘಾಟನೆಗೊಳ್ಳುವಂತೆ ಮಾಡಬೇಕಿದೆ.
ನಿಲ್ದಾಣದ ಕಾಮಗಾರಿ ಬಹುತೇಕ ಮುಗಿದಿದ್ದು, ಇನ್ನೂ ಸ್ವಲ್ಪ ಹೆಚ್ಚುವರಿ ಕೆಲಸಕ್ಕಾಗಿ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಇನ್ನೊಂದು ತಿಂಗಳೊಳಗೆ ಆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಳಿಕ ನಿಲ್ದಾಣದ ಅಧಿಕೃತ ಉದ್ಘಾಟನೆಯು ಬಿಆರ್‌ಟಿಎಸ್ ಯೋಜನೆಯ ಜೊತೆಗೆ ಆಗಲಿದೆ.
-ಬಸವರಾಜ ಕೇರಿ, ಡಿಜಿಎಂ, ಬಿಆರ್‌ಟಿಎಸ್
ನೀರು ಸಂಗ್ರಹ ಕಾಟ: ಉದ್ಘಾಟನೆಗೂ ಮುನ್ನವೇ ನಿಲ್ದಾಣದ ತಳಮಹಡಿ ಪಾರ್ಕಿಂಗ್‌ನಲ್ಲಿ ನೀರು ಸಂಗ್ರಹ ಸಮಸ್ಯೆ ಎದುರಾಗಿದೆ. ಪಾರ್ಕಿಂಗ್ ಜಾಗದ ಕೆಳಗಡೆ ಬಾವಿಯ ಜಲಮೂಲ ಇದೆ ಎನ್ನಲಾಗುತ್ತಿದ್ದು, ಸಂಗ್ರಹಗೊಂಡ ನೀರನ್ನು ಹೊರಹಾಕುವ ಕೆಲಸ ಆಗುತ್ತಿದೆಯೇ ವಿನಃ ಸಮಸ್ಯೆ ನಿವಾರಣೆಯಾಗಿಲ್ಲ. ನೀರು ಸಂಗ್ರಹ ಸಮಸ್ಯೆ ನಿವಾರಣೆ ಹಾಗೂ ಶೌಚಾಲಯದ ಒಳಚರಂಡಿ ವ್ಯವಸ್ಥೆ ಪೂರ್ಣಗೊಳಿಸಲು ಹೆಚ್ಚುವರಿ ಕೆಲಸ ಕೈಗೊಳ್ಳಬೇಕಾಗಿದೆ.
.ಶಶಿಧರ್ ಬುದ್ನಿ