ನಾಗ್ಪುರ: ಸತತ ಎರಡು ಗೆಲುವು ಸಾಧಿಸಿದ್ದ ಆತಿಥೇಯ ಬೆಂಗಳೂರು ತಂಡ ಪ್ರೊ ಕಬಡ್ಡಿ ಲೀಗ್ 5ರ ಹೊಸ ತಂಡವಾದ ಯುಪಿ ಯೋಧಾಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಆಘಾತಕಾರಿ ಸೋಲನ್ನು ಕಂಡಿದೆ. ಈ ಮೊದಲು ನಡೆದ ಪಂದ್ಯದಲ್ಲಿ ಯು ಮುಂಬಾ ತಂಡವು ದಬಾಂಗ್ ಡೆಲ್ಲಿ ತಂಡವನ್ನು 36-22 ಅಂಕಗಳಿಂದ ಕೆಡಹಿತ್ತು.
ಪಂದ್ಯದ ಆರಂಭದಿಂದಲೇ ಮುನ್ನಡೆ ಸಾಧಿಸಿದ್ದ ಯುಪಿ ತಂಡವು ಬೆಂಗಳೂರಿಗೆ ಮೇಲುಗೈ ಸಾಧಿಸಲು ಅವಕಾಶವನ್ನೇ ನೀಡಲಿಲ್ಲ. ರೈಡಿಂಗ್ ಮತ್ತು ಕ್ಯಾಚಿಂಗ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ ಯುಪಿ ತಂಡ 32 27 ಅಂಕಗಳಿಂದ ಗೆಲುವು ಸಾಧಿಸಿ ಸಂಭ್ರಮಿಸಿತು. ಇದು ಯುಪಿ ತಂಡದ ಸತತ ಎರಡನೇ ಗೆಲುವು ಸಾಗಿದೆ.
ಇಲ್ಲಿನ ಮಂಕಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದುದ್ದಕ್ಕೂ ಯು ಮುಂಬಾ ಆಟಗಾರರು ಮೇಲುಗೈ ಸಾಧಿಸಿದರು. ಆರಂಭದಲ್ಲಿ ಡೆಲ್ಲಿ ತಂಡ 2 ಅಂಕಗಳ ಮುನ್ನಡೆ ಸಾಧಿಸಿದ್ದು ಹೊರತುಪಡಿಸಿದರೆ ಮುಂದೆ ಯು ಮುಂಬಾ ತಂಡ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ.
ಕ್ರಿಡಾಂಗಣದಲ್ಲಿ ಭರ್ತಿಯಾಗಿದ್ದ ಪ್ರೇಕ್ಷಕರು ಯು ಮುಂಬಾ ತಂಡಕ್ಕೆ ಬೆಂಬಲಿಸುತ್ತಿದ್ದರು. ಪಂದ್ಯ ಆರಂಭಗೊಂಡ 7ನೇ ನಿಮಿಷದಲ್ಲಿ ದಬಾಂಗ್ ಡೆಲ್ಲಿ ಆಲೌಟ್‌ನಿಂದ ಮೊದಲ ಬಾರಿ ಒತ್ತಡಕ್ಕೊಳಗಾಯಿತು. ಆಗ ಯು ಮುಂಬಾ 10-2ರಿಂದ ಭಾರೀ ಮುನ್ನಡೆ ಗಳಿಸಿತ್ತು.
ಡೆಲ್ಲಿ ತಂಡದ ಮಿರಾಜ್ ಶೇಖ್ ಅನುಪಸ್ಥಿತಿಯಲ್ಲಿ ರೈಡರ್ ನಿಲೇಶ್ ಶಿಂದೆ ಮೊದಲ 10 ನಿಮಿಷಗಳವರೆಗೆ ತಂಡದ ನಾಯಕತ್ವ ನಿರ್ವಹಿಸಿದರು. ಅವರು ದಾಳಿ ಮೂಲಕ ಅಂಕ ಗಳಿಕೆಗೆ ಕಸರತ್ತು ಮಾಡಿದರಾದರೂ ದಾಳಿಗೆ ತಕ್ಕ ಪ್ರತಿಫಲ ಸಿಗಲಿಲ್ಲ. ಇನ್ನೊಂದೆಡೆ ಯು ಮುಂಬಾ ನಾಯಕ ಅನೂಪ್ ಕುಮಾರ್ ಹಾಗೂ ಕರ್ನಾಟಕದ ಪ್ರತಿಭೆ ಶಬ್ಬೀರ್ ಬಾಪು ತಂಡದ ಅಂಕಗಳನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು.
ದ್ವಿತಿಯಾರ್ಧದಲ್ಲಿ ಡೆಲ್ಲಿ ತಂಡ ಪ್ರತಿ ಹೋರಾಟ ನೀಡಲು ನಿರಂತರ ಪ್ರಯತ್ನ ನಡೆಸಿತು. ಯು ಮುಂಬಾ ತಂಡದ ಡಿಫೆಂಡರ್‌ಗಳು ಅಂತರ ಕಡಿಮೆಗೊಳಿಸಲು ಅವಕಾಶ ನೀಡಲಿಲ್ಲ. ಸ್ಕೋರ್ 28-15 ಆದ ಸಂದರ್ಭದಲ್ಲಿ ನಾಯಕ ಅನೂಪ್ ಒಬ್ಬರೇ ಅಂಕಣದಲ್ಲಿ ಉಳಿದಿದ್ದರೂ ತಂಡ ಆಲೌಟ್ ಆಗಲು ಅವಕಾಶ ನೀಡಲಿಲ್ಲ. ಬೋನಸ್ ಸೇರಿದಂತೆ 3 ಅಂಕಗಳನ್ನು ಗಳಿಸುವ ಮೂಲಕ ವ್ಯವಸ್ಥಿತ ದಾಳಿಗಳ ಮೂಲಕ ತಂಡದ ಪಟುಗಳೆಲ್ಲ ಮರಳಿ ಅಂಕಣಕ್ಕೆ ಮರಳುವಂತೆ ಮಾಡಿದರು.