Advertisement

ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್‌-ದಬಾಂಗ್‌ ದಿಲ್ಲಿ ಪ್ರಶಸ್ತಿ ಫೈಟ್‌

10:34 PM Feb 23, 2022 | Team Udayavani |

ಬೆಂಗಳೂರು: ಮೂರು ಬಾರಿಯ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ಮತ್ತು ಕಳೆದ ಸಲದ ರನ್ನರ್ ಅಪ್‌ ದಬಾಂಗ್‌ ದಿಲ್ಲಿ ಶುಕ್ರವಾರ 8ನೇ ಪ್ರೊ ಕಬಡ್ಡಿ ಲೀಗ್‌ ಕಿರೀಟಕ್ಕಾಗಿ ಸೆಣಸಲಿವೆ.

Advertisement

ಬುಧವಾರದ ಸೆಮಿಫೈನಲ್‌ನಲ್ಲಿ ಈ ಎರಡು ತಂಡಗಳು ಕ್ರಮವಾಗಿ ಯುಪಿ ಯೋಧ ಮತ್ತು ಆತಿಥೇಯ ಬೆಂಗಳೂರು ಬುಲ್ಸ್‌ಗೆ ಸೋಲುಣಿಸಿದವು.

ಮೊದಲ ಸೆಮಿಫೈನಲ್‌ನಲ್ಲಿ ಪಾಟ್ನಾ ಪೈರೇಟ್ಸ್‌ 38-27 ಅಂತರದಿಂದ ಯುಪಿ ಯೋಧಕ್ಕೆ ಸೋಲು ಣಿಸಿತು. ಅನಂತರದ ಉಪಾಂತ್ಯದಲ್ಲಿ ಬಲಿಷ್ಠ ದಬಾಂಗ್‌ ದಿಲ್ಲಿ 40-35 ಅಂಕಗಳಿಂದ ಬೆಂಗಳೂರು ಬುಲ್ಸ್‌ಗೆ ತಿವಿಯಿತು. ಇದು ಸೆಮಿಫೈನಲ್‌ನಲ್ಲಿ ದಿಲ್ಲಿ ವಿರುದ್ಧ ಬುಲ್ಸ್‌ ಅನುಭವಿಸಿದ ಸತತ 2ನೇ ಸೋಲಾಗಿದೆ.

ಬೆಂಗಳೂರು ಬುಲ್ಸ್‌ ಸಾಂಘಿಕ ಹೋರಾಟ ನೀಡುವಲ್ಲಿ ಸಂಪೂರ್ಣ ವಿಫ‌ಲವಾಯಿತು. ನಾಯಕ ಪವನ್‌ ಸೆಹ್ರಾವತ್‌ ಏಕಾಂಗಿಯಾಗಿ ಹೋರಾಟ ನಡೆಸಿದರು. ಪಂದ್ಯದಲ್ಲೇ ಗರಿಷ್ಠ 18 ಅಂಕ ಗಳಿಸಿದರು. ರೈಡರ್‌ ಚಂದ್ರನ್‌ ರಂಜಿತ್‌ ಗಾಯಾಳಾದುದು ಬುಲ್ಸ್‌ಗೆ ಎದುರಾದ ದೊಡ್ಡ ಹಿನ್ನಡೆಯಾಯಿತು. ಅವರದು ಶೂನ್ಯ ಸಂಪಾದನೆ. ರೈಡರ್‌ ಭರತ್‌ ಮತ್ತು ಡಿಫೆಂಡರ್‌ ಸೌರಭ್‌ ನಂದಲ್‌ ತಲಾ 4 ಅಂಕ ತಂದಿತ್ತರು.

ಬುಲ್ಸ್‌ ಎಲಿಮಿನೇಟರ್‌ನಲ್ಲಿ ತೋರಿದ ಅದ್ಭುತ ಆಟ ಇಲ್ಲಿ ಪುನರಾವರ್ತನೆಯಾಗಲಿಲ್ಲ. ದ್ವಿತೀ ಯಾರ್ಧ ಕೈಕೊಟ್ಟಿತು. ಸ್ವಯಂಕೃತಾಪರಾಧಗಳಿಗೆ ಬೆಲೆ ತೆತ್ತ ಬುಲ್ಸ್‌ ಸೋತು ಹೊರಬಿತ್ತು.

Advertisement

ಪಂದ್ಯದ ಮೊದಲಾರ್ಧ ತೀವ್ರ ಪೈಪೋಟಿಯಿಂದ ತುಂಬಿತ್ತು. ಎರಡೂ ತಂಡಗಳು ಪ್ರತೀ ಅಂಕಕ್ಕಾಗಿ ಜಿದ್ದಾಜಿದ್ದಿ ಕಾದಾಟ ನಡೆಸಿದವು. 8ನೇ ನಿಮಿಷದಲ್ಲಿ ಬೆಂಗಳೂರು ಆಲೌಟ್‌ ಆಯಿತು. ಆದರೆ ನಾಯಕ ಪವನ್‌ ಪರಿಸ್ಥಿತಿಯನ್ನು ಬದಲಿಸಿದರು. ವಿರಾಮದ ವೇಳೆ ಬುಲ್ಸ್‌ 17-16ರ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಬುಲ್ಸ್‌ ಆತ್ಮವಿಶ್ವಾಸವನ್ನು ದಿಲ್ಲಿ ನುಚ್ಚುನೂರು ಮಾಡಿತು.

ದಬಾಂಗ್‌ ದಿಲ್ಲಿ ರೈಡರ್‌ ನವೀನ್‌ ಕುಮಾರ್‌ ಮತ್ತೆ ಗೆಲುವಿನ ಹೀರೋ ಎನಿಸಿದರು. ಅವರ 14 ರೈಡಿಂಗ್‌ ಅಂಕ ದಿಲ್ಲಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು. ನವೀನ್‌ ಹೊರತುಪಡಿಸಿದರೆ ರೈಡರ್‌ ನೀರಜ್‌ ನರ್ವಾಲ್‌ 5, ಆಲ್‌ರೌಂಡರ್‌ ವಿಜಯ್‌ 4 ಅಂಕ ಗಳಿಸಿದರು.

ಚಂದ್ರನ್‌ ರಂಜಿತ್‌ ಗಾಯಾಳು
ಮೊದಲಾರ್ಧದ 17ನೇ ನಿಮಿಷದಲ್ಲಿ ಚಂದ್ರನ್‌ ರಂಜಿತ್‌ಗೆ ರೈಡಿಂಗ್‌ ವೇಳೆ ಗಾಯವಾಯಿತು. ಆಗ ಅವರು ಮ್ಯಾಟ್‌ನಲ್ಲೇ ಕುಸಿದುಬಿದ್ದರು. ರಕ್ತವೂ ಸುರಿಯಿತು. ಹೀಗಾಗಿ ಪಂದ್ಯದಿಂದಲೇ ಹೊರಬಿದ್ದರು. ತಂಡದ ಪ್ರಮುಖ ದಾಳಿಗಾರರಾದ ಅವರ ದಿಢೀರ್‌ ನಿರ್ಗಮನ ಬುಲ್ಸ್‌ ಪ್ರದರ್ಶನದ ಮೇಲೆ ತೀವ್ರ ಪರಿಣಾಮ ಬೀರಿತು.

ಪಾಟ್ನಾ ಪೈರೇಟ್ಸ್‌ಗೆ ಶರಣಾದ ಯುಪಿ ಯೋಧ
ಮೊದಲ ಸೆಮಿಫೈನಲ್‌ ಪಂದ್ಯ ಬಹುತೇಕ ಏಕಪಕ್ಷೀಯವಾಗಿ ಸಾಗಿತು. ಕೂಟದ ಸೂಪರ್‌ ಸ್ಟಾರ್‌ ಆಟಗಾರ ಪ್ರದೀಪ್‌ ನರ್ವಾಲ್‌ ಪೂರ್ಣ ವೈಫ‌ಲ್ಯ ಕಂಡ ಪರಿಣಾಮ ಯುಪಿ ಯೋಧ ಸೋಲನುಭವಿಸಿತು. ತನ್ನ ಸಾಮರ್ಥಯ ಮತ್ತು ನಿರೀಕ್ಷೆಗೆ ತಕ್ಕಂತೆ ಆಡಿದ ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ ನಾಯಕತ್ವದ, 3 ಬಾರಿಯ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ಫೈನಲ್‌ಗೇರಿತು.


ಪಂದ್ಯದ ಅಂತಿಮ ಹಂತದಲ್ಲಿ ಯುಪಿ ತೀವ್ರ ಪೈಪೋಟಿ ನಡೆಸಿತು. ಅಷ್ಟರಲ್ಲಿ ಪರಿಸ್ಥಿತಿ ನಿಯಂತ್ರಣ ಮೀರಿತ್ತು. ಆ ಹಂತದಲ್ಲಿ ಪಂದ್ಯ ರೋಚಕವಾಗುತ್ತಿದೆ ಎಂದೆನಿಸಿದರೂ ಇದರ ಲಾಭ ಎತ್ತುವಲ್ಲಿ ಯುಪಿ ವಿಫ‌ಲವಾಯಿತು. ಪ್ರದೀಪ್‌ ನರ್ವಾಲ್‌ ಪದೇಪದೇ ದಾಳಿಯಲ್ಲಿ ವೈಫ‌ಲ್ಯ ಕಂಡರು. ಇಡೀ ಪಂದ್ಯದಲ್ಲಿ ಯುಪಿ ಸಾಧನೆಯೆಂದರೆ, ದ್ವಿತೀಯಾರ್ಧದ 17ನೇ ನಿಮಿಷದಲ್ಲಿ ಪಾಟ್ನಾವನ್ನು ಆಲೌಟ್‌ ಮಾಡಿದ್ದು.

ಪಾಟ್ನಾ ಸಾಂಘಿಕ ಆಟದ ಮೂಲಕ ಗಮನ ಸೆಳೆಯಿತು. ಏಳೂ ಮಂದಿ ಅಂಕ ಸಂಪಾದಿಸಿದರು. ಗುಮನ್‌ ಸಿಂಗ್‌ (8), ಸಚಿನ್‌ (7) ದಾಳಿಯಲ್ಲಿ ಮಿಂಚಿದರು. ಪಾಟ್ನಾದ ರಕ್ಷಣಾ ವಿಭಾಗ ಅದ್ಭುತವೆನಿಸಿತು. ಮೊಹಮ್ಮದ್ರೇಝ ಚಿಯಾನೆಹ್‌ (6), ಸುನೀಲ್‌ (5) ರಕ್ಷಣೆಯಲ್ಲಿ ಅಭೇದ್ಯ ಕೋಟೆಯನ್ನೇ ನಿರ್ಮಿಸಿದರು. ಇದಕ್ಕೆ ಲಗ್ಗೆ ಹಾಕಲು ಯುಪಿ ವಿಫ‌ಲವಾಯಿತು.

ಯುಪಿ ಮತ್ತೆ ಮತ್ತೆ ಆಲೌಟ್‌
ನಿತೇಶ್‌ ಕುಮಾರ್‌ ನಾಯಕತ್ವದ ಯುಪಿ ಪಾಲಿಗೆ ಪಂದ್ಯದ ಮೊದಲರ್ಧ ಅತ್ಯಂತ ಆಘಾತಕಾರಿಯಾಗಿತ್ತು. ಪ್ರದೀಪ್‌ ಅವರಂತಹ ತಾರಾ ಆಟಗಾರರಿದ್ದೂ ಯಪಿ ಎಡವಿತು. ರಕ್ಷಣೆ, ದಾಳಿ ಎರಡರಲ್ಲೂ ಅದರದ್ದು ದಯನೀಯ ವೈಫ‌ಲ್ಯ. ಮೊದಲರ್ಧದಲ್ಲೇ ಎರಡು ಬಾರಿ ಯುಪಿ ಆಲೌಟಾಯಿತು. 10ನೇ ನಿಮಿಷದಲ್ಲಿ ಅದು ಆಲೌಟಾದಾಗ ಅದರ ಅಂಕ 4, ಪಾಟ್ನಾದ್ದು 11. ಎರಡನೇ ಬಾರಿ ಆಲೌಟಾದಾಗ ಅದರ ಅಂಕ 7, ಪಾಟ್ನಾದ್ದು 21. ವಿರಾಮದ ವೇಳೆ ಪಾಟ್ನಾ 23, ಯುಪಿ 9 ಅಂಕ ಗಳಿಸಿದ್ದವು. ಪಂದ್ಯದ ಫ‌ಲಿತಾಂಶ ಬಹುತೇಕ ಇಲ್ಲೇ ನಿರ್ಧಾರವಾಗಿತ್ತು.

ಕೆ. ಪೃಥ್ವಿಜಿತ್‌

Advertisement

Udayavani is now on Telegram. Click here to join our channel and stay updated with the latest news.

Next