Advertisement

ಯೋಧಾಗೆ ಒಲಿದೀತೇ ಫೈನಲ್‌ ಟಿಕೆಟ್‌?

12:30 AM Jan 03, 2019 | |

ಮುಂಬಯಿ: 2017ರಲ್ಲಿ ಪ್ರೊ ಕಬಡ್ಡಿ ಕುಟುಂಬಕ್ಕೆ ಸೇರಿಕೊಂಡ ಯುಪಿ ಯೋಧ ತಂಡ ಆರಂಭಿಕ ಆವೃತ್ತಿಯಲ್ಲೇ ಎಲಿಮಿನೇಟರ್‌ ಹಂತದ ವರೆಗೆ ತಲುಪಿ ಅಚ್ಚರಿ ಮೂಡಿಸಿತ್ತು. ಈ ಬಾರಿ ಕೂಡ ಇದೇ ಪ್ರದರ್ಶನವನ್ನು ಪುನರಾವರ್ತಿಸಿದ್ದು, ಫೈನಲ್‌ ಪ್ರವೇಶವನ್ನು ಎದುರು ನೋಡುತ್ತಿದೆ. ಕೇವಲ ಒಂದು ಹೆಜ್ಜೆ ಹಿಂದಿದೆ.

Advertisement

ಗುರುವಾರ ಮುಂಬಯಿಯಲ್ಲಿ ನಡೆಯುವ 3ನೇ ಕ್ವಾಲಿಫೈಯರ್‌ನಲ್ಲಿ ಯುಪಿ ಯೋಧ ಮತ್ತು ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಮುಖಾಮುಖೀಯಾಗಲಿದ್ದು, ಗೆದ್ದ ತಂಡ ಶನಿವಾರದ ಪ್ರಶಸ್ತಿ ಸಮರದಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ ಸೆಣಸಲಿದೆ. ಗುಜರಾತ್‌ “ಎ’ ವಲಯದ ಅಗ್ರಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸಿತ್ತು.

“ಬಿ’ ವಲಯದ 3ನೇ ಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸಿದ ಯುಪಿ ಯೋಧ ಎಲಿಮಿನೇಟರ್‌ನಲ್ಲಿ ನೆಚ್ಚಿನ ಯು ಮುಂಬಾ ತಂಡವನ್ನು 34-29 ಅಂಕಗಳಿಂದ ಸೋಲಿಸಿ ಕ್ವಾಲಿಫೈಯರ್‌ಗೆ ಲಗ್ಗೆಯಿಟ್ಟಿತ್ತು.

ಯುಪಿ ಯೋಧ ಅದೃಷ್ಟದಾಟ
ಯುಪಿ ಯೋಧ ತಂಡದ ಫ್ಲೇ-ಆಫ್ ಪ್ರವೇಶದಲ್ಲಿ ಅದೃಷ್ಟದ ಪಾತ್ರ ನಿರ್ಣಾಯಕವಾಗಿತ್ತು. “ಬಿ’ ವಲಯದಲ್ಲಿ ಅಗ್ರಸ್ಥಾನ ಹೊರತುಪಡಿಸಿ ಉಳಿದೆರಡು ಸ್ಥಾನಗಳಿಗಾಗಿ 4 ತಂಡಗಳ ನಡುವೆ ತೀವ್ರ ಪೈಪೋಟಿಯೇ ಏರ್ಪಟ್ಟಿತ್ತು. ಲೀಗ್‌ ಹಂತದ ಅಂತ್ಯದ ವರೆಗೂ “ಬಿ’ ವಲಯದ 3ನೇ ಸ್ಥಾನ ಯಾರಿಗೊಲಿಯಲಿದೆ ಎಂಬುದು ನಿರ್ಣಯವಾಗಿರಲಿಲ್ಲ. ಅಂತಿಮ ಲೀಗ್‌ ಪಂದ್ಯದಲ್ಲಿ  ಬೆಂಗಾಲ್‌ ವಾರಿಯರ್ ತಂಡವನ್ನು 41-25 ಅಂಕಗಳಿಂದ ಹಿಮ್ಮೆಟ್ಟಿಸಿದ ಯುಪಿ ಯೋಧ, ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್‌ ತಂಡವನ್ನು ಕೂಟದಿಂದಲೇ ಹೊರಗಟ್ಟಿತು.

ಗುಜರಾತ್‌ ಹೆಚ್ಚು ಬಲಿಷ್ಠ
22 ಪಂದ್ಯಗಳಲ್ಲಿ 8ರಲ್ಲಿ ಜಯಿಸಿರುವ ಯುಪಿ ಯೋಧ ತಂಡಕ್ಕೆ ಕ್ವಾಲಿಫೈಯರ್‌ನಲ್ಲೂ ಅದೃಷ್ಟ ಒಲಿದೀತೇ ಎಂಬುದೊಂದು ಕುತೂಹಲ. ಇಲ್ಲಿ ಮುಖಾಮುಖೀಯಾಗಲಿರುವ ಗುಜರಾತ್‌ ತಂಡ ಕೂಟದಲ್ಲೇ ಹೆಚ್ಚು ಬಲಿಷ್ಠವಾಗಿದೆ. ಲೀಗ್‌ ಹಂತದಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಜಯಿಸಿದ ಹೆಗ್ಗಳಿಕೆ ಗುಜರಾತ್‌ ತಂಡದ್ದು. ಅದು 22ರಲ್ಲಿ 17 ಪಂದ್ಯಗಳನ್ನು ತನ್ನದಾಗಿಸಿಕೊಂಡಿದೆ. ಆದರೆ ಕ್ವಾಲಿಫೈಯರ್‌ ಎಂಬುದು ಬೇರೆಯೇ ಪಂದ್ಯ.

Advertisement

ಗುಜರಾತ್‌ ತಂಡ ರೈಡಿಂಗ್‌ನಲ್ಲಿ ಬಲಿಷ್ಠ. ಇದು ಯೋಧಾಗೆ ಮುಳುವಾಗುವ ಸಾಧ್ಯತೆ ಇದೆ. ಒಂದು ವೇಳೆ ಕ್ವಾಲಿಫೈಯರ್‌ನಲ್ಲಿ ಯೋಧ ಜಯಿಸಿದರೆ ಮೊದಲ ಸಲ ಫೈನಲ್‌ ಪ್ರವೇಶಿಸಿ ಇತಿಹಾಸ ಸೃಷ್ಟಿಸಲು ಸಿದ್ದವಾಗಲಿದೆ.ಯುಪಿ ಯೋಧ ತಂಡದ ಬೆನ್ನೆಲುಬುಗಳೆಂದರೆ ನಾಯಕ ರಿಶಾಂಕ್‌ ದೇವಾಡಿಗ, ಪ್ರಶಾಂತ್‌ ಕುಮಾರ್‌ ರೈ ಹಾಗೂ ಶ್ರೀಕಾಂತ್‌ ಯಾದವ್‌. ಈ ಮೂವರೊಂದಿಗೆ ಉಳಿದ ಆಟಗಾರರ ಪ್ರಯತ್ನ ಕೈಹಿಡಿಯಬೇಕಿದೆ. ಸಾಮಾನ್ಯ ಮಟ್ಟದ ಡಿಫೆನ್ಸ್‌ ಹಾಗೂ ಅಸಮರ್ಪಕ ದಾಳಿಯಿಂದಾಗಿ ವ್ಯಾಪಕ ಟೀಕೆಗೆ ಒಳಗಾಗಿದ್ದ ಯೋಧ ಈ ತಪ್ಪುಗಳನ್ನು ಮರುಕಳಿಸದಂತೆ ನೋಡಿಕೊಳ್ಳುವುದು ಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next