ಹೊಸದಿಲ್ಲಿ: ತಾರಾ ರೈಡರ್ ಸಿದ್ಧಾರ್ಥ್ ದೇಸಾಯಿ ಅವರ ಸಾಹಸಮಯ ಆಲ್‌ರೌಂಡ್ ಪ್ರದರ್ಶನದಿಂದ (19 ಅಂಕ) ಯು ಮುಂಬಾ ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ದಬಾಂಗ್ ಡೆಲ್ಲಿ ವಿರುದ್ಧ 41-34 ಅಂಕಗಳ ಗೆಲುವು ಸಾಧಿಸಿದೆ.
ಇದರೊಂದಿಗೆ ಯು ಮುಂಬಾ ಒಟ್ಟಾರೆ 67 ಅಂಕ ಸಂಪಾದಿಸಿ “ಎ’ ವಲಯದಿಂದ ಅಗ್ರಸ್ಥಾನಕ್ಕೆ ಏರಿತು. ಇದು 17 ಪಂದ್ಯಗಳಿಂದ ಮುಂಬಾಗೆ ಒಲಿದ 12ನೇ ಜಯ.
“ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಸೆಣಸಾಟ ನಡೆಯಿತು. ಒಂದು ಹಂತದಲ್ಲಿ ಎರಡೂ ತಂಡಗಳು ಕೂಡ 30-30 ಅಂಕಗಳ ಸಮಬಲ ಸಾಧಿಸಿಕೊಂಡಿದ್ದವು. ಇದರಿಂದ ಪಂದ್ಯ ರೋಚಕ ಘಟ್ಟದತ್ತ ಸಾಗಿತು. ಆದರೆ ಸಿದ್ಧಾರ್ಥ್, ರೋಹಿತ್ ಬಲಿಯಾನ್ (5 ಅಂಕ), ವಿನೋದ್ ಕುಮಾರ್ (4 ಅಂಕ) ಪಟ್ಟು ಬಿಡದೆ ಆಟವಾಡಿದರು. ತಪ್ಪಿ ಹೋಗುತ್ತಿದ್ದ ಗೆಲುವನ್ನು ಮುಂಬಾ ಕಡೆಗೆ ಎಳೆದು ತಂದರು.
ಫಲ ಕೊಡದ ನವೀನ್, ಚಂದ್ರನ್ ಆಟ
ದಬಾಂಗ್ ಡೆಲ್ಲಿ ರೈಡರ್‌ಗಳಾದ ನವೀನ್ ಕುಮಾರ್ (12), ಚಂದ್ರನ್ ರಂಜಿತ್ (7) ತಂಡದ ಗೆಲುವಿಗೆ ಸಾಕಷ್ಟು ಶ್ರಮವಹಿಸಿದರು. ಆದರೆ ಟ್ಯಾಕಲ್‌ನಲ್ಲಿ ಡೆಲ್ಲಿ ಆಟಗಾರರು ವಿಫಲರಾದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.