ಬೆಂಗಳೂರು: ಪ್ರೊಬೆಷನರಿ ಮಹಿಳಾ ಪಿಎಸ್‌ಐಗೆ ಬುಲೆಟ್‌ನಿಂದ ಡಿಕ್ಕಿ ಹೊಡೆದು ಹಲ್ಲೆ ನಡೆಸಿದ ಆರೋಪಿಯನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಳಗಾಳ ನಿವಾಸಿ ಭರತ್(32) ಬಂಧಿತ.
ಗೋವಿಂದರಾಜ ನಗರ ಠಾಣೆಯ ಪ್ರೊಬೆಷನರಿ ಮಹಿಳಾ ಪಿಎಸ್‌ಐ ಅಶ್ವಿನಿ ಹಿಪ್ಪರಗಿ ಅ.15ರಂದು ಠಾಣೆ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದರು. ಇದೇ ವೇಳೆ ಆರೋಪಿ ಬುಲೆಟ್‌ನಲ್ಲಿ ಸುಬ್ಬಣ್ಣ ಗಾರ್ಡನ್‌ನ ಎಸ್‌ಬಿಐ ಬ್ಯಾಂಕ್ ರಸ್ತೆಯಲ್ಲಿ ಅತಿವೇಗವಾಗಿ ಹೋಗುತ್ತಿದ್ದ. ಅದನ್ನು ಗಮನಿಸಿದ ಪಿಎಸ್‌ಐ, ಆತನನ್ನು ತಡೆದು ನಿಧಾನವಾಗಿ ಹೋಗುವಂತೆ ಹೇಳಿದ್ದಾರೆ.
ಅದರಿಂದ ಆಕ್ರೋಶ ಗೊಂಡ ಆರೋಪಿ, ಕರ್ತವ್ಯ ನಿರತ ಮಹಿಳಾ ಪಿಎಸ್‌ಐಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ, ಸ್ವಲ್ಪ ದೂರ ಹೋಗಿ ವಾಪಸ್ ಬುಲೆಟ್ ತಿರುಗಿಸಿಕೊಂಡು ಬಂದು ಪಿಎಸ್‌ಐ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಕೆಳಗೆ ಬಿದ್ದ ಪಿಎಸ್‌ಐ ಸಮವಸ್ತ್ರ ಹರಿದು, ಮುಖ, ಕೈಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಬುಧವಾರ ಮಹಿಳಾ ಪಿಎಸ್‌ಐ ಅಶ್ವಿನಿ ಅವರ ಮನೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.