ಸೋನೆಪತ್(ಹರ್ಯಾಣ): ಕೊನೆಯ 2 ನಿಮಿಷದ ಆಟದಲ್ಲಿ ಬೆಂಗಾಲ್ ವಾರಿಯರ್ ಎದುರಿಗಿದ್ದ ಸೋಲು ಗೆಲುವಾಗಿ ಮಾರ್ಪಟ್ಟಿತು.
ಹೌದು, ಇಲ್ಲಿನ ಮೋತಿಲಾಲ್ ನೆಹರೂ ಸ್ಕೂಲ್ ಆಫ್ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಮಂಗಳವಾರ ನಡೆದ ರೋಚಕ ಪಂದ್ಯದಲ್ಲಿ ಬೆಂಗಾಲ್ 32-31 ಅಂತರದ ವೀರೋಚಿತ ಗೆಲುವು ಸಾಧಿಸಿತು. ಬೆಂಗಾಲ್ ಗೆಲುವಿಗೆ ಕಾರಣವಾಗಿದ್ದು ಜಾಂಗ್ ಕುನ್ ಲೀ (9 ರೈಡಿಂಗ್ ಅಂಕ) ಮಿಂಚಿನ ರೈಡಿಂಗ್. ಅಲ್ಲದೆ ಮಣೀಂದರ್ ಸಿಂಗ್ (7 ರೈಡಿಂಗ್ ಅಂಕ) ಹಾಗೂ ಸುರ್ಜಿತ್ ಸಿಂಗ್ (5 ಟ್ಯಾಕಲ್ ಅಂಕ) ಅವರ ಕೊನೆಯ ನಿಮಿಷದ ಸಾಹಸಮಯ ಆಟ. ಒಂದು ಹಂತದಲ್ಲಿ 30-20 ಅಂಕದಿಂದ ಭಾರೀ ಮುನ್ನಡೆ ಪಡೆದಿದ್ದರೂ ತೆಲುಗು ಕೊನೆಯ 2 ನಿಮಿಷದ ಆಟದಲ್ಲಿ ಎಚ್ಚರ ತಪ್ಪಿ ಸೋಲು ಅನುಭವಿಸಿತು.
ಕುನ್ ಲೀ ಜಾದೂ: 19-23 ಆಗಿದ್ದಾಗ ಸೂಪರ್ ರೈಡಿಂಗ್‌ನಲ್ಲಿ ನೀಲೇಶ್ ಸಾಳುಂಕೆ 4 ಅಂಕ ತಂದರು. ಹೀಗಾಗಿ ಬೆಂಗಾಲ್ 2ನೇ ಅವಧಿಯಲ್ಲಿ ಆಟ ಮುಗಿಯಲು 7 ನಿಮಿಷ ಇದ್ದಾಗ 2ನೇ ಬಾರಿ ಆಲೌಟಾಯಿತು. ಈ ವೇಳೆ ತೆಲುಗು ಮುನ್ನಡೆ ಅಂತರವನ್ನು 10ಕ್ಕೆ ಏರಿಸಿಕೊಂಡು ಬೀಗಿತು. ಅಲ್ಲಿಂದ ಬಳಿಕ ಬೆಂಗಾಲ್ ಭರ್ಜರಿ ಆಟ ಪ್ರದರ್ಶಿಸಿತು. ಪಂದ್ಯ ಮುಗಿಯಲು ಇನ್ನೇನು 2 ನಿಮಿಷ ಇದೆ ಎನ್ನುವಾಗ 31-30 ರಿಂದ ಮುನ್ನಡೆ ಪಡೆದುಕೊಂಡಿತು. ಆದರೆ ಬೆಂಗಾಲ್‌ನ ಸುರ್ಜಿತ್ ಸಿಂಗ್ ಅನಾವಶ್ಯಕವಾಗಿ ವಿಕಾಸ್‌ರನ್ನು ಹಿಡಿಯಲು ಹೋಗುವುದರೊಂದಿಗೆ ಮತ್ತೆ 31-31 ಅಂಕದೊಂದಿಗೆ ಟೈ ಆಯಿತು. ಆದರೆ ಕೊನೆಯ ಮಾಡು ಇಲ್ಲವೆ ಮಡಿ ರೈಡಿಂಗ್‌ನಲ್ಲಿ ಕೊರಿಯನ್ ಹೀರೋ ಜಾಂಗ್ ಕುನ್ ಲೀ ರೈಡಿಂಗ್‌ನಲ್ಲಿ ಅಂಕ ತರುವುದರೊಂದಿಗೆ ಬೆಂಗಾಲ್ 32-31 ಅಂತರದಿಂದ ರೋಚಕ ಗೆಲುವು ಸಾಧಿಸಿತು.
ರಾಹುಲ್ ವೈಫಲ್ಯ, ಟೈಟಾನ್ಸ್‌ಗೆ ಸೋಲು: ತಾರಾ ರೈಡರ್ ರಾಹುಲ್ ಚೌಧರಿ ತೆಲುಗು ಟೈಟಾನ್ಸ್ ಪರ ಮಿಂಚಲಿಲ್ಲ. ಜತೆಗೆ ಡಿಫೆಂಡರ್‌ಗಳು ಕೂಡ ಕೈಕೊಟ್ಟರು. 14 ರೈಡಿಂಗ್ ಮಾಡಿದ ರಾಹುಲ್ ಕೇವಲ 4 ಅಂಕ ತರಲಷ್ಟೇ ಶಕ್ತರಾದರು. ಇದು ಟೈಟಾನ್ಸ್ ಸೋಲಿಗೆ ಪ್ರಮುಖ ಕಾರಣವಾಯಿತು.
ಮೊದಲ ಅವಧಿಯ ಆರಂಭದ ಕೆಲ ನಿಮಿಷ ಬೆಂಗಾಲ್ ಮಿಂಚಿನ ಆಟ ನಿರ್ವಹಿಸಿತು. ಆದರೆ ತೆಲುಗು ತಕ್ಕ ಪ್ರತ್ಯುತ್ತರ ನೀಡಿತು. ಅಲ್ಲದೆ ಒಟ್ಟಾರೆ ಮೊದಲ ಅವಧಿಯ ಮುಕ್ತಾಯಕ್ಕೆ ತೆಲುಗು 15-12 ಅಂಕದ ಮುನ್ನಡೆ ಪಡೆಯಿತು. ಈ ಅವಧಿಯಲ್ಲಿ ಬೆಂಗಾಲ್ 2 ಬಾರಿ ಸೂಪರ್ ಟ್ಯಾಕಲ್ ನಡೆಸಿತು. ಅಂಕಗಳಿಕೆಯಲ್ಲಿ ಸಮಸಾಧಿಸಿಕೊಂಡಿತು. ಆದರೆ ಅದೃಷ್ಟ ಬೆಂಗಾಲ್ ಪರ ಇರಲಿಲ್ಲ. ಕುನ್ ಲೀ (3 ರೈಡಿಂಗ್), ಸುರ್ಜಿತ್ ಸಿಂಗ್ (4 ಟ್ಯಾಕಲ್) ಅಂಕದ ಹೊರತಾಗಿಯೂ ಒಂದನೇ ಅವಧಿಯ ಆಟ ಮುಗಿಯಲು ಇನ್ನೇನು 2 ನಿಮಿಷ ಬಾಕಿ ಇರುವಾಗ ಬೆಂಗಾಲ್ ಮೊದಲ ಬಾರಿ ಆಲೌಟಾಗಿ ಹಿನ್ನಡೆ ಅನುಭವಿಸಿತು. ಟೈಟಾನ್ಸ್ ಪರ ನಿಲೇಶ್ ಸಾಳುಂಕೆ (5 ರೈಡಿಂಗ್) ತಂಡಕ್ಕೆ ಮುನ್ನಡೆ ನೀಡಿದ ಆಟಗಾರ ಎನಿಸಿಕೊಂಡರು. ಆದರೆ ತೆಲುಗು ತಂಡದ ರಾಹುಲ್, ರೋಹಿತ್‌ರಿಂದ ಈ ಅವಧಿಯಲ್ಲೂ ಗಮನಾರ್ಹ ಪ್ರದರ್ಶನ ಹೊರಬರಲಿಲ್ಲ.
– ಹೇಮಂತ್ ಸಂಪಾಜೆ