ಅಹ್ಮದಾಬಾದ್: ರೋಮಾಂಚಕವಾಗಿ ಸಾಗಿದ ಪ್ರೊ ಕಬಡ್ಡಿ ಲೀಗ್‌ನ ಅಹ್ಮದಾಬಾದ್ ಚರಣದ ಅಂತಿಮ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾದ ಗುಜರಾತ್ ಫಾರ್ಚೂನ್ ತಂಡವು ಬೆಂಗಾಲ್ ವಾರಿಯರ್ ವಿರುದ್ಧ 26-26 ಅಂಕಗಳಿಂದ ಟೈಗೊಳಿಸಲು ಯಶಸ್ವಿಯಾಯಿತು. ಹೀಗಾಗಿ ಗುಜರಾತ್ ತಂಡ ತನ್ನ ತವರಿನ ಪಂದ್ಯಗಳಲ್ಲಿ ಸೋಲು ಕಾಣುವುದನ್ನು ತಪ್ಪಿಸಿದೆ. ಸತತ ಐದು ಪಂದ್ಯಗಳಲ್ಲಿ ಜಯಭೇರಿ ಸಾಧಿಸಿದ ಸಾಧನೆ ಮಾಡಿದೆ.
ಈ ಮೊದಲು ನಡೆದ ಪಂದ್ಯದ ಕೊನೆಯಲ್ಲಿ ನಾಯಕ ಮೆರಾಜ್ ಶೇಖ್ ತಂದ 3 ರೈಡಿಂಗ್ ಅಂಕಗಳ ನೆರವಿನಿಂದ ದಬಾಂಗ್ ಡೆಲ್ಲಿ ತಂಡ ತಮಿಳ್ ತಲೈವಾಸ್ ವಿರುದ್ಧ 30-29ರಿಂದ ಜಯ ಸಾಧಿಸಿದೆ. ಈ ಮೂಲಕ ಡೆಲ್ಲಿ ಕೂಟ ದಲ್ಲಿ ಸತತ 4 ಪಂದ್ಯಗಳ ಸೋಲಿನ ಅನಂತರ ಗೆಲುವಿನ ಹಳಿಗೆ ಮರಳಿದೆ. ಅಂತಿಮ ಹಂತದಲ್ಲಿ ತಲೈವಾಸ್ ಪಂದ್ಯ ಕೈಚೆಲ್ಲಿ ನಿರಾಶೆಗೊಂಡಿತು.
ಶುಕ್ರವಾರದಿಂದ ಲಕ್ನೋ ಚರಣದ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಯುಪಿ ತಂಡವು ಯು ಮುಂಬಾವನ್ನು ಎದುರಿಸಲಿದ್ದರೆ ಎರಡನೇ ಪಂದ್ಯ ಬೆಂಗಳೂರು ಮತ್ತು ಜೈಪುರ ನಡುವೆ ನಡೆಯಲಿದೆ.
ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಡೆಲ್ಲಿ ಭರ್ಜರಿ ಆರಂಭ ಪಡೆಯಿತು. ಎದುರಾಳಿ ತಲೈವಾಸ್‌ನ ಒಬ್ಬೊಬ್ಬರೇ ಆಟಗಾರರನ್ನು ಔಟ್ ಮಾಡಿ ಹೊರಕಳುಹಿಸುತ್ತಿತ್ತು. ಹೀಗಾಗಿ ಡೆಲ್ಲಿ 5-1ರಿಂದ ಮುನ್ನಡೆ ಪಡೆದಿತ್ತು. ಆದರೆ 7ನೇ ನಿಮಿಷದಲ್ಲಿ ತಲೈವಾಸ್ ಸೂಪರ್ ಟ್ಯಾಕಲ್ ಮಾಡಿ ತನ್ನ ಅಂಕವನ್ನು 4-5ಕ್ಕೆ ಹೆಚ್ಚಿಸಿಕೊಂಡಿತು. ಅನಂತರ ಉಭಯ ತಂಡಗಳು 6-6ರಲ್ಲಿ ಸಮಬಲದಲ್ಲಿದ್ದವು.
ಅನಂತರದ ಹಂತದಲ್ಲಿ ಡೆಲ್ಲಿ ಮೇಲುಗೈ ಸಾಧಿಸುತ್ತಾ ಸಾಗಿತು. ಆದರೆ ಮೊದಲನೇ ಅವಧಿಯ ಅಂತ್ಯದಲ್ಲಿ ತಲೈವಾಸ್ ಮತ್ತೂಂದು ಸೂಪರ್ ಟ್ಯಾಕಲ್ ಮಾಡಿತು. ಇದರಿಂದ ಮೊದಲ ಅವಧಿಯ ಅಂತ್ಯದಲ್ಲಿ ಉಭಯ ತಂಡಗಳು 12-12ರಿಂದ ಸಮಬಲದಲ್ಲಿದ್ದವು.
ಪಂದ್ಯಕ್ಕೆ ತಿರುವು ನೀಡಿದ ಮೆರಾಜ್: 2ನೇ ಅವಧಿ ಆರಂಭವಾಗಿ ಕೆಲವೇ ನಿಮಿಷದಲ್ಲಿ ತಲೈವಾಸ್ ಮತ್ತೂಂದು ಸೂಪರ್ ಟ್ಯಾಕಲ್ ಮಾಡಿತು. ಇದರಿಂದ ತಲೈವಾಸ್ 15-12ರಿಂದ ಮುನ್ನಡೆ ಪಡೆಯಿತು. ರೈಡಿಂಗ್ ಮತ್ತು ಡಿಫೆಂಡ್‌ನಲ್ಲಿ ತಲೈವಾಸ್ ಬಲಿಷ್ಠವಾಯಿತು. ಇದರಿಂದ ಅಂಕಗಳಿಕೆಯಲ್ಲಿಯೂ ಏರಿಕೆಯಾಗತೊಡಗಿತು. ಇತ್ತ ಡೆಲ್ಲಿ ಕೋಟೆಯೂ ಖಾಲಿಯಾಗುತ್ತಾ ಸಾಗಿತು. ಇದರಿಂದ 34ನೇ ನಿಮಿಷದಲ್ಲಿ ಡೆಲ್ಲಿ ಆಲೌಟ್ ಆಯಿತು. ಈ ಹಂತದಲ್ಲಿ ತಲೈವಾಸ್ 25-22ರಿಂದ ಮುನ್ನಡೆ ಪಡೆಯಿತು.
ಅನಂತರದ ಹಂತದಲ್ಲಿಯೂ ಪಂದ್ಯ ಕುತೂಹಲದಲ್ಲಿಯೇ ಇತ್ತು. ಅಂಕಗಳಿಕೆಯಲ್ಲಿ ತಲೈವಾಸ್ ಹಿಂದೆಯೇ ಡೆಲ್ಲಿ ಸಾಗುತ್ತಿತ್ತು.