ಅಹ್ಮದಾಬಾದ್: ಪ್ರೊ ಕಬಡ್ಡಿ ಲೀಗ್ ಐದರಲ್ಲಿ ತನ್ನ ತವರಿನ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ತಂಡವು ಸತತ ಐದನೇ ಗೆಲುವು ದಾಖಲಿಸಿದೆ. ಬುಧವಾರ ನಡೆದ ದ್ವಿತೀಯ ಪಂದ್ಯದಲ್ಲಿ ಗುಜರಾತ್ ತಂಡವು ತೆಲುಗು ಟೈಟಾನ್ಸ್ ತಂಡವನ್ನು 29-19 ಅಂಕಗಳಿಂದ ಸೋಲಿಸಿದೆ. ಈ ಮೊದಲು ನಡೆದ ಹರಿಯಾಣ ಮತ್ತು ತಮಿಳ್ ತಲೈವಾಸ್ ನಡುವಣ ಪಂದ್ಯ 25-25ರಿಂದ ರೋಚಕ ಟೈಯಲ್ಲಿ ಅಂತ್ಯಗೊಂಡಿತ್ತು.
ಆರಂಭದಿಂದಲೇ ಭರ್ಜರಿಯಾಗಿ ಆಡಿದ ಗುಜರಾತ್ ಮುನ್ನಡೆ ಸಾಧಿಸುತ್ತ ಹೋಯಿತು. ಸಚಿನ್ ಒಂದು ರೈಡ್‌ನಲ್ಲಿ ಮೂರು ಮತ್ತು ಆಲೌಟ್ ಮೂಲಕ ಐದಂಕ ಪಡೆದು ಪ್ರಾಬಲ್ಯ ಸ್ಥಾಪಿಸಿದ್ದರು. ಸುಕೇಶ್ ಕೂಡ ಆಕ್ರಮಣಕಾರಿಯಾಗಿ ಆಡಿದರು. ಗುಜರಾತ್ ಗುರುವಾರದ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ತಂಡವನ್ನು ಎದುರಿಸಲಿದೆ
ಇಲ್ಲಿನ ಟ್ರಾನ್ಸ್ ಸ್ಟೇಡಿಯಾ ಅರೆನಾದಲ್ಲಿ ನಡೆದ ಅಂತರ್ ವಲಯ ಪಂದ್ಯದಲ್ಲಿ ಆರಂಭದಲ್ಲಿಯೇ ರೋಚಕ ಸ್ಪರ್ಧೆ ಏರ್ಪಟ್ಟಿತ್ತು. ಹರಿಯಾಣ ಒಂದು ಹಂತದಲ್ಲಿ 4-2ರಿಂದ ಮುನ್ನಡೆ ಪಡೆದಿತ್ತು. ಈ ಸಂದರ್ಭದಲ್ಲಿ ತಲೈವಾಸ್ ತಂಡದಲ್ಲಿರುವ ಕನ್ನಡಿಗ ದರ್ಶನ್ ಎರಡು ಅದ್ಭುತ ಕ್ಯಾಚ್ ತೆಗೆದು ಕೊಂಡರು. ಇದು ಯಾವ ತಾರಾ ಆಟಗಾರನಿಗೂ ಕಡಿಮೆ ಇರಲಿಲ್ಲ. ಈ ಮೂಲಕ ತಾನೊಬ್ಬ ಬಲಿಷ್ಠ ಆಟಗಾರನಾಗುವ ಸೂಚನೆ ನೀಡಿದರು. ಈ ಕ್ಯಾಚ್‌ಗಳ ಮೂಲಕ ಪಂದ್ಯ 4-4ರಿಂದ ಸಮಬಲಗೊಂಡಿತು. ಹೀಗೆ ಸಾಗುತ್ತಿದ್ದ ಪಂದ್ಯ ಮತ್ತೂಮ್ಮೆ 10-10ರಲ್ಲಿತ್ತು. ಆದರೆ ಮೊದಲ ಅವಧಿಯ ಅಂತ್ಯದಲ್ಲಿ ಹರಿಯಾಣ 13-10ರಿಂದ ಮುನ್ನಡೆ ಪಡೆದು ಮೇಲುಗೈ ಸಾಧಿಸಿತು.
ಮೊದಲ ಅವಧಿಯಲ್ಲಿ ಉಭಯ ತಂಡಗಳಿಗೆ ಬಹುತೇಕ ಅಂಕ ಸಿಕ್ಕಿದ್ದು ಟ್ಯಾಕಲ್‌ನಲ್ಲಿ. ರೈಡಿಂಗ್‌ನಲ್ಲಿ ಎರಡೂ ತಂಡಗಳ ಆಟಗಾರರು ವೈಫಲ್ಯ ಎದುರಿಸಿದರು. ತಲೈವಾಸ್‌ನ ತಾರಾ ರೈಡರ್ ಅಜಯ್ ಠಾಕೂರ್ ಕೂಡ ಹರ್ಯಾಣ ಬಲೆಯಲ್ಲಿ ಸಿಕ್ಕಿಬಿದ್ದರು. ಹೀಗಾಗಿ ಪಂದ್ಯದ ಅಂಕಗಳ ಏರಿಕೆ ಟ್ಯಾಕಲ್ ಮೇಲೆ ಅವಲಂಬಿತವಾಗಿತ್ತು.
ತಿರುಗಿ ಬಿದ್ದ ತಲೈವಾಸ್: ಈ ಹಂತದಲ್ಲಿ ತಲೈ ವಾಸ್ ದಾಳಿಯನ್ನು ಪ್ರಬಲವಾಗಿಸಿತು. ಇದರಿಂದಾಗಿ ಹಂತಹಂತವಾಗಿ ಹರ್ಯಾಣ ಕೋಟೆ ಬರಿದಾಗುತ್ತಾ ಸಾಗಿತು. ಪಂದ್ಯದ 25ನೇ ನಿಮಿಷದಲ್ಲಿ ಹರ್ಯಾಣ ಆಲೌಟ್ ಆಯಿತು. ಈ ಸಂದರ್ಭದಲ್ಲಿ ತಲೈವಾಸ್ 17-14ರಿಂದ ಮುನ್ನಡೆ ಪಡೆಯಿತು.
ಮಂಜು ಮಳಗುಳಿ