ಪಾಟ್ನಾ: ದೀಪಕ್ ನರ್ವಾಲ್ (9 ಅಂಕ) ರೈಡಿಂಗ್ ಹಾಗೂ ಡಿಫೆಂಡರ್ ಸಂದೀಪ್ ಧುಲ್ (8 ಅಂಕ) ಭರ್ಜರಿ ಟ್ಯಾಕಲ್ನಿಂದಾಗಿ ಪ್ರೊ ಕಬಡ್ಡಿ 7ನೇ ಆವೃತ್ತಿಯ ಪಾಟಾಲಿಪುತ್ರ ಚರಣದ ಮೊದಲ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ ತಂಡವನ್ನು 34-21 ಅಂಕಗಳ ಅಂತರದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ಸೋಲಿಸಿದೆ
ಜೈಪುರ ಪಿಂಕ್ ಪ್ಯಾಂಥರ್ಸ್ ಈ ಗೆಲುವಿನೊಂದಿಗೆ ಸತತ 4ನೇ ಗೆಲುವು ಸಾಧಿಸಿ ಮುನ್ನಡೆದಿದೆ. ಪಾಟ್ನಾಗೆ ಇದು ಕೂಟದಲ್ಲಿ ಒಟ್ಟಾರೆ ಎರಡನೇ ಸೋಲಾಗಿದೆ.
ಶನಿವಾರದ ಮೊದಲ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ ತಂಡದ ಪರ ಪರ್‌ದೀಪ್ (9 ಅಂಕ) ರೈಡಿಂಗ್‌ನಿಂದ ಮಿಂಚಿದರು. ಆದರೆ ಉಳಿದ ಆಟಗಾರರು ವಿಫಲರಾಗುವುದರೊಂದಿಗೆ ಪಾಟ್ನಾ ಸೋಲು ಅನುಭವಿಸುವಂತಾಯಿತು. ತಾರಾ ಆಟಗಾರ ನೀರಜ್ (2 ಅಂಕ) ಟ್ಯಾಕಲ್ನಲ್ಲಿ ವಿಫಲರಾದರು. ಒಟ್ಟಾರೆ ಪಾಟ್ನಾದ ರಕ್ಷಣಾ ವಿಭಾಗ ತುಂಬಾ ದುರ್ಬಲವಾಗಿತ್ತು. ಜೈಪುರ ಎಲ್ಲ ವಿಭಾಗದಲ್ಲೂ ಮಿಂಚಿನ ಆಟವನ್ನು ಪ್ರದರ್ಶಿಸಿತು. ಸಂಘಟಿತ ಆಟಕ್ಕೆ ಆ ತಂಡಕ್ಕೆ ಜಯ ಒಲಿದು ಬಂತು.
ಬೆಂಗಾಲ್ ಗೆ ಸೋಲು
ಮತ್ತೂಂದು ಪಂದ್ಯದಲ್ಲಿ ಪವನ್ ಸೆಹ್ರಾವತ್ (29 ಅಂಕ) ಪ್ರಚಂಡ ರೈಡಿಂಗ್‌ನಿಂದಾಗಿ ಬೆಂಗಳೂರು ಬುಲ್ಸ್ 43-42 ಅಂತರದಿಂದ ಬೆಂಗಾಲ್ ತಂಡವನ್ನು ಮಣಿಸಿದೆ.
ಪವನ್ ಸೆಹ್ರಾವತ್ ಬಿರುಗಾಳಿ ಯಂತೆ ಬೆಂಗಾಲ್ ಮೇಲೆ ಅಪ್ಪಳಿಸಿದರು. ಒಟ್ಟಾರೆ 30 ಸಲ ಎದುರಾಳಿ ಕೋಟೆಯೊಳಗೆ ಲಗ್ಗೆ ಇಟ್ಟ ಬೆಂಗಳೂರು ರೈಡರ್ ಬರೋಬ್ಬರಿ 26 ಟಚ್ ಪಾಯಿಂಟ್ ಹಾಗೂ ಅಮೋಘ 3 ಬೋನಸ್‌ನಿಂದ ತಂಡಕ್ಕೆ ನೆರವಾದರೆ ಬುಲ್ಸ್ ಪರ ಟ್ಯಾಕಲ್ನಲ್ಲಿ ಸೌರಭ್ (6 ಅಂಕ) ಗಮನ ಸೆಳೆದರು. ಕೆ.ಪ್ರಪಂಜನ್ (12 ಅಂಕ) , ಮಣಿಂದರ್ ಸಿಂಗ್ (11 ಅಂಕ) ರೈಡಿಂಗ್, ಆಲ್ರೌಂಡರ್ ನಬೀಭಕ್ಷ್ (8 ಅಂಕ) ತಂಡದ ಗೆಲುವಿಗೆ ಪ್ರಯತ್ನಿಸಿದರೂ ಕೊನೆಯಲ್ಲಿ 1 ಅಂಕದಿಂದ ಸೋಲಬೇಕಾಯಿತು.