ಹಾವೇರಿ/ಬೆಂಗಳೂರು: ವಿಧಾನ ಸೌಧದಲ್ಲಿ “ಪಾಕಿಸ್ಥಾನ್ ಜಿಂದಾಬಾದ್’ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ಬ್ಯಾಡಗಿಯ ಮೆಣಸಿನಕಾಯಿ ವ್ಯಾಪಾರಿ ಮಹ್ಮದ್ ಶಫಿ ನಾಶಿಪುಡಿ ಎಂಬವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೋಟೆಬೆನ್ನೂರಿನ ಎಸ್‌ಎಎನ್ ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ನಾಶಿಪುಡಿ ಅವರನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದು ಧ್ವನಿ ಪರೀಕ್ಷೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ವಿಧಾನಸಭೆಯಲ್ಲಿ ಪ್ರಕರಣದ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ| ಪರಮೇಶ್ವರ, ಪ್ರಕರಣ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ. 7 ಮಂದಿಯನ್ನು ಕರೆಯಿಸಿ ಕೊಂಡು ಹೇಳಿಕೆ ಪಡೆದುಕೊಳ್ಳಲಾಗಿದೆ ಎಂದಿದ್ದಾರೆ.
ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಅನಂತರ ಪಾಕ್ ಪರ ಘೋಷಣೆ ಕೂಗಿದ್ದು ಸಾಬೀತಾದರೆ ಕ್ರಮ ಕೈಗೊಳ್ಳಲಾಗುತ್ತದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲವೆಂದು ಎಂದು ಭರವಸೆ ನೀಡಿದರು.
ವಿಧಾನಸೌಧ ಪೊಲೀಸರು ನಾಶಿಪುಡಿ ಎಂಬವರನ್ನು ಬುಧವಾರ ರಾತ್ರಿ ವಶಕ್ಕೆ ಪಡೆದು ಧ್ವನಿ ಪರೀಕ್ಷೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಈ ವ್ಯಕ್ತಿ ಬೇರೆ ಯಾವುದೇ ಸಂಘಟನೆಗೆ ಸೇರಿದ ಬಗ್ಗೆ ಮಾಹಿತಿಯಿಲ್ಲ. ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರು ಬ್ಯಾಡಗಿ ಠಾಣೆಯಲ್ಲಿ ಲಿಖೀತ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ನಾಶಿಪುಡಿಯನ್ನು ಕರೆದುಕೊಂಡು ಹೋಗಿದ್ದಾರೆ.
– ಅಂಶುಕುಮಾರ್, ಹಾವೇರಿ ಎಸ್‌ಪಿ