Advertisement

ಅನರ್ಹ ಶಾಸಕರ ಪರ-ವಿರೋಧ ಹೇಳಿಕೆ

11:42 PM Sep 29, 2019 | Team Udayavani |

ಬೆಂಗಳೂರು: ಉಪಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅನರ್ಹಗೊಂಡಿರುವ ಶಾಸಕರ ಸಂಬಂಧವಾಗಿ ಬಿಜೆಪಿ ನಾಯಕರು ಬಹಿರಂಗವಾಗಿ ಪರ-ವಿರೋಧ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಅನರ್ಹಗೊಂಡಿರುವ ಶಾಸಕರು ಬಿಜೆಪಿಯ ಸಂಪರ್ಕದಲ್ಲಿಲ್ಲ. ಅವರು ಬಿಜೆಪಿಗೆ ಸೇರಲು ಬಯಸಿದರೆ ಸ್ವಾಗತವಿದೆ ಎಂದು ಉಪಮುಖ್ಯಮಂತ್ರಿ ಅಶ್ವಥ್‌ ನಾರಾಯಣ ಹೇಳಿದರೆ, ಮತ್ತೂಂದೆಡೆ, ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ, ಪಕ್ಷಕ್ಕೆ ಬಂದವರೆಲ್ಲರಿಗೂ ಟಿಕೆಟ್‌ ನೀಡುವ ಮೊದಲು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿ ಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Advertisement

ಈ ನಡುವೆ ಹುಕ್ಕೇರಿ ಶಾಸಕ ಉಮೇಶ್‌ ಕತ್ತಿ ಮಾತನಾಡಿ, ಅನರ್ಹಗೊಂಡಿರುವ ಶಾಸಕರಾದ ಶ್ರೀಮಂತ ಪಾಟೀಲ್‌ ಹಾಗೂ ಮಹೇಶ್‌ ಕುಮಟಳ್ಳಿ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಸಿಗದು ಎಂದು ಹೇಳಿದ್ದು, ಅದಕ್ಕೆ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಪ್ರತಿಕ್ರಿಯಿಸಿ, ಪಕ್ಷದ ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದನ್ನು ಉಮೇಶ್‌ ಕತ್ತಿ ನಿರ್ಧರಿಸುವುದಿಲ್ಲ ಎಂದಿದ್ದಾರೆ. ಈಗಾಗಲೇ ಘೋಷಣೆಯಾಗಿರುವ 15 ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಬಿಜೆಪಿ ಅಧಿಕೃತವಾಗಿ ಆರಂಭಿಸದೆ ಇದ್ದರೂ, ಬಿಜೆಪಿ ನಾಯಕರಲ್ಲಿ ಟಿಕೆಟ್‌ ನೀಡಿಕೆ ವಿಚಾರದಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೆ.

ಬಿಜೆಪಿ ರಾಜ್ಯ ಪದಾಧಿಕಾರಿಗಳಲ್ಲಿ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಬಿಜೆಪಿ ಮುಖಂಡರಿಗೆ ಮತ್ತು ಕೇಡರ್‌ ಕಾರ್ಯಕರ್ತರಿಗೆ ಅನರ್ಹಗೊಂಡಿರುವ ಶಾಸಕರಿಗೆ ಟಿಕೆಟ್‌ ನೀಡುವುದು ಇಷ್ಟವಿಲ್ಲ. ಅಲ್ಲದೆ, ಸಂಘ ಪರಿವಾರದ ಪ್ರಮುಖರಿಗೂ ಕೂಡ ಈ ಬಗ್ಗೆ ಸ್ವಲ್ಪ ಮಟ್ಟಿನ ಅಸಮಾಧಾನ ಇದೆ ಎಂದು ಹೇಳಲಾಗುತ್ತಿದೆ. ಪಕ್ಷದ ಸಂಘಟನೆಯಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಕಡೆಗಣಿಸಿ, ಅನರ್ಹಗೊಂಡಿರುವ ಶಾಸಕರಿಗೆ ಟಿಕೆಟ್‌ ನೀಡಿದರೆ ಭವಿಷ್ಯದಲ್ಲಿ ಬಿಜೆಪಿಯ ಸ್ಥಿತಿ ಏನಾಗಬಹುದು ಎಂಬ ಆತಂಕ ಕೆಲವರಲ್ಲಿ ಮನೆ ಮಾಡಿದೆ.

ಈ ವಿಚಾರವಾಗಿ ಇತ್ತೀಚೆಗೆ ನಡೆದ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಹಿರಿಯರ ಸಭೆಯಲ್ಲೂ ಗಂಭೀರ ಚರ್ಚೆಯಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಆದರೆ, ಅನರ್ಹಗೊಂಡವರಿಂದಲೇ ಪಕ್ಷ ಅಧಿಕಾರಕ್ಕೆ ಬಂದಿರುವುದರಿಂದ ಅನರ್ಹರಿಗೆ ಟಿಕೆಟ್‌ ನೀಡದೇ ಇದ್ದರೆ ಸರಿಯಾಗುವುದಿಲ್ಲ ಎಂಬ ಆತಂಕವೂ ಬಿಜೆಪಿಯ ಕೆಲವು ಮುಖಂಡರಲ್ಲಿದೆ. ಒಟ್ಟಿನಲ್ಲಿ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಬಿಜೆಪಿಯಲ್ಲಿ ಕಗ್ಗಂಟಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಕತ್ತಿ, ನಾನು ಟಿಕೆಟ್‌ ತೀರ್ಮಾನ ಮಾಡಲ್ಲ: ಸವದಿ
ಬೆಳಗಾವಿ: ವಿಧಾನಸಭೆ ಉಪ ಚುನಾ ವಣೆಗೆ ಟಿಕೆಟ್‌ ನೀಡುವುದರ ಬಗ್ಗೆ ಉಮೇಶ ಕತ್ತಿಯವರಾಗಲಿ ಅಥವಾ ನಾನಾ ಗಲಿ ತೀರ್ಮಾನ ಮಾಡುವುದಿಲ್ಲ. ಅದರ ಬಗ್ಗೆ ಹೈಕಮಾಂಡ್‌ ಸೂಕ್ತ ನಿರ್ಧಾರ ತೆಗೆದು ಕೊಳ್ಳುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ಇಲ್ಲಿಯ ಸಾಂಬ್ರಾ ವಿಮಾನ ನಿಲ್ದಾಣ ದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ತೆಗೆದುಕೊಂಡ ತೀರ್ಮಾನವನ್ನು ಎಲ್ಲರೂ ಸ್ವಾಗತಿಸಬೇಕಾಗುತ್ತದೆ.

Advertisement

ಅದರ ಪ್ರಕಾರ ನಡೆದುಕೊಳ್ಳುತ್ತೇವೆ. ಮಹೇಶ ಕುಮಟಳ್ಳಿ ಕುರಿತು ಹೇಳಿರುವ ಮಾತಿನ ವಿಡಿಯೋ ಬಹಳ ವೈರಲ್‌ ಆಗಿದೆ. ಸತೀಶ ಜಾರಕಿಹೊಳಿ ಅವರು ನಮ್ಮ ಪರವಾಗಿ ಬ್ಯಾಟಿಂಗ್‌ ಮಾಡಿದರೂ ಸ್ವಾಗತ. ವಿರೋಧ ಮಾಡಿದರೂ ಸ್ವಾಗತಿಸುತ್ತೇನೆ. ಸತೀಶ ಜಾರಕಿಹೊಳಿ ಸೇರಿದಂತೆ ವಿರೋಧ ಪಕ್ಷದಲ್ಲಿದ್ದವರು ನಮ್ಮನ್ನು ಹೊಗಳುವುದಿಲ್ಲ. ತೆಗಳುವುದು, ವಿರೋಧ ಮಾಡುತ್ತಲೇ ಇರುತ್ತಾರೆ. ವಿರೋಧ ಪಕ್ಷದಲ್ಲಿದ್ದುಕೊಂಡು ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಆಡಳಿತ ಪಕ್ಷದಲ್ಲಿ ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next