Advertisement

ಪಿಆರ್‌ಒ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಆದ್ಯತೆ

09:28 PM Nov 12, 2019 | mahesh |

ಸಂಸ್ಥೆಯ ಸೇವೆಗಳ ಬಗ್ಗೆ ಗ್ರಾಹಕರ ಮನಮುಟ್ಟಿಸುವಲ್ಲಿ ಪಿಆರ್‌ಒ ಮಹತ್ವದ ಪಾತ್ರ ವಹಿಸುತ್ತಾನೆ. ಇಂದು ಜಾಗತಿಕ ಮಟ್ಟದಲ್ಲಿ ಕೂಡ ಪಿಆರ್‌ಒಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಇದಕ್ಕೆ ಕೆಲವೊಂದಿಷ್ಟು ಅರ್ಹತೆಗಳಿದ್ದರೆ ಉದ್ಯೋಗಗಳಿಸಬಹುದಾಗಿದೆ. ಪಿಆರ್‌ಒಗಳಿಗೆ ಬೇಕಾದ ಅರ್ಹತೆ, ಬೇಡಿಕೆ ಮತ್ತು ಇನ್ನಿತರ ಮಾಹಿತಿಯ ಕುರಿತು ಈ ಲೇಖನ ತಿಳಿಸುತ್ತದೆ.

Advertisement

ಜಾಗತಿಕ ಯುಗದಲ್ಲಿ ಪ್ರತಿ ರಂಗದಲ್ಲಿಯೂ ಉದ್ಯೋಗಾವಕಾಶ ಲಭ್ಯವಿದೆ. ಆ ಉದ್ಯೋಗಕ್ಕೆ ತಕ್ಕಂತ ಕೌಶಲ, ಮಾತುಗಾರಿಕೆ, ಸಂವಹನ ಕಲೆ ಇದ್ದರಾಯಿತಷ್ಟೇ. ಚತುರ, ಚುರುಕು ಸ್ವಭಾವದ ವ್ಯಕ್ತಿ ಎಲ್ಲಿಯೂ ಸಲ್ಲುತ್ತಾನೆ ಎಂಬುದಕ್ಕೆ ಬೇರೆ ಮಾತು ಬೇಕಿಲ್ಲ. ಅಂತಹ ಔದ್ಯೋಗಿಕ ಕ್ಷೇತ್ರಗಳ ಪೈಕಿ ಬಹು ಬೇಡಿಕೆಯ ಕ್ಷೇತ್ರವೆಂದರೆ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುವುದು.

ಸಾರ್ವಜನಿಕ ಸಂಪರ್ಕಾಧಿಕಾರಿ ಅಥವಾ ಪಿಆರ್‌ಒ ಎಂದು ಕರೆಸಿಕೊಳ್ಳುವ ಈ ಉದ್ಯೋಗವು ಯುವ ಸಮುದಾಯಕ್ಕೆ ಹಲವಾರು ಅವಕಾಶಗಳನ್ನು ಸೃಷ್ಟಿಸಿಕೊಟ್ಟಿದೆ. ಉದ್ಯಮ ರಂಗ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಆ ಉದ್ಯಮ, ಮ್ಯಾನೇಜ್‌ಮೆಂಟ್‌ ಮತ್ತು ಗ್ರಾಹಕರ ನಡುವಿನ ಕೊಂಡಿಯಾಗಿ ಕೆಲಸ ಮಾಡಲು ಸಂಸ್ಥೆಗಳು ಪಿಆರ್‌ಒಗಳನ್ನು ನೇಮಕ ಮಾಡುತ್ತವೆ. ಸಂಸ್ಥೆಯ ಕುರಿತು ಪ್ರಚಾರ ನೀಡುವುದು, ಕಂಪೆನಿಯ ಉತ್ಪನ್ನ, ಸೇವೆಗಳ ಕುರಿತು ಮಾಹಿತಿ ನೀಡುವುದು, ಉದ್ಯೋಗಿ, ಗ್ರಾಹಕರ ನಡುವೆ ಧನಾತ್ಮಕ ಸಂಬಂಧ ಏರ್ಪಡಿಸುವುದು ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕೆಲಸವಾಗಿರುತ್ತದೆ.

ಪಿಆರ್‌ಒಗಳು ಕಂಪೆನಿಯನ್ನು ಲಾಭದತ್ತ ಕೊಂಡೊಯ್ಯಲು ಮಧ್ಯವರ್ತಿಯಾಗಿಯೂ ಕೆಲಸ ಮಾಡುತ್ತಾರೆ. ತಾನು ಕೆಲಸ ಮಾಡುವ ಸಂಸ್ಥೆಯ ಉತ್ಪನ್ನಗಳನ್ನು ಸಾರ್ವಜನಿಕರಿಗೆ ವಿವರಿಸಿ, ಸಂಸ್ಥೆಯ ಸೇವೆಗಳ ಬಗ್ಗೆ ಗ್ರಾಹಕರ ಮನಮುಟ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಸಂಸ್ಥೆಗೆ ಸಂಬಂಧಿಸಿದಂತೆ ಬೇರೆ ಸಂಸ್ಥೆಗಳೊಂದಿಗೆ ಇಮೇಲ್‌, ದೂರವಾಣಿ ಸಂಪರ್ಕ, ಮಾಧ್ಯಮ ಪ್ರಚಾರ, ದಾಖಲೀಕರಣ, ಕೈಪಿಡಿ, ಕರಪತ್ರ, ಚಿತ್ರ, ಛಾಯಾಚಿತ್ರಗಳನ್ನು ತಯಾರು ಮಾಡುವುದು ಹೀಗೆ ನಾನಾ ಕೆಲಸದ ಹೊಣೆ ಪಿಆರ್‌ಒಗಳದ್ದಾಗಿರುತ್ತದೆ.

ಆದ್ಯತೆಯ ಶಿಕ್ಷಣ
ಸಾರ್ವಜನಿಕ ಸಂಪರ್ಕಾಧಿಕಾರಿಯಾಗಲು ಯಾವುದೇ ನಿರ್ದಿಷ್ಟವಾದ ವೃತ್ತಿಪರ ಕೋರ್ಸ್‌ಗಳು ಇಲ್ಲ. ಯಾವುದೇ ಪದವಿ, ಸ್ನಾತಕೋತ್ತರ ಪದವಿ ಓದಿದ ಯುವ ಸಮುದಾಯ ಪಿಆರ್‌ಒಗಳಾಗಿ ಕೆಲಸ ಮಾಡಬಹುದು. ಆದರೆ, ಮನಃಶಾಸ್ತ್ರ, ಅರ್ಥಶಾಸ್ತ್ರ, ಮಾರ್ಕೆಟಿಂಗ್‌, ಸಮಾಜಶಾಸ್ತ್ರ, ಬ್ಯುಸಿನೆಸ್‌ ಸ್ಟಡೀಸ್‌, ಜಾಹೀರಾತು, ಪತ್ರಿಕೋದ್ಯಮದಲ್ಲಿ ಪದವಿ ಪೂರೈಸಿದವರಿಗೆ ಹೆಚ್ಚು ಆದ್ಯತೆ. ಜಾಹೀರಾತು ಟ್ರೆಂಡ್‌, ಮೀಡಿಯಾ ಟೆಕ್ನಿಕ್ಸ್‌, ಎಡಿಟಿಂಗ್‌, ಭಾಷಣ ಬರೆಯುವುದು, ಸಂಶೋಧನಾ ವಿಧಾನ ತಿಳಿದಿರುವವರು ಪಬ್ಲಿಕ್‌ ರಿಲೇಶನ್‌ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಬಹುದು.

Advertisement

ಶಿಕ್ಷಣದ ಹಂತದಲ್ಲಿಯೇ ಶಿಕ್ಷಣ ಸಂಸ್ಥೆಗಳಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಪಬ್ಲಿಕ್‌ ರಿಲೇಶನ್ಸ್‌ ಕ್ಷೇತ್ರಕ್ಕೆ ಕಾಲಿಡಲು ಬೇಕಾದ ಅರ್ಹತೆಗಳನ್ನು ಗಿಟ್ಟಿಸಿಕೊಂಡರೆ ಉದ್ಯೋಗ ಕಂಡು ಕೊಳ್ಳುವುದು ಕಷ್ಟವೇನಲ್ಲ. ವ್ಯವಹಾರ ಜ್ಞಾನದ ಶಿಕ್ಷಣವನ್ನು ಕಾಲೇಜು ಹಂತದಲ್ಲಿಯೇ ಪಡೆದುಕೊಳ್ಳಬೇಕು. ಇದು ಔದ್ಯೋಗಿಕ ರಂಗದಲ್ಲಿ ಸಾಕಷ್ಟು ನೆರವಿಗೆ ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಅವಕಾಶಗಳಿವೆ
ಶಾಲಾ ಕಾಲೇಜು, ಖಾಸಗಿ ಆಸ್ಪತ್ರೆ, ವಿಶ್ವವಿದ್ಯಾನಿಲಯಗಳು, ಬಹುರಾಷ್ಟ್ರೀಯ ಕಂಪೆನಿಗಳು, ಪ್ರಸಿದ್ಧ ಸಂಸ್ಥೆಗಳು ಸಹಿತ ವಿವಿಧ ಉದ್ಯಮಗಳಲ್ಲಿ ಪ್ರಸ್ತುತ ಪೈಪೋಟಿ ಹೆಚ್ಚಿರುತ್ತದೆ. ಹಾಗಾಗಿ ಇಂತಹ ಕ್ಷೇತ್ರಗಳಲ್ಲಿ ಪಿಆರ್‌ಒಗಳಿಗೂ ಬೇಡಿಕೆ ಅಧಿಕ. ಖಾಸಗಿ ವಲಯದ ಇತರ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಆ ಕಂಪೆನಿಗಳ ಸೇವೆಯನ್ನು ಜನಮಾನಸಕ್ಕೆ ತಲುಪಿಸಲು ಪಿಆರ್‌ಒ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಕೌಶಲ ಅಗತ್ಯ
ಯಾವುದೇ ಕಂಪೆನಿಗಳಲ್ಲಿ ಪಿಆರ್‌ಒಗಳಾಗಿ ಕೆಲಸ ಮಾಡಿದರೆ ಕೈತುಂಬ ಸಂಬಳ ಪಡೆಯುವ ಅವಕಾಶವಿರುತ್ತದೆ. ಆದರೆ, ಅದಕ್ಕೆ ನಿರ್ದಿಷ್ಟವಾದ ಅರ್ಹತೆ ಬೇಕೇ ಬೇಕು. ಪ್ರಮುಖ ಭಾಷೆಗಳಾದ ಹಿಂದಿ, ಇಂಗ್ಲಿಷ್‌, ಕನ್ನಡದಲ್ಲಿ ವ್ಯವಹರಿಸುವ ಸಂವಹನ ಕೌಶಲ, ಭಾಷಾ ಪರಿಶುದ್ಧತೆ, ಇನ್ನೊಬ್ಬರನ್ನು ಆಕರ್ಷಿಸುವಂತಹ ಮಾತುಗಾರಿಕೆ ಮತ್ತು ವ್ಯಕ್ತಿತ್ವ, ಸ್ನೇಹಪರ, ಸೌಜನ್ಯಯುತ ವ್ಯಕ್ತಿತ್ವ,ಕೆಲಸದಲ್ಲಿ ಬದ್ಧತೆ, ಪ್ರಾಮಾಣಿಕತೆಯ ವ್ಯವಹಾರ ಇವಿಷ್ಟಿದ್ದರೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಲು ಅರ್ಹತೆ ಸಿಗುತ್ತದೆ. ಇದರೊಂದಿಗೆ ಕ್ರಿಯಾಶೀಲತೆ, ಜನರೊಂದಿಗೆ ಬೆರೆಯುವ ಗುಣ, ಸಂಶೋಧನಾತ್ಮಕ ಮತ್ತು ವಿಶ್ಲೇಷಣಾತ್ಮಕ ಗುಣ ಇರಲೇಬೇಕು.

- ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next