Advertisement

ಪಾಕ್‌ ಪರ ಘೋಷಣೆ: ಮೇಲ್ಮನೆಯಲ್ಲಿ ಪ್ರತಿಧ್ವನಿ

08:53 AM Feb 20, 2020 | Lakshmi GovindaRaj |

ವಿಧಾನ ಪರಿಷತ್ತು: ಹುಬ್ಬಳಿಯಲ್ಲಿ ಈಚೆಗೆ ಮೂವರು ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣವು ಮಂಗಳವಾರ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು. ಪಾಕ್‌ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ಮೊದಲು ಬಂಧಿಸಿ, ನಂತರ ಬಿಡುಗಡೆ ಮಾಡಲಾಗುತ್ತದೆ. ತೀವ್ರ ಪ್ರತಿರೋಧದ ಬೆನ್ನಲ್ಲೇ ಮತ್ತೆ ಬಂಧಿಸಲಾಗುತ್ತದೆ. ಇಡೀ ಪ್ರಕರಣದಲ್ಲಿ ಪೊಲೀಸರ ನಡೆ ಅನುಮಾನಾ ಸ್ಪದವಾಗಿದೆ.

Advertisement

ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದರ ಜತೆಗೆ ಅಲ್ಲಿನ ನಗರ ಪೊಲೀಸ್‌ ಆಯು ಕ್ತರನ್ನು ಅಮಾನತುಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪ್ರತಿಪಕ್ಷ ಸದಸ್ಯರು ಪಟ್ಟುಹಿಡಿದರು. ಮಂಗಳವಾರ ಸದನದಲ್ಲಿ ನಿಯಮ 330ಎ ಅಡಿ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ವಿಷಯ ಪ್ರಸ್ತಾಪಿಸಿ, “ಪ್ರತಿಷ್ಠಿತ ಕೆಎಲ್‌ಇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಈಚೆಗೆ ಪಾಕ್‌ ಪರ ಘೋಷಣೆ ಕೂಗಿದ್ದಾರೆ.

ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಕೂಡ ಮಾಡಲಾಗಿದೆ. ಆದರೆ, ಆ ಆರೋಪಿಗಳ ಬಗ್ಗೆ ಹುಬ್ಬಳ್ಳಿ ಪೊಲೀಸರು ಮೃದು ಧೋರಣೆ ತಳೆದಿದ್ದಾರೆ. ಪೊಲೀಸರ ಈ ನಡೆ ಹಲವು ಅನು ಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಕರಣದ ವಿಚಾರದಲ್ಲಿ ಸರ್ಕಾರದ ನಡೆಯನ್ನು ಸ್ಪಷ್ಟಪಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, “ಈ ನೆಲದ ಅನ್ನ ಉಂಡು, ಇಲ್ಲಿನ ನೀರು-ಗಾಳಿ ಸೇವಿಸಿ, ಇದೇ ನೆಲದ ವಿರುದ್ಧ ಹಾಗೂ ಶತ್ರುರಾಷ್ಟ್ರದ ಪರ ಘೋಷಣೆ ಕೂಗಿರುವುದು ಅಕ್ಷಮ್ಯ. ಆ ವಿದ್ಯಾರ್ಥಿಗಳು ಹಾಕಿದ ಘೋಷಣೆಗಳು ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವಕ್ಕೆ ಸವಾಲು ಹಾಕುವಂತಿವೆ.

ಆದಾಗ್ಯೂ ಅಂತಹವರ ಬಗ್ಗೆ ಹುಬ್ಬಳ್ಳಿ ಪೊಲೀಸರು ಯಾಕೆ ಅಷ್ಟೊಂದು ಮೃದುಧೋರಣೆ ಅನುಸರಿಸುತ್ತಿದ್ದಾರೆ? ಅವರ ಮೇಲೆ (ಪೊಲೀಸರ ಮೇಲೆ) ಏನಾದರೂ ಒತ್ತಡ ಇತ್ತೇ? ಅದೇನೇ ಇರಲಿ, ಹುಬ್ಬಳ್ಳಿ ನಗರ ಪೊಲೀಸ್‌ ಆಯುಕ್ತರನ್ನು ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು.

Advertisement

ಸರ್ಕಾರದ ಪ್ರಭಾವ?: ಕಾಂಗ್ರೆಸ್‌ ಸದಸ್ಯ ಐವಾನ್‌ ಡಿಸೋಜ ಮಾತನಾಡಿ, “ಪೊಲೀಸ್‌ ಅಧಿಕಾರಿಗಳು ಸರ್ಕಾರದ ಪ್ರಭಾವಕ್ಕೆ ಒಳಪಟ್ಟು, ಕಾನೂನು ಗಾಳಿಗೆ ತೂರಿದಂತಿದೆ. ಪ್ರತಿಭಟನೆ ನಂತರ ಮತ್ತೆ ಬಂಧಿಸಿದ್ದಾರೆ. ಈ ಇಬ್ಬಗೆಯ ನೀತಿ ಯಾಕೆ? ಅಲ್ಲಿನ ಪೊಲೀಸ್‌ ಆಯುಕ್ತರನ್ನು ಅಮಾನತುಗೊಳಿಸುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದಲ್ಲದೆ, ಕ್ರಮಕ್ಕೆ ಒತ್ತಾಯಿಸಿ ಸದನದ ಬಾವಿಗಿಳಿಯಲು ಡಿಸೋಜ ಮುಂದಾದರು. ನಂತರ ವಾಪಸ್ಸಾದರು. ಸದಸ್ಯರಾದ ಎಚ್‌.ಎಂ. ರೇವಣ್ಣ, ನಾರಾಯಣಸ್ವಾಮಿ, ಭೋಜೇಗೌಡ, ಪ್ರಕಾಶ ರಾಠೊಡ್‌ ಮತ್ತಿತರರು ಇದಕ್ಕೆ ದನಿಗೂಡಿಸಿದರು.

ತುಕ್ಡೆ ತುಕ್ಡೆ ಸಂಗಾತಿಗಳಲ್ಲಿ ರಾಷ್ಟ್ರಾಭಿಮಾನ: ಇದಕ್ಕೆ ತಿರುಗೇಟು ನೀಡಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷಗಳು ಇದೇ ಮೊದಲ ಬಾರಿಗೆ ರಾಷ್ಟ್ರದ ವಿರುದ್ಧ ಘೋಷಣೆ ಕೂಗುವವರ ಮೇಲೆ ಕ್ರಮ ಕೈಗೊಳ್ಳುವಂತೆ ದನಿ ಎತ್ತಿದ್ದು, ರಾಷ್ಟ್ರಪ್ರೇಮದ ವಿಚಾರದಲ್ಲಿ ಹೀಗೆ ಬೆಂಬಲ ಸೂಚಿಸುತ್ತಿರುವುದು ಸ್ವಾಗತಾರ್ಹ. ಗೃಹ ಸಚಿವರಿಂದ ಈ ಬಗ್ಗೆ ಸಮರ್ಪಕ ಮತ್ತು ಸಮರ್ಥ ಉತ್ತರ ಕೊಡಿಸಲಾಗುವುದು ಎಂದು ಹೇಳಿದರು.

ಆಯನೂರು ಮಂಜುನಾಥ್‌ ಮಾತನಾಡಿ, “ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರತಿಪಕ್ಷಗಳಲ್ಲಿ ಪಕ್ಷಾತೀತ ರಾಷ್ಟ್ರಾಭಿಮಾನ ಮೂಡಿದೆ. “ತುಕ್ಡೆ ತುಕ್ಡೆ ಗ್ಯಾಂಗ್‌’ನ ಸಂಗಾತಿಗಳೂ ಆ ಗ್ಯಾಂಗ್‌ ವಿರುದ್ಧ ದನಿ ಎತ್ತಿರುವುದು ಸರ್ಕಾರಕ್ಕೆ ಸಂತೋಷ ತಂದಿದೆ’ ಎಂದು ಕಾಲೆಳೆದರು. ಆಗ ಮಾತಿನ ಚಕಮಕಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next