Advertisement

ಪ್ರೊ ಕಬಡ್ಡಿ: ಇಂದು ಜೈಪುರ್‌ ಫ್ಯಾಂಥರ್-ಪುನೇರಿ ಪಲ್ಟಾನ್‌ ನಡುವೆ ಫೈನಲ್‌

10:56 PM Dec 16, 2022 | Team Udayavani |

ಮುಂಬೈ: ಪ್ರೊ ಕಬಡ್ಡಿ 9ನೇ ಋತುವಿಗೆ ಶನಿವಾರ ರಾತ್ರಿ ತೆರೆ ಬೀಳಲಿದೆ. 2014ರ ಚೊಚ್ಚಲ ಆವೃತ್ತಿಯ ಚಾಂಪಿಯನ್‌ ಜೈಪುರ್‌ ಪಿಂಕ್‌ ಪ್ಯಾಂಥರ್ ಮತ್ತು ಇದೇ ಮೊದಲ ಸಲ ಫೈನಲ್‌ಗೆ ನೆಗೆದಿರುವ ಪುನೇರಿ ಪಲ್ಟಾನ್‌ ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ. ಇವೆರಡೂ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಅಲಂಕರಿಸಿದ ತಂಡಗಳೆಂಬುದು ಉಲ್ಲೇಖನೀಯ.

Advertisement

ಗುರುವಾರದ ಸೆಮಿಫೈನಲ್‌ ಕಾಳಗದಲ್ಲಿ ಜೈಪುರ್‌ ಮತ್ತು ಪುನೇರಿ ತಂಡಗಳು ಕ್ರಮವಾಗಿ ಬೆಂಗಳೂರು ಬುಲ್ಸ್‌ ಮತ್ತು ತಮಿಳ್‌ ತಲೈವಾಸ್‌ಗೆ ಹೊಡೆತವಿಕ್ಕಿದ್ದವು. ಜೈಪುರ್‌ 49-29 ಅಂತರದ ಭರ್ಜರಿ ಗೆಲುವು ದಾಖಲಿಸಿದರೆ, ಪುನೇರಿಗೆ ತಲೈವಾಸ್‌ ಬೆವರಿಳಿಸುವಲ್ಲಿ ಯಶಸ್ವಿಯಾಗಿತ್ತು. ಗೆಲುವಿನ ಅಂತರ ಕೇವಲ 39-37.

ಕೂಟದ ಅಗ್ರ ತಂಡ: ಪಿಂಕ್‌ ಪ್ಯಾಂಥರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡ. 22ರಲ್ಲಿ 15 ಪಂದ್ಯ ಗೆದ್ದ ಹೆಗ್ಗಳಿಕೆ. ಬುಲ್ಸ್‌ ವಿರುದ್ಧ ಇದಕ್ಕೆ ತಕ್ಕಂತೆ ಆಡಿತು. ರೈಡರ್‌ ವಿ.ಅಜಿತ್‌, ಡಿಫೆಂಡರ್‌ ಸಾಹುಲ್‌ ಕುಮಾರ್‌ ಗೆಲುವಿನ ಹೀರೋಗಳಾಗಿದ್ದರು. ಜತೆಗೆ ಪ್ರಧಾನ ರೈಡರ್‌ ಅರ್ಜುನ್‌ ದೇಶ್ವಾಲ್‌, ಡಿಫೆನ್ಸ್‌ನಲ್ಲಿ ಅಂಕುಶ್‌, ನಾಯಕ ಸುನೀಲ್‌ ಕುಮಾರ್‌ ಅವರೆಲ್ಲ ಉತ್ತಮ ಲಯ ಕಾಯ್ದುಕೊಂಡು ಬಂದಿದ್ದಾರೆ. ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿರುವ ಜೈಪುರ್‌, ಎರಡನೇ ಸಲ ಟ್ರೋಫಿ ಎತ್ತುವ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ.

ಮೂರನೇ ಫೈನಲ್‌: ಜೈಪುರ್‌ ಕಾಣುತ್ತಿರುವ 3ನೇ ಫೈನಲ್‌ ಇದಾಗಿದೆ. 2014ರ ಚೊಚ್ಚಲ ಆವೃತ್ತಿಯಲ್ಲಿ ಯು ಮುಂಬಾವನ್ನು ಮಣಿಸಿ ಪ್ರಶಸ್ತಿ ಎತ್ತಿತ್ತು. 2016ರಲ್ಲಿ ಎರಡನೇ ಸಲ ಫೈನಲ್‌ ಪ್ರವೇಶಿಸಿತಾದರೂ ಅಲ್ಲಿ ಪಾಟ್ನಾ ಪೈರೆಟ್ಸ್‌ಗೆ ಶರಣಾಯಿತು. ಈ ಗೆಲುವಿನ ಮೂಲಕ ಪಾಟ್ನಾ ಪ್ರಶಸ್ತಿಯ ಹ್ಯಾಟ್ರಿಕ್‌ ಸಾಧಿಸಿದ್ದು ಈಗ ಇತಿಹಾಸ. ಪಾಟ್ನಾ ಹೊರತುಪಡಿಸಿ ಈವರೆಗೆ ಯಾವ ತಂಡವೂ ಒಂದಕ್ಕಿಂತ ಹೆಚ್ಚು ಸಲ ಚಾಂಪಿಯನ್‌ ಆಗಿಲ್ಲ. ಜೈಪುರ್‌ ಮುಂದೆ ಇಂಥದೊಂದು ಅವಕಾಶವಿದೆ.

ಪುನೇರಿಗೆ ಏನು ಕಾದಿದೆ?: ಪುನೇರಿ ಪಲ್ಟಾನ್‌ಗೆ ಈ ಬಾರಿ ಫ‌ಜಲ್‌ ಅಟ್ರಾಚಲಿ ಅವರ ನೂತನ ಸಾರಥ್ಯವಿತ್ತು. ಅದು ಹೊಸ ಹುರುಪಿನಿಂದಲೇ ಆಡಲಿಳಿಯಿತು. 22ರಲ್ಲಿ 14 ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿತು. 2 ಪಂದ್ಯ ಟೈ ಮಾಡಿಕೊಂಡಿತು. ರಕ್ಷಣ ವಿಭಾಗದಲ್ಲಿ ಸ್ವತಃ ಅಟ್ರಾಚಲಿ ಅವರೇ ಮುಂಚೂಯಲ್ಲಿ ಕಾಸಿಕೊಳ್ಳುತ್ತಿದ್ದಾರೆ. ರೈಡಿಂಗ್‌ನಲ್ಲಿ ಅಸ್ಲಾಂ ಇನಾಮಾªರ್‌, ಅಮಿತ್‌ ಗೋಯತ್‌, ಆಕಾಶ್‌ ಶಿಂಧೆ ಅವರನ್ನು ನಂಬಿಕೊಳ್ಳಬಹುದು. ಆದರೆ ಸೆಮಿಫೈನಲ್‌ನಲ್ಲಿ ಮಿಂಚಿದ್ದು ರೈಡರ್‌ ಪಂಕಜ್‌ ಮೋಹಿತೆ ಎಂಬುದನ್ನು ಮರೆಯುವಂತಿಲ್ಲ. ಅವರು ಬರೋಬ್ಬರಿ 16 ಅಂಕಗಳನ್ನು ಬಾಚಿ ತಂದಿದ್ದರು. ಡಿಫೆಂಡರ್‌ ಗೌರವ್‌ ಖತ್ರಿ ಕೂಡ ಮ್ಯಾಚ್‌ ವಿನ್ನಿಂಗ್‌ ನಿರ್ವಹಣೆ ತೋರಿದ್ದರು. ಜೈಪುರ್‌ ವಿರುದ್ಧ ಜಯ ಸಾಧಿಸಲು ಮುಖ್ಯವಾಗಿ ಬೇಕಿರುವುದು ಅದೃಷ್ಟ. ಅದು ಪುನೇರಿ ಬಳಿ ಇದೆಯೇ ಎಂಬುದು ಸದ್ಯದ ಪ್ರಶ್ನೆ.

Advertisement

ಪ್ರೊ ಕಬಡ್ಡಿ ಚಾಂಪಿಯನ್ಸ್‌
ವರ್ಷ ಚಾಂಪಿಯನ್‌ ರನ್ನರ್ ಅಪ್‌ ಅಂತರ
2014 ಜೈಪುರ್‌ ಪಿಂಕ್‌ ಪ್ಯಾಂಥರ್ ಯು ಮುಂಬಾ 35-24
2015 ಯು ಮುಂಬಾ ಬೆಂಗಳೂರು ಬುಲ್ಸ್‌ 36-30
2016 ಪಾಟ್ನಾ ಪೈರೆಟ್ಸ್‌ ಜೈಪುರ್‌ ಪಿಂಕ್‌ ಪ್ಯಾಂಥರ್ 37-29
2016 ಪಾಟ್ನಾ ಪೈರೆಟ್ಸ್‌ ಯು ಮುಂಬಾ 31-28
2017 ಪಾಟ್ನಾ ಪೈರೆಟ್ಸ್‌ ಗುಜರಾತ್‌ ಜೈಂಟ್ಸ್‌ 55-28
2018 ಬೆಂಗಳೂರು ಬುಲ್ಸ್‌ ಗುಜರಾತ್‌ ಜೈಂಟ್ಸ್‌ 38-33
2019 ಬೆಂಗಾಲ್‌ ವಾರಿಯರ್ ದಬಾಂಗ್‌ ಡೆಲ್ಲಿ 39-34
2021-22 ದಬಾಂಗ್‌ ಡೆಲ್ಲಿ ಪಾಟ್ನಾ ಪೈರೆಟ್ಟ್ 37-36

ಸ್ಥಳ: ಮುಂಬೈ
ಆರಂಭ: ರಾತ್ರಿ 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

 

Advertisement

Udayavani is now on Telegram. Click here to join our channel and stay updated with the latest news.

Next