Advertisement

Pro Kabaddi: ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು; ಟೈಟಾನ್ಸ್‌ಗೆ 4ನೇ ಸೋಲು

11:57 PM Dec 13, 2023 | Team Udayavani |

ಬೆಂಗಳೂರು: ಬೆಂಗಳೂರು ಆವೃತ್ತಿಯ ಕೊನೆಯ ಪ್ರೊ ಕಬಡ್ಡಿ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್‌ ರೋಚಕ ಗೆಲುವು ಕಂಡಿದೆ. ಕೊನೆಯ ನಿಮಿಷದಲ್ಲಿ ಹೋರಾಟ ವನ್ನು ತೀವ್ರಗೊಳಿಸಿ ಜೈಪುರ್‌ ಪಿಂಕ್‌ ಪ್ಯಾಂಥರ್ ವಿರುದ್ಧ 32-30 ಅಂತರದ ಜಯ ಸಾಧಿಸಿತು.

Advertisement

ಇದು 6 ಪಂದ್ಯಗಳಲ್ಲಿ ಬುಲ್ಸ್‌ಗೆ ಒಲಿದ 2ನೇ ಗೆಲುವು. ಈ ಎರಡೂ ಜಯ ಬೆಂಗಳೂರು ಆವೃತ್ತಿಯಲ್ಲೇ ಒಲಿದದ್ದು ವಿಶೇಷ. ಇನ್ನೊಂದೆಡೆ ಜೈಪುರ್‌ 4ನೇ ಪಂದ್ಯದಲ್ಲಿ 2ನೇ ಸೋಲು ಕಂಡಿತು. ಒಂದರಲ್ಲಿ ಜಯ ಸಾಧಿಸಿದ್ದು, ಇನ್ನೊಂದು ಟೈ ಆಗಿದೆ.

ಕೊನೆಯ ರೈಡ್‌ನ‌ಲ್ಲಿ ಭವಾನಿ ರಜಪೂತ್‌ ಅವರನ್ನು ಟ್ಯಾಕಲ್‌ ಮಾಡಿದ ನಾಯಕ ಸೌರಭ್‌ ನಂದಲ್‌ ಬುಲ್ಸ್‌ಗೆ ಅಮೂಲ್ಯ ಅಂಕಗಳನ್ನು ತಂದಿತ್ತರು. ನಂದಲ್‌ ಸಾಧನೆ 5 ಅಂಕ. ಎಂದಿನಂತೆ ರೈಡರ್‌ ಭರತ್‌ ಮಿಂಚಿನ ಆಟವಾಡಿ ಸರ್ವಾಧಿಕ 9 ಅಂಕ, ವಿಕಾಸ್‌ ಖಂಡೋಲ 8 ಅಂಕ ಗಳಿಸಿದರು.

ಜೈಪುರ್‌ ಪರ ರೈಡರ್‌ ವಿ. ಅಜಿತ್‌ 9, ಡಿಫೆಂಡರ್‌ ಅಂಕುಶ್‌ 6, ನಾಯಕ ಸುನೀಲ್‌ ಕುಮಾರ್‌ 3 ಅಂಕ ತಂದಿತ್ತರು.

ಟೈಟಾನ್ಸ್‌ಗೆ 4ನೇ ಸೋಲು
ತೆಲುಗು ಟೈಟಾನ್ಸ್‌ ಸತತ 4 ಸೋಲನುಭವಿಸಿ ಸಂಕಟಕ್ಕೆ ಸಿಲುಕಿದೆ. ಬುಧವಾರದ ಮೊದಲ ಪಂದ್ಯ ದಲ್ಲಿ ತಮಿಳ್‌ ತಲೈವಾಸ್‌ 38-36 ಅಂತರದಿಂದ ಟೈಟಾನ್ಸ್‌ಗೆ ಸೋಲುಣಿ ಸಿತು. ತಲೈವಾಸ್‌ 3ನೇ ಪಂದ್ಯ ದಲ್ಲಿ ಸಾಧಿಸಿದ 2ನೇ ಗೆಲುವು ಇದಾಗಿದೆ.

Advertisement

ತಲೈವಾಸ್‌ ಪರ ರೈಡರ್‌ ನರೇಂದರ್‌ ಸರ್ವಾಧಿಕ 10 ಅಂಕ, ಡಿಫೆಂಡರ್‌ ಸಾಹಿಲ್‌ ಗುಲಿಯ 7 ಅಂಕ ಗಳಿಸಿದರು. ಟೈಟಾನ್ಸ್‌ ನಾಯಕ ಪವನ್‌ ಸೆಹ್ರಾವತ್‌ ಮತ್ತು ರೈಡರ್‌ ರಾಬಿನ್‌ ಚೌಧರಿ ಉತ್ತಮ ಹೋರಾಟ ಪ್ರದರ್ಶಿಸಿ ತಲಾ 7 ಅಂಕ ಸಂಪಾದಿಸಿದರು. ಗುರುವಾರ ಪ್ರೊ ಕಬಡ್ಡಿಗೆ ವಿರಾಮ.

Advertisement

Udayavani is now on Telegram. Click here to join our channel and stay updated with the latest news.

Next