ಬೆಂಗಳೂರು: ದಬಾಂಗ್ ಡೆಲ್ಲಿ ಮೊದಲ ಸಲ ಪ್ರೊ ಕಬಡ್ಡಿ ಕಿರೀಟ ಏರಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದೆ. ಶುಕ್ರವಾರದ ತೀವ್ರ ಪೈಪೋಟಿಯ ಮುಖಾಮುಖೀಯಲ್ಲಿ ಅದು 3 ಬಾರಿಯ ಚಾಂಪಿಯನ್ ಹಾಗೂ ಮೆಚ್ಚಿನ ತಂಡ ಪಾಟ್ನಾ ಪೈರೇಟ್ಸ್ ತಂಡವನ್ನು ರೋಚಕ ಹೋರಾಟದಲ್ಲಿ 37-36 ಅಂತರದಿಂದ ಮಣಿಸಿತು.
ವಿರಾಮದ ತನಕ ಹಿನ್ನಡೆಯಲ್ಲೇ ಇದ್ದ ಡೆಲ್ಲಿ, ದ್ವಿತೀಯಾರ್ಧದಲ್ಲಿ ತಿರುಗಿ ಬೀಳುವ ಮೂಲಕ ಪಾಟ್ನಾದ 4ನೇ ಪಟ್ಟದ ಕನಸನ್ನು ಛಿದ್ರಗೊಳಿಸಿತು. ಆಲ್‌ರೌಂಡರ್ ವಿಜಯ್ 14 ಅಂಕ, ಸ್ಟಾರ್ ರೈಡರ್ ನವೀನ್ ಕುಮಾರ್ 13 ಅಂಕ ಬಾಚಿ ದಿಲ್ಲಿ ಗೆಲುವಿನ ಹೀರೋಗಳೆನಿಸಿದರು. ನವೀನ್ ಕುಮಾರ್ ಈ ಋತುವಿನಲ್ಲಿ 200 ರೈಡಿಂಗ್ ಅಂಕ ಗಳಿಸಿ ಮೆರೆದರು. ಕಳೆದ ವರ್ಷವೂ ಫೈನಲ್ ಪ್ರವೇಶಿಸಿದ್ದ ಡೆಲ್ಲಿ, ಬೆಂಗಾಲ್ ವಾರಿಯರ್ ವಿರುದ್ಧ ಎಡವಿತ್ತು. ಪಾಟ್ನಾ ಪರ ರೈಡರ್‌ಗಳಾದ ಸಚಿನ್ 10 ಮತ್ತು ಗುಮನ್ ಸಿಂಗ್ 9 ಅಂಕ ಗಳಿಸಿದರು.
ಜಿದ್ದಾಜಿದ್ದಿ ಪೈಪೋಟಿ: ನಿರೀಕ್ಷೆಯಂತೆ ಎರಡೂ ತಂಡಗಳು ಜಿದ್ದಾಜಿದ್ದಿ ಹೋರಾಟಕ್ಕಿಳಿದವು. ಜೋಶ್ ಕೂಡ ಅಮೋಘ ಮಟ್ಟದಲ್ಲಿತ್ತು. ಮೊದಲ ರೈಡ್ ನಡೆಸಿದ ನವೀನ್ ಕುಮಾರ್ ಡೆಲ್ಲಿಗೆ, ಸಚಿನ್ ಪಾಟ್ನಾಕ್ಕೆ ಮೊದಲ ಅಂಕ ತಂದಿತ್ತರು. ಮೊದಲಾರ್ಧದಲ್ಲಿ ನೆಚ್ಚಿನ ತಂಡವಾಗಿದ್ದ ಪಾಟ್ನಾವೇ ಸಣ್ಣ ಅಂತರದ ಮೇಲುಗೈ ಸಾಧಿಸುತ್ತ ಹೋಯಿತು. ಡೆಲ್ಲಿಯೂ ಸಮಬಲದ ಹೋರಾಟ ಜಾರಿಯಲ್ಲಿರಿಸಿದರೂ ಪಾಟ್ನಾವನ್ನು ಓವರ್‌ಟೇಕ್ ಮಾಡಲು ಸಾಧ್ಯವಾಗಲಿಲ್ಲ. 3-3, 4-4, 5-5ರ ಸಮಬಲ ಸಾಧಿಸಿತ್ತಷ್ಟೇ. ಹತ್ತೇ ನಿಮಿಷದಲ್ಲಿ ದಿಲ್ಲಿಯ ಅಂಕಣ ಖಾಲಿ ಆಯಿತು.
ಅನಂತರದ ಹಂತದಲ್ಲಿ ಪಾಟ್ನಾ ಅಲ್ಪ ಮುನ್ನಡೆ ಕಾಯ್ದುಕೊಂಡೇ ಮುಂದುವರಿಯಿತು. ವಿರಾಮದ ವೇಳೆ ಪ್ರಶಾಂತ್ ಕುಮಾರ್ ರೈ ಬಳಗ 17-15ರ ಸಣ್ಣ ಲೀಡ್ ಹೊಂದಿತ್ತು. ವಿರಾಮದ ಬಳಿಕವೂ ವಾತಾವರಣ ಬಿಗುವಿನಿಂದಲೇ ಕೂಡಿತ್ತು. ದಿಲ್ಲಿಯ ಮೇಲುಗೈ ಪ್ರಯತ್ನ ಸಫಲವಾಗಲಿಲ್ಲ. ಪಾಟ್ನಾ ಸಣ್ಣ ಅಂತರದ ಮುನ್ನಡೆಯನ್ನು ಕಾಯ್ದುಕೊಂಡೇ ಮುಂದುವರಿಯಿತು. ಕೊನೆಯ 10 ನಿಮಿಷದಲ್ಲಿ ದಿಲ್ಲಿ 24-24 ಸಮಬಲಕ್ಕೆ ತಂದಾಗ ಪಂದ್ಯದ ಕುತೂಹಲ ತೀವ್ರಗೊಂಡಿತು. ಅಂತಿಮ ಹಂತದಲ್ಲಿ ಪಂದ್ಯ ಯಾವುದೇ ತಿರುವನ್ನು ಪಡೆಯುವ ಸಾಧ್ಯತೆ ಇತ್ತು.
ಈ ಹಂತದಲ್ಲಿ ನವೀನ್ ಸೂಪರ್ 10′ ಸಾಧನೆಯೊಂದಿಗೆ ಡೆಲ್ಲಿಗೆ ಮೊದಲ ಸಲ ಮೇಲುಗೈ ಒದಗಿಸಿದರು. ಆಗ ಸ್ಕೋರ್ 25-24ಕ್ಕೆ ಬಂದು ನಿಂತಿತು. ಇದು ಡೆಲ್ಲಿಯ ಅದೃಷ್ಟವನ್ನೇ ಬದಲಿಸಿತು. ಗುಮನ್ ಡು ಆರ್ ಡೈ ಮೂಲಕ ಪಂದ್ಯವನ್ನು ಮತ್ತೆ ಸಮಬಲಕ್ಕೆ ತಂದರು. ಬಳಿಕ ವಿಜಯ್ ತಂದಿತ್ತ 2 ಬೋನಸ್ ಅಂಕದ ನೆರವಿನಿಂದ ಡೆಲ್ಲಿ, ಪಾಟ್ನಾವನ್ನು ಮೀರಿ ನಿಂತಿತು. ಅಂತಿಮ 6 ನಿಮಿಷದಲ್ಲಿ ಪಂದ್ಯದ ಕೌತುಕ ಇನ್ನಷ್ಟು ಹೆಚ್ಚಿತು. ವಿಜಯ್ ಸೂಪರ್ ರೈಡ್ ಮೂಲಕ 3 ಅಂಕ ಗಳಿಸಿ ಡೆಲ್ಲಿಯ ಮುನ್ನಡೆಯನ್ನು 35-30ಕ್ಕೆ ಏರಿಸಿದರು. ಆಗ ಪಾಟ್ನಾದ ಪತನ ಖಾತ್ರಿಯಾಯಿತು.