ಮುಂಬಯಿ: ಪ್ರೊ ಕಬಡ್ಡಿ 5ನೇ ಆವೃತ್ತಿಯಲ್ಲಿ ಅಂಬೆಗಾಲಿಟ್ಟ ಗುಜರಾತ್ ಫಾರ್ಚೂನ್‌ಜೈಂಟ್ ತಂಡ ಈಗ ಎಲ್ಲರಿಗೂ ಅಚ್ಚರಿಯಾಗಬಲ್ಲ ಫಲಿತಾಂಶವೊಂದನ್ನು ನೀಡಿದೆ. ಕ್ವಾಲಿಫೈಯರ್ 1ರಲ್ಲಿ ಗುಜರಾತ್ 42-17 ಅಂತರ ದಿಂದ ಬೆಂಗಾಲ್ ವಾರಿಯರ್ ತಂಡವನ್ನು ಸೋಲಿಸುವ ಮೂಲಕ ಕೂಟದ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಸೋತ ಬೆಂಗಾಲ್ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡ ದೊಂದಿಗೆ ಮತ್ತೂಂದು ಅಗ್ನಿಪರೀಕ್ಷೆ ಎದುರಿಸಲಿದೆ. ಇಲ್ಲಿ ಗೆದ್ದವರಿಗೆ ಫೈನಲ್ ಟಿಕೆಟ್ ಲಭಿಸಲಿದೆ.
ಮಂಗಳವಾರದ ಪಂದ್ಯದಲ್ಲಿ ಗುಜರಾತ್ ಸುಲಭವಾಗಿ ಬೆಂಗಾಲ್‌ಗೆ ನೀರು ಕುಡಿಸಿತು. ಬೆಂಗಾಲ್ ತಂಡವನ್ನು ಫೈನಲ್‌ಗೆ ಕರೆದೊಯ್ಯಲು ಪ್ರಮುಖ ರೈಡರ್ ದೀಪಕ್ ನರ್ವಲ್ (5 ಅಂಕ) ನಡೆಸಿದ್ದೇ ಶ್ರೇಷ್ಠ ಹೋರಾಟ. ಉಳಿದಂತೆ ತಾರಾ ಆಟಗಾರರು ರಕ್ಷಣಾ ಹಾಗೂ ದಾಳಿಯಲ್ಲಿ ಕೈಕೊಟ್ಟರು. ಗುಜರಾತ್ ತಂಡವನ್ನು ಗೆಲ್ಲಿಸಿದ್ದು ಸಚಿನ್ (9 ಅಂಕ) ಹಾಗೂ ಮಹೇಂದ್ರ ರಜಪೂತ್ (8 ಅಂಕ) ಅವರ ಮಿಂಚಿನ ರೈಡಿಂಗ್.
ಗುಜರಾತ್ ಪಾರಮ್ಯ: ಬೆಂಗಾಲ್ ಮೇಲೆ ಗುಜರಾತ್ ಆರಂಭದಿಂದಲೂ ಅಬ್ಬರಿಸಿತು. ಒಂದೊಂದು ಅಂಕವನ್ನು ಗಳಿಸುತ್ತ ಸಾಗಿತು. ಆದರೆ ಮೊದಲ ಅವಧಿಯ ಆಟದಲ್ಲಿ ಬೆಂಗಾಲ್ ಕೂಡ ಇದಕ್ಕೆ ಸರಿಯಾದ ಉತ್ತರವನ್ನೇ ನೀಡಲು ಆರಂಭಿಸಿತು. ಮೊದಲ ಅವಧಿ ಮುಗಿದಾಗ ಗುಜರಾತ್ 12 ಅಂಕ, ಬೆಂಗಾಲ್ 10 ಅಂಕ ಗಳಿಸಿತ್ತು.
ಆದರೆ 2ನೇ ಅವಧಿಯಲ್ಲಿ ಬೆಂಗಾಲ್ ಸಂಪೂರ್ಣ ದಿಕ್ಕು ತಪ್ಪಿತು. ಅಂಕ ಗಳಿಸಲು ಅದಕ್ಕೆ ಸಾಧ್ಯವೇ ಆಗಲಿಲ್ಲ. ಅಷ್ಟರ ಮಟ್ಟಿಗೆ ಗುಜರಾತ್ ಆಟಗಾರರು ಪಾರಮ್ಯ ಸಾಧಿಸಿದರು. ನೋಡುನೋಡುತ್ತಿದ್ದಂತೆ ಗುಜರಾತ್ ಅಂಕ ಗಳಿಕೆಯಲ್ಲಿ ಭಾರೀ ಮುನ್ನಡೆ ಕಾಯ್ದುಕೊಂಡಿತು. ಸುಕೇಶ್ ಹೆಗ್ಡೆ ಕದನಕ್ಕೆ ಇಳಿಯಲಿಲ್ಲ. ಹೆಚ್ಚುವರಿ ಆಟಗಾರರಾಗಿ ಅವರು ಬೆಂಚ್‌ನಲ್ಲಿಯೇ ಕುಳಿತುಕೊಳ್ಳಬೇಕಾಯಿತು.
ಕುನ್ ಲೀ ವೈಫಲ್ಯ: ಲೀಗ್ ಹಂತದಿಂದಲೂ ಬೆಂಗಾಲ್ ಬೆನ್ನೆಲುಬಾಗಿ ನಿಂತಿದ್ದ ಕೊರಿಯಾ ಮೂಲದ ಬೆಂಗಾಲ್ ಸ್ಟಾರ್ ರೈಡರ್ ಕುನ್ ಲೀ ಭಾರೀ ವೈಫಲ್ಯ ಅನುಭವಿಸಿದರು. 5 ರೈಡಿಂಗ್‌ನಿಂದ 1 ಅಂಕ ಗಳಿಸಿದ್ದಷ್ಟೇ ಅವರ ಸಾಧನೆ.