Advertisement
ಹೌದು… ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್, ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್)ನಲ್ಲಿ ಬೆಂಗಳೂರು ರ್ಯಾಪ್ಟರ್ ಹಾಗೂ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್‌ನಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್ಸಿ) ತಂಡಗಳು ಕ್ರಮವಾಗಿ ಚಾಂಪಿಯನ್ ಆಗಿ ಮರೆದಿವೆ. ವಿಶೇಷವೆಂದರೆ ಕಳೆದ 1 ವರ್ಷದ ಅವಧಿಯಲ್ಲಿಯೇ ಈ ಮೂರೂ ಪ್ರಶಸ್ತಿಗಳು ಬೆಂಗಳೂರು ತಂಡಗಳಿಗೆ ಒಲಿದು ಬಂದಿವೆ. ಒಂದು ರೀತಿಯಲ್ಲಿ ನೋಡುವುದಾದರೆ ಒಟ್ಟಾರೆ ಎಲ್ಲ ಬೆಳವಣಿಗೆಯನ್ನು ಬೆಂಗಳೂರಿಗೆ ಕಿರೀಟ ಪರ್ವಕಾಲ ಎಂದು ಬಣ್ಣಿಸಿದರೆ ಅತಿಶಯೋಕ್ತಿಯಾಗಲಾರದು.
ಪ್ರೊ ಕಬಡ್ಡಿ 5 ಆವೃತ್ತಿಗಳಾಗಿದ್ದರೂ ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ತಂಡಕ್ಕೆ ಒಮ್ಮೆಯೂ ಟ್ರೋಫಿ ಎತ್ತುವ ಭಾಗ್ಯವೇ ಸಿಕ್ಕಿರಲಿಲ್ಲ. 2014ರ ಮೊದಲ ಆವೃತ್ತಿ ಪ್ರೊ ಕಬಡ್ಡಿ ಕೂಟದಲ್ಲಿ ಬೆಂಗಳೂರು ಬುಲ್ಸ್ ನೀರಸ ಪ್ರದರ್ಶನ ನೀಡಿ 4ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತ್ತು. 2015ರಲ್ಲಿ ಎರಡನೇ ಆವೃತ್ತಿ ಲೀಗ್‌ನಲ್ಲಿ ಬೆಂಗಳೂರು ತಂಡ ಶ್ರೇಷ್ಠ ನಿರ್ವಹಣೆ ಮೂಲಕ ಫೈನಲ್ ತನಕ ತಲುಪಿತ್ತು. ಆದರೆ ಕಪ್ ಗೆಲ್ಲುವ ದಾರಿಯಲ್ಲಿ ಎಡವಿ ರನ್ನರ್‌ಅಪ್ ಆಗಿತ್ತು.
2016ರಲ್ಲಿ ಲೀಗ್‌ನ 3ನೇ ಆವೃತ್ತಿಯಲ್ಲಿ ಬೆಂಗಳೂರು ತಂಡ ಯಾರೂ ಊಹಿಸದ ರೀತಿಯಲ್ಲಿ ಕಳಪೆ ಪ್ರದರ್ಶನ ನೀಡಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಅದೇ ವರ್ಷ ನಡೆದ ನಾಲ್ಕನೇ ಆವೃತ್ತಿ ಲೀಗ್‌ನಲ್ಲೂ ಬೆಂಗಳೂರು 6ನೇ ಸ್ಥಾನ ಅನುಭವಿಸುವ ಮೂಲಕ ಭಾರೀ ಹಿನ್ನಡೆ ಕಂಡಿತ್ತು. ಇನ್ನು 5ನೇ ಆವೃತ್ತಿಯಲ್ಲೂ ಬೆಂಗಳೂರು ತಂಡದ ಅದೃಷ್ಟ ಬದಲಾಗಲಿಲ್ಲ. ನಾಲ್ಕನೇ ಸ್ಥಾನ ಅನುಭವಿಸಿ ತಣ್ಣಗಾಯಿತು.
6ನೇ ಆವೃತ್ತಿಯಲ್ಲಿ ಮಾತ್ರ ಬೆಂಗಳೂರು ತಂಡ ಮೈಚಳಿ ಬಿಟ್ಟು ಆಡಿತು. ಪವನ್ ಸೆಹ್ರಾವತ್ ಪ್ರಚಂಡ ರೈಡಿಂಗ್, ನಾಯಕ ರೋಹಿತ್ ಕುಮಾರ್, ಕಾಶಿಲಿಂಗ್ ಅಡಕೆ ಬಿರುಸಿನ ರೈಡಿಂಗ್, ಇದೆಲ್ಲದರ ಬಲದಿಂದ ಬೆಂಗಳೂರು ತಂಡ ಯಶಸ್ವಿಯಾಗಿ ಫೈನಲ್‌ಗೆ ಪ್ರವೇಶಿಸಿತ್ತು. ಅಂತಿಮವಾಗಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡವನ್ನೂ ಸೋಲಿಸಿ ಮೊದಲ ಬಾರಿಗೆ ಬೆಂಗಳೂರು ಪ್ರಶಸ್ತಿ ಗೆದ್ದು ಬೀಗಿತು.
Related Articles
Advertisement
2017-18ರಲ್ಲಿ ನಡೆದ ಪಿಬಿಎಲ್‌ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಫೈನಲ್ ತನಕ ಪ್ರವೇಶಿಸಿತ್ತು. ಆದರೆ ಅಲ್ಲಿ 4-3 ಅಂಕಗಳ ಅಂತರದಿಂದ ಹೈದರಾಬಾದ್ ಹಂಟರ್ ವಿರುದ್ಧ ಸೋತು ರನ್ನರ್‌ಅಪ್ ಆಗಿದ್ದನ್ನು ಸ್ಮರಿಸಬಹುದು. 2018-19ರ ಪಿಬಿಎಲ್ 4ನೇ ಆವೃತ್ತಿಯಲ್ಲಿ ಬೆಂಗಳೂರು ತಂಡ ತನ್ನ ಹೆಸರಿನ ಮುಂದೆ ಇದ್ದ ಬ್ಲಾಸ್ಟರ್ಸ್ ಕೈಬಿಟ್ಟು ಬೆಂಗಳೂರು ರ್ಯಾಪ್ಟರ್ ಎಂದು ಸೇರಿಸಿಕೊಂಡು ತಂಡವನ್ನು ಕಣಕ್ಕೆ ಇಳಿಸಲಾಯಿತು. ಲೀಗ್ ಹಂತದಲ್ಲಿ ಭರ್ಜರಿಯಾಗಿ ಸಿಡಿದ ರ್ಯಾಪ್ಟರ್ ಯಶಸ್ವಿಯಾಗಿ ಸೆಮಿಫೈನಲ್‌ಗೂ ನೆಗೆಯಿತು. ಸೆಮೀಸ್‌ನಲ್ಲಿ ಅವಧ್ ವಾರಿಯರ್ ತಂಡವನ್ನು 4-2 ಅಂತರದಿಂದ ಬೆಂಗಳೂರು ರ್ಯಾಪ್ಟರ್ ಸೋಲಿಸಿ ಮೊದಲ ಸಲ ಪಿಬಿಎಲ್ ಕಿರೀಟ ಮುಡಿಗೇರಿಸಿಕೊಂಡಿತು.
ಐಎಸ್‌ಎಲ್‌ನಲ್ಲೂ “ನಮೆªà ಹವಾ’: 2017-18ರಿಂದ ಇಂಡಿಯನ್ ಸೂಪರ್ ಲೀಗ್‌ಗೆ ಬೆಂಗಳೂರು ಎಫ್ಸಿ ಕಾಲಿಟ್ಟಿತ್ತು. ಆಗ ಐಎಸ್‌ಎಲ್ ನಾಲ್ಕನೇ ಆವೃತ್ತಿಯಾಗಿತ್ತು. ಬಿಎಫ್ಸಿ ತಂಡ ಕಾಲಿಡುತ್ತಿದ್ದಂತೆ ತನ್ನ ಪರಾಕ್ರಮ ಮೆರೆಯಿತು. ಲೀಗ್‌ನಲ್ಲಿ ಅಬ್ಬರಿಸಿತು. ಗೆಲುವುಗಳನ್ನೇ ಮೆಟ್ಟಿಲಾಗಿಸಿಕೊಂಡು ಫೈನಲ್‌ಗೆ ಹೆಜ್ಜೆ ಹಾಕಿತು. ಆದರೆ ತನ್ನ ಮೊದಲ ಆವೃತ್ತಿಯ ಫೈನಲ್‌ನಲ್ಲಿ ಚೆನ್ನೈಯನ್ ತಂಡದ ವಿರುದ್ಧ ಆತಿಥೇಯ ಬಿಎಫ್ಸಿ 3-2 ಗೋಲುಗಳ ರೋಚಕ ಕಾಳಗದಲ್ಲಿ ಸೋತು ರನ್ನರ್‌ಅಪ್ ಆಗಿತ್ತು. ತವರಿನಲ್ಲಾದ ಈ ಸೋಲು ಅಕ್ಷರಶಃ ನಾಯಕ ಸುನಿಲ್ ಚೆಟ್ರಿ ಪಡೆಯನ್ನು ಭಾರೀ ನಿರಾಶೆಗೆ ದೂಡಿತ್ತು. 2018-19ರಲ್ಲಿ ಬೆಂಗಳೂರು ಎಫ್ಸಿ ಮತ್ತೂಮ್ಮೆ ಫೈನಲ್ ಪ್ರವೇಶಿಸಿತು. ಹೆಚ್ಚುವರಿ ಅವಧಿ ತನಕ ಸಾಗಿದ್ದ ರೋಚಕ ಪಂದ್ಯದಲ್ಲಿ 1-0 ಅಂತರದಿಂದ ಗೋವಾವನ್ನು ಸೋಲಿಸಿ ಮೊದಲ ಬಾರಿಗೆ ಐಎಸ್‌ಎಲ್ ಟ್ರೋಫಿಯನ್ನು ಬೆಂಗಳೂರು ಎಫ್ಸಿ ತನ್ನದಾಗಿಸಿಕೊಂಡಿದೆ.
ಐಪಿಎಲ್ ಒಂದು ಗೆದ್ರೆ ನಾವೇ ಶೂರರು!ಪ್ರೊ ಕಬಡ್ಡಿ, ಪಿಬಿಎಲ್, ಐಎಸ್‌ಎಲ್ ಮೂರು ಪ್ರತಿಷ್ಠಿತ ಲೀಗ್ ಗೆದ್ದಿರುವ ನಮಗೆ ಇನ್ನೂ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಟ್ರೋಫಿ ಗೆದ್ದಿಲ್ಲ ಅನ್ನುವ ನೋವಿದೆ. ಹನ್ನೊಂದು ವರ್ಷಗಳಾದರೂ ಐಪಿಎಲ್ ಟ್ರೋಫಿ ನಮಗೆ ಮರೀಚಿಕೆ ಆಗಿಯೇ ಉಳಿದಿದೆ. ಈ ಸಲ ಕಪ್ ನಮೆªà..ನಮೆªà ಅಂತ ಅಂದುಕೊಂಡರೂ ಪ್ರತಿ ಸಲವೂ ಆರ್‌ಸಿಬಿ (ರಾಯಲ್ ಚಾಲೆಂಜರ್ ಬೆಂಗಳೂರು) ಮುಗ್ಗರಿಸುವುದು ಮುಗಿಯುತ್ತಿಲ್ಲ. ಅಭಿಮಾನಿಗಳು ಹಿಡಿಶಾಪ ಹಾಕಿಕೊಂಡು ಮನೆ ಕಡೆ ನಡೆಯುವುದು ನಿಲ್ಲುತ್ತಿಲ್ಲ. ಈ ಸಲ 12ನೇ ಆವೃತ್ತಿಯಲ್ಲಿ ಆರ್‌ಸಿಬಿಗೆ ಮೊದಲ ಸಲ ಕಪ್ ಗೆಲ್ಲುವ ಅವಕಾಶ ಇದೆ. ಕೋಟ್ಯಂತರ ಅಭಿಮಾನಿಗಳ ಆಸೆಯನ್ನು ಪೂರೈಸುವ ಜವಾಬ್ದಾರಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿಯದ್ದಾಗಿದೆ. ಆರ್‌ಸಿಬಿ ಪಡೆದ ಸ್ಥಾನಗಳು ಹೀಗಿವೆ: 2008-7ನೇ ಸ್ಥಾನ, 2009 ರನ್ನರ್‌ಅಪ್, 2010 ಪ್ಲೇಆಫ್, 2011 ರನ್ನರ್‌ಅಪ್, 2012 ಐದನೇ ಸ್ಥಾನ, 2013 ಐದನೇ ಸ್ಥಾನ, 2014 ಏಳನೇ ಸ್ಥಾನ, 2015 ಪ್ಲೇಆಫ್, 2016 ರನ್ನರ್‌ಅಪ್, 2017 ಎಂಟನೇ ಸ್ಥಾನ ಹಾಗೂ 2018 ಆರನೇ ಸ್ಥಾನ.