Advertisement

ಪ್ರೊ. ಎಂ. ಎ. ಹೆಗಡೆ ಕುರಿತ ‘ಅಣ್ಣ ಮಹಾಬಲ’ಕೃತಿ‌ ಏ. 9 ರಂದು ಬಿಡುಗಡೆ

04:44 PM Apr 07, 2022 | Team Udayavani |

ಶಿರಸಿ: ಯಕ್ಷಗಾನ ತಜ್ಞರಾಗಿ, ಸಂಸ್ಕೃತ ವಿದ್ವಾಂಸರಾಗಿ, ಸಾಹಿತಿಯಾಗಿ, ಯಕ್ಷಕವಿಯಾಗಿ ತಮ್ಮ ಬಹುಮುಖಿ ಪಾಂಡಿತ್ಯದಿಂದಾಗಿ ಹೆಸರಾಗಿದ್ದ ಪ್ರೊ. ಎಂ. ಎ. ಹೆಗಡೆ ಅವರ ಕುರಿತ ‘ಅಣ್ಣ ಮಹಾಬಲ’ ಕೃತಿ‌ ಏ.9 ರಂದು ನಗರದ ರೋಟರಿ ಸೆಂಟರ್ ನಲ್ಲಿ ಬಿಡುಗಡೆ ಆಗಲಿದೆ.

Advertisement

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ಅಧ್ಯಕ್ಷರಿಗೆ ಸರ್ಕಾರ ನೀಡುವ ಗೌರವಧನವನ್ನೂ ಸ್ವಂತಕ್ಕೆ ಬಳಸದೇ, ಕಲೆಗಾಗಿಯೇ ವ್ಯಯಿಸಿ ಆದರ್ಶ ಮೆರೆದ ಹೆಗಡೆ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮಾತ್ರವಲ್ಲ, ಅದ್ವೈತ ವೇದಾಂತ, ಭಾರತೀಯ ದರ್ಶನ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಗಮನಾರ್ಹವೇ ಆಗಿದ್ದವು. ಅವರ ಅಲಂಕಾರ ತತ್ತ್ವ, ಹಿಂದೂ ಸಂಸ್ಕಾರಗಳು, ಧ್ವನ್ಯಾಲೋಕ ಮತ್ತು ಲೋಚನ, ಶಬ್ದ ಮತ್ತು ಜಗತ್ತು, ಭಾರತೀಯ ತತ್ತ್ವ ಶಾಸ್ತ್ರ, ಸಿದ್ದಾಂತ ಬಿಂದು ಮೊದಲಾದ ಗ್ರಂಥಗಳು ವಿದ್ವತ್ ಮತ್ತು ಸಾಹಿತ್ಯ ವಲಯದ ಗಮನ ಸೆಳೆದಿದ್ದರೆ, ಸೀತಾ ವಿಯೋಗ, ರಾಜಾ ಕರಂಧಾಮದಂಥಹ 20 ಕ್ಕೂ ಹೆಚ್ಚು ಪ್ರಸಂಗಗಳ ಮೂಲಕ ಯಕ್ಷಕವಿಯೂ ಆಗಿದ್ದವರು.

ನೇರ ಮಾತು, ಸರಳ ವ್ಯಕ್ತಿತ್ವ ಹಾಗೂ ದಿಟ್ಟ ನಡೆಯಿಂದ ಸ್ವಚ್ಛ ಬದುಕು ಬಾಳಿದವರು. ಅವರು ನಿಧನರಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ  ಅವರ ಬದುಕಿನ ಪ್ರಮುಖ ಘಟ್ಟಗಳನ್ನು ದಾಖಲಿಸುವ ಪುಸ್ತಕವೊಂದು ಹೊರಬರುತ್ತಿರುವದು ವಿಶೇಷವಾಗಿದೆ.

ಬೆಂಗಳೂರಿನ ಪದ್ಮಾವತಿ ಮತ್ತು ಹಾಸ್ಯಸಾಹಿತಿ ಎನ್. ರಾಮನಾಥ್ ಅವರ ತೇಜು ಪಬ್ಲಿಕೇಷನ್ಸ್ ಈ ಪುಸ್ತಕ ಪ್ರಕಟಿಸಿದೆ. ಹೆಗಡೆಯವರ ಜೀವನದ ಅಪರೂಪದ ವಿವರಗಳು, ಅವರೊಂದಿಗೆ ಒಡನಾಡಿದವರ ನೆನಪುಗಳು, ಅವರ ಕೃತಿಗಳ ಕುರಿತಾದ ಅಭಿಪ್ರಾಯಗಳು, ಅವರ ಚಿಂತನೆಯ ಮಾದರಿಗಳು ಎಲ್ಲವನ್ನೂ ಒಳಗೊಂಡ ಪುಸ್ತಕವನ್ನು ಹೆಗಡೆ ಅವರ ಸಹೋದರ, ಪತ್ರಕರ್ತ ರಾಜಶೇಖರ ಜೋಗಿನ್ಮನೆ ಅವರು ಸಿದ್ಧಪಡಿಸಿದ್ದಾರೆ.
ಈ ‘ಅಣ್ಣ ಮಹಾಬಲ’ ಕೃತಿ ಏ. 9ರ ಶನಿವಾರ ಸಂಜೆ 4.30ಕ್ಕೆ ಲೋಕಾರ್ಪಣೆಯಾಗಲಿದೆ.

ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಪುಸ್ತಕ ಲೋಕಾರ್ಪಣೆ ಮಾಡಲಿದ್ದು, ಸೆಲ್ಕೋ ಸಂಸ್ಥೆಯ ಸಿಇಒ ಹಾಗೂ ಯಕ್ಷಗಾನ ಕಲಾವಿದ ಮೋಹನ ಭಾಸ್ಕರ ಹೆಗಡೆ ಅತಿಥಿಯಾಗಿ ಪಾಲ್ಗೊಳ್ಳುವರು. ಹಿರಿಯ ಸಾಹಿತಿ, ಕವಿ ಸುಬ್ರಾಯ ಮತ್ತಿಹಳ್ಳಿ ಕೃತಿಯ ಕುರಿತು ಮಾತನಾಡುವರು.

Advertisement

ಶಿರಸಿ ತಾಲೂಕು ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಹಾಗೂ ಕೃತಿಕಾರ ರಾಜಶೇಖರ ಜೋಗಿನ್ಮನೆ ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ಶಿರಸಿಯ ಶಬರ ಸಂಸ್ಥೆಯ  ಸಹಕಾರವಿದೆ ಎಂದು‌ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next