ಬೆಂಗಳೂರು: ಬೆಂಗಳೂರು ಬುಲ್ಸ್ ಹ್ಯಾಟ್ರಿಕ್ ಸೋಲಿನ ಆಘಾತಕ್ಕೆ ಸಿಲುಕಿದೆ. ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಅದು ಪುನೇರಿ ಪಲ್ಟಾನ್ ವಿರುದ್ಧ 35-37 ಅಂತರದ ಸೋಲನುಭವಿಸಿದೆ.
ಆದರೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ. ದ್ವಿತೀಯ ಪಂದ್ಯದಲ್ಲಿ ಯು ಮುಂಬಾ 42-35 ಅಂತರದಿಂದ ಟೈಟಾನ್ಸ್‌ಗೆ ಸೋಲುಣಿಸಿತು.
ಬೆಂಗಳೂರು ಪರ ನಾಯಕ ಸೆಹ್ರಾವತ್ ಹೊರತು ಪಡಿಸಿ ಉಳಿದ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಮುಖ್ಯವಾಗಿ ದಾಳಿಯಲ್ಲಿ ವಿಫಲವಾಗಿದ್ದೇ ತಂಡದ ಹಿನ್ನಡೆಗೆ ಕಾರಣವಾಯಿತು. ಸೆಹ್ರಾವತ್ 17 ಬಾರಿ ದಾಳಿ ನಡೆಸಿ 10 ಅಂಕ ಸಂಗ್ರಹಿಸಿದರು. ಈ ಸಾಧನೆಯ ಸನಿಹಕ್ಕೂ ಉಳಿದವರು ಬರಲಿಲ್ಲ. ರಕ್ಷಣೆಯಲ್ಲಿ ಸೌರಭ್ ನಂದಲ್ ಉತ್ತಮ ಯತ್ನವನ್ನೇ ಮಾಡಿದರು. ಅವರು 5 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ 2 ಬಾರಿ ಯಶಸ್ವಿಯಾದರು. ಹಾಗೆಯೇ ಅಮನ್ 5 ಯತ್ನದಲ್ಲಿ 2 ಬಾರಿ ಯಶ ಕಂಡರು.
ಪುನೇರಿ ಪಲ್ಟಾನ್ ಪರ ಮೋಹಿತ್ ಗೋಯತ್ ಅಮೋಘ ದಾಳಿ ನಡೆಸಿ 13 ಅಂಕ ಸಂಗ್ರಹಿಸಿದರು. ಅಸ್ಲಾಮ್ ಇನಾಮಾªರ್ 21 ಬಾರಿ ದಾಳಿ ನಡೆಸಿದರೂ ಗಳಿಸಿದ್ದು 6 ಅಂಕ ಮಾತ್ರ. ನಿತಿನ್ ತೋಮರ್ 4 ದಾಳಿಯಲ್ಲಿ 4 ಅಂಕ ಪಡೆದರು. ರಕ್ಷಣೆಯಲ್ಲಿ ಸೋಮ್‌ಬೀರ್ ಅಮೋಘ ಪ್ರದರ್ಶನ ನೀಡಿದರು. ಒಟ್ಟು 7 ಬಾರಿ ಎದುರಾಳಿಗಳನ್ನು ಅಂಕಣದಲ್ಲಿ ಕೆಡವಿಕೊಳ್ಳಲು ಯತ್ನಿಸಿ, 5 ಬಾರಿ ಯಶಸ್ವಿಯಾಗಿ 5 ಅಂಕ ಪಡೆದರು.