Advertisement

ಪ್ರೊ ಕಬಡ್ಡಿ ಚಾಂಪಿಯನ್‌ಶಿಪ್‌ ಶ್ರೀಲಂಕಾಕ್ಕೆ ಸ್ಥಳಾಂತರ?

10:39 PM Jun 25, 2020 | Sriram |

ಮುಂಬಯಿ: ಭಾರತದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ವೈರಸ್‌ ಪ್ರಕರಣ ಹೆಚ್ಚುತ್ತಲೇ ಇದೆ. ಐಪಿಎಲ್‌ ಸೇರಿದಂತೆ ದೇಶದಲ್ಲಿ ನಡೆಯಬೇಕಿರುವ ಹಲವು ಕ್ರೀಡಾಕೂಟಗಳ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯ ವಾಗುತ್ತಿಲ್ಲ. ಈ ಬೆನ್ನಲ್ಲೇ ಪ್ರೊ ಕಬಡ್ಡಿ ಲೀಗ್‌ 8ನೇ ಆವೃತ್ತಿಯನ್ನು ಈ ಸಲ ಶ್ರೀಲಂಕಾ ಆತಿಥ್ಯದಲ್ಲಿ ಆಯೋಜಿಸುವ ಸಾಧ್ಯತೆ ಯೊಂದು ಕಂಡುಬಂದಿದೆ.

Advertisement

ಈ ಬಗ್ಗೆ ಶ್ರೀಲಂಕಾ ಕಬಡ್ಡಿ ಸಂಸ್ಥೆ ಅಧ್ಯಕ್ಷ ಅನುರ ಪಥಿರಣ ನೀಡಿರುವ ಹೇಳಿಕೆ ಇನ್ನಷ್ಟು ಪುಷ್ಟಿ ನೀಡಿದೆ. ವರ್ಷಾಂತ್ಯದ ಕೂಟವನ್ನು ಲಂಕಾದಲ್ಲಿ ಆಯೋಜಿಸಲು ಸಿದ್ಧವಾಗಿದ್ದೇವೆ. ಇದರಿಂದ ನಮ್ಮಲ್ಲಿ ಕಬಡ್ಡಿ ಕ್ರೀಡೆಯನ್ನು ಜನಪ್ರಿಯಗೊಳಿಸಬಹುದು ಎಂದಿದ್ದಾರೆ.

“ಭಾರತದಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರೊ ಕಬಡ್ಡಿ ಆಯೋಜಿಸುವುದು ಕಷ್ಟ. ಭಾರತ ಒಪ್ಪಿದರೆ ಕೂಟವನ್ನು ನಮ್ಮಲ್ಲಿ ನಡೆಸಬಹುದು, ಅದಕ್ಕೆ ಬೇಕಾಗಿರುವ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತೇವೆ. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಮಾತನಾಡಿದ್ದೇವೆ. ಅವರು ಈ ವಿಚಾರದಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಾರೆ’ ಎಂದು ಅನುರ ಪಥಿರಣ ತಿಳಿಸಿದರು.

ಲಂಕಾದಲ್ಲಿ ಯಶಸ್ವಿಯಾದೀತೇ?
ಶ್ರೀಲಂಕಾದಲ್ಲಿ ಕಬಡ್ಡಿ ನಿಧಾನವಾಗಿ ಬೆಳೆಯುತ್ತಿದೆ. ಮೂಲಗಳ ಪ್ರಕಾರ ಅಲ್ಲಿನ ಹೆಚ್ಚಿನ ಯುವಕರು ಪ್ರೊ ಕಬಡ್ಡಿಯಿಂದ ಆಕರ್ಷಿತರಾಗಿದ್ದಾರೆ. ಅನೇಕ ಪ್ರತಿಭೆಗಳು ಇದರಿಂದ ಉತ್ತೇಜಿತರಾಗಿ ಕಬಡ್ಡಿ ಕಣಕ್ಕೆ ಇಳಿದಿದ್ದಾರೆ.

2019ರಲ್ಲಿ ನಡೆದಿದ್ದ ಪುರುಷರ ದಕ್ಷಿಣ ಏಶ್ಯ ಕ್ರೀಡಾಕೂಟದಲ್ಲಿ ಶ್ರೀಲಂಕಾ ಕಬಡ್ಡಿ ತಂಡ ಮೊದಲ ಸಲ ಫೈನಲ್‌ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಪ್ರಶಸ್ತಿ ಸುತ್ತಿನಲ್ಲಿ ಭಾರತ ತಂಡವನ್ನು ಸೋಲಿಸಲು ಲಂಕಾಕ್ಕೆ ಸಾಧ್ಯವಾಗದಿದ್ದರೂ ಬೆಳ್ಳಿ ಪದಕ ಗೆದ್ದ ಲಂಕಾ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಆ ಬಳಿಕ ಲಂಕಾದಲ್ಲಿ ಕಬಡ್ಡಿ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿತು.

Advertisement

ಸ್ಥಳಾಂತರ ಅನಿವಾರ್ಯ
ಭಾರತೀಯ ಅಮೆಚೂರ್‌ ಕಬಡ್ಡಿ ಒಕ್ಕೂಟ (ಎಕೆಎಫ್ಐ) ಹಾಗೂ ಕೂಟದ ನೇರ ಪ್ರಸಾರಕರು ಪ್ರಸಕ್ತ ಸಾಲಿನ ಪ್ರೊ ಕಬಡ್ಡಿ ನಡೆಸಲೇಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ ಆಟಗಾರರ,ಸಿಬಂದಿ ಹಾಗೂ ವೀಕ್ಷಕರ ಆರೋಗ್ಯ ದೃಷ್ಟಿ ಯಿಂದ ಕೂಟವನ್ನು ಭಾರತದಲ್ಲಿ ಆಯೋಜಿ ಸುವುದು ಕಷ್ಟ ಎನ್ನಲಾಗಿದೆ. ಹೀಗಾಗಿ ಕೂಟವನ್ನು ವಿದೇಶಕ್ಕೆ ವರ್ಗಾಯಿಸುವ ಕುರಿತು ಚರ್ಚೆ ನಡೆದಿದೆ. ಎಪ್ರಿಲ್‌ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಬೇಕಿತ್ತು. ಜುಲೈಯಲ್ಲಿ ಪಂದ್ಯಾವಳಿ ಆರಂಭವಾಗಬೇಕಿತ್ತು.

ಪ್ರೊ ಕಬಡ್ಡಿಯಲ್ಲಿ ಲಂಕಾ ಆಟಗಾರರು
ಶ್ರೀಲಂಕಾದ ಆಟಗಾರರಿಬ್ಬರು ಹಿಂದಿನ ಆವೃತ್ತಿಗಳಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. ರಾಣಿಡು ಚಾಮರ ಯುಪಿ ಯೋಧಾ ತಂಡವನ್ನು ಪ್ರತಿನಿಧಿಸಿದ್ದರೆ, ಮತ್ತೋರ್ವ ಆಟಗಾರ ಮಿಲಿಂದ ಚತುರಂಗ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಪರ ಆಡಿದ್ದಾರೆ. ಈ ಸಲ ಪಿಕೆಎಲ್‌ ಲಂಕಾದಲ್ಲಿ ನಡೆದದ್ದೇ ಆದರೆ ಅಲ್ಲಿನ ಮತ್ತಷ್ಟು ಆಟಗಾರರು ವಿವಿಧ ತಂಡಗಳಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next