ರಾಂಚಿ: ಹುಲ್ಲೆಯ ಮೇಲೆ ಹುಲಿ ಎರಗಿದಂತೆ ಎಂಬ ಗಾದೆಯನ್ನು ನೆನಪಿಸುವಂತಿತ್ತು ಪುನೇರಿ ಪಲ್ಟಾನ್ ಮತ್ತು ಹರ್ಯಾಣ ಸ್ಟೀಲರ್ ನಡುವಿನ ಪ್ರೊ ಕಬಡ್ಡಿ ಪಂದ್ಯ. ಹೊಸ ತಂಡ ಮತ್ತು ಹೊಸ ಹುಡುಗರನ್ನೇ ಹೊಂದಿರುವ ಹರ್ಯಾಣ ಮೇಲೆ ಹುಲಿಗಳಂತೆ ಎರಗಿದ ಪುನೇರಿ ದಂಡು 37-25ರ ಭಾರೀ ಅಂತರದಿಂದ ಜಯಿಸಿತು.
ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಪಾಟ್ನಾ ಪೈರೇಟ್ಸ್ 36-32 ಅಂಕಗಳ ಜಯ ಕಂಡಿತು. ನಾಯಕ ವಜೀರ್ ವಿಫಲ ಮಂಗಳವಾರದ ಪ್ರೊ ಕಬಡ್ಡಿ ರಾಂಚಿ ಚರಣದ ಪಂದ್ಯದಲ್ಲಿ ಪುನೇರಿ ಪಲ್ಟಾನ್ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಹರ್ಯಾಣ ನಾಯಕ ವಜೀರ್ ಸಿಂಗ್ ತನ್ನ ನಾಯಕ ಸ್ಥಾನದ ಘನತೆಗೆ ತಕ್ಕಂತೆ ಆಡಲಿಲ್ಲ. ಅವರು ಪೂರ್ಣ ವಿಫಲರಾದರು. ಅವರ ಆಟ ತಂಡದ ಇತರ ಆಟಗಾರರಿಗೆ ಸ್ಫೂರ್ತಿ ನೀಡುವ ಮಟ್ಟದಲ್ಲಿ ಇರಲೇ ಇಲ್ಲ. ಇದರ ಜತೆಗೆ ಕರ್ನಾಟಕದ ಪ್ರಶಾಂತ್ ರೈಗೆ ಪೂರ್ಣ ಪ್ರಮಾಣದ ಅವಕಾಶ ಸಿಗಲೇ ಇಲ್ಲ. ಭರ್ತಿ ಅವಕಾಶ ಕೊಟ್ಟರೆ ಲಾಭ ತಂದುಕೊಡುವ ಎಲ್ಲ ಸಾಮರ್ಥ್ಯವಿದ್ದರೂ ಪ್ರಶಾಂತ್ ರೈ ಅವರನ್ನು ಇಡೀ ಪಂದ್ಯದ ಅಲ್ಲಲ್ಲಿ ಮಾತ್ರ ಬಳಸಿಕೊಂಡಿದ್ದು ಪ್ರಶ್ನಾರ್ಥಕವಾಗಿತ್ತು.
2 ಬಾರಿ ಆಲೌಟ್
ಪಂದ್ಯದಲ್ಲಿ ಹರ್ಯಾಣ 2 ಬಾರಿ ಆಲೌ ಟಾಯಿತು. ಮೊದಲ ಅವಧಿಯ 19ನೇ ನಿಮಿಷದಲ್ಲಿ ಹರ್ಯಾಣ ಸುಲಭವಾಗಿ ಆಲೌಟಾಯಿತು. ಆಗ ಹರ್ಯಾಣದ ಅಂಕ 10, ಪುನೇರಿ 15 ಆಗಿತ್ತು. 20ನೇ ನಿಮಿಷ ಮುಗಿದಾಗ ಹರ್ಯಾಣ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಎದುರಾಳಿಗೆ ಇನ್ನೊಂದು ಅಂಕ ಬಿಟ್ಟುಕೊಟ್ಟಿತು.
2ನೇ ಅವಧಿಯಲ್ಲಿ, ಅಂದರೆ 36ನೇ ನಿಮಿಷದಲ್ಲಿ ಹರ್ಯಾಣ ಮತ್ತೂಮ್ಮೆ ಆಲೌಟಾಯಿತು. ಹರ್ಯಾಣದ ಆಟ ನೋಡಿದಾಗ ಇದು ನಿರೀಕ್ಷಿತವೇ ಆಗಿತ್ತು. ಆಗ ಹರ್ಯಾಣದ ಅಂಕ 20, ಪುನೇರಿ 33. ಹರ್ಯಾಣದ ಬಲವಿಲ್ಲದ ಆಟವನ್ನು ನೋಡಿದಾಗ ಅದು 2 ಬಾರಿ ಮಾತ್ರ ಆಲೌಟಾಗಿದ್ದೇ ಕಡಿಮೆಯೆನಿಸುವಂತಿತ್ತು.
ಹರ್ಯಾಣ ಪಾಲಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು ಅನನುಭವಿ ಆಟಗಾರರು. ಪ್ರೊ ಕಬಡ್ಡಿಯ ಪ್ರತಿಭಾ ವನ್ವೇಷಣೆಯಲ್ಲಿ ಸ್ಥಾನ ಪಡೆದ ಬಹುತೇಕರು ಇದ್ದ ಪರಿಣಾಮ ಅಲ್ಲಿ ಸಾಮರ್ಥ್ಯ, ಕೌಶಲದ ಜತೆಗೆ ದೇಹಬಲವೂ ಕಡಿಮೆಯಿತ್ತು. ವಿಫಲರಾದರು.
ಕೆ. ಪೃಥ್ವಿಜಿತ್