Advertisement
ನ. 23ರಿಂದ ನ. 29ರ ವರೆಗೆ ಬೆಂಗಳೂರು ಚರಣದ ಪಂದ್ಯಗಳು ನಡೆಯಬೇಕಿತ್ತು. ವೇಳಾಪಟ್ಟಿ ಪ್ರಕಟಗೊಂಡಿದ್ದರೂ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತದೋ, ಇಲ್ಲವೋ ಎನ್ನುವುದು ಖಾತ್ರಿಯಾಗಿರಲಿಲ್ಲ. ಆದರೀಗ ಸತತ 2ನೇ ವರ್ಷವೂ ಬೆಂಗಳೂರಿನಲ್ಲಿ ಪಂದ್ಯ ನಡೆಯದಿರುವುದು ಖಚಿತವಾಗಿದೆ. ಪ್ರೊ ಕಬಡ್ಡಿ ಆರಂಭಿಕ ಆವೃತ್ತಿಯ ಬೆಂಗಳೂರು ಚರಣದ ಪಂದ್ಯಗಳು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದ್ದವು. ಆದರೆ ಕಳೆದ ಆವೃತ್ತಿಯಲ್ಲಿ ಕಂಠೀರವದಲ್ಲಿ ಪಂದ್ಯ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿಯೂ ಪಂದ್ಯ ನಡೆಸಲು ಅನುಮತಿ ಸಿಕ್ಕಿಲ್ಲವೆಂದು ಉದಯ್ ಸಿನ್ಹಾ ಹೇಳಿದ್ದಾರೆ.
ಕಂಠೀರವದಲ್ಲಿ ಪಂದ್ಯ ನಡೆಸಲು 2 ತಿಂಗಳು ಮುಂಚೆಯೇ ಅನುಮತಿ ಕೇಳಿದ್ದೇವೆ. ಆದರೆ ಯಾವ ಕಾರಣದಿಂದ ಅನುಮತಿ ನಿರಾಕರಿಸಲಾಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ನಮ್ಮೆಲ್ಲ ಪ್ರಯತ್ನದ ಬಳಿಕವೂ ರಾಜ್ಯ ಕ್ರೀಡಾ ಇಲಾಖೆ ಪಂದ್ಯ ನಡೆಸಲು ಅನುಮತಿ ನೀಡಿಲ್ಲ. ಇದರಿಂದ ಅಭಿಮಾನಿಗಳಿಗೆ ಬಹಳ ನೋವಾಗಿದೆ. ಜತೆಗೆ ನಮಗೆ ಆರ್ಥಿಕವಾಗಿ ತೀವ್ರ ನಷ್ಟವಾಗಿದೆ ಎಂದು ಸಿನ್ಹಾ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಂಠೀರವ ಒಳಾಂಗಣ ಕ್ರೀಡಾಂಗಣ, ಪಂದ್ಯಗಳನ್ನು ನಡೆಸಲು ಎಲ್ಲ ರೀತಿಯಲ್ಲೂ ಸೂಕ್ತವಾಗಿದೆ. ವಾಹನಗಳ ನಿಲುಗಡೆಗೆ ಅವಕಾಶವಿದೆ. ಆ ಸ್ಥಳದಲ್ಲಿ ಟ್ರಾಫಿಕ್ ಕೂಡ ಸಮಸ್ಯೆಯಲ್ಲ. ಹೀಗಾಗಿ ಅಭಿಮಾನಿಗಳಿಗೂ ಅನುಕೂಲಕರ. ಇದನ್ನು ಹೊರತುಪಡಿಸಿದರೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಬಹುದು. ಆದರೆ ಅಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿ. ಅಲ್ಲದೇ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲ ಎನ್ನುವುದು ಉದಯ್ ಸಿನ್ಹಾ ವಿವರಣೆ.
Related Articles
ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಡಿಸಲು ಅನುಮತಿ ಸಿಕ್ಕಿಲ್ಲದಿರು ವುದರಿಂದ ಬೇರೆ ಸ್ಥಳಕ್ಕಾಗಿ ಬೆಂಗಳೂರು ಬುಲ್ಸ್ ಹುಡುಕಾಟ ನಡೆಸಿದೆ. ಕಳೆದ ಬಾರಿ ನಾಗ್ಪುರದಲ್ಲಿ ಪಂದ್ಯಗಳನ್ನು ನಡೆಸಲಾಗಿತ್ತು. ಈ ಬಾರಿ ಅಲ್ಲಿ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಚೆನ್ನೈ, ವಿಶಾಖಪಟ್ಟಣ ಅಥವಾ ಪುಣೆಯ ನಡುವೆ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲು ಬುಲ್ಸ್ ಚಿಂತನೆ ನಡೆಸಿದೆ.
Advertisement