Advertisement
ಡಿ. 17ರಂದು ಮುಂಬಯಿಯ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಯಾವ ತಂಡ ಕಪ್ ಎತ್ತಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಲೀಗ್ ಹಂತದ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತ ಬಂದಿರುವ, ಅಂಕಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ , ಪುಣೇರಿ ಪಲ್ಟನ್, ಬೆಂಗಳೂರು ಬುಲ್ಸ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳು ಎನ್ನಬಹುದಾಗಿದೆ.
Related Articles
Advertisement
ರೆಕಾರ್ಡ್ ಬ್ರೇಕರ್ ಪರ್ದಿಪ್ ನರ್ವಾಲ್ ನಾಯಕತ್ವದ ಯುಪಿ ಯೋಧಾಸ್ ತಂಡವೂ ತನ್ನ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ಲೇ ಆಪ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ರೈಡರ್ ಸುರೇಂದ್ರ ಗಿಲ್ ಆಪತ್ತಿನ ಸಮಯದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಡಿಫೆನ್ಸ್ ನಲ್ಲಿ ಇನ್ನೂ ಉತ್ತಮ ಪ್ರದರ್ಶನ ಬಂದಲ್ಲಿ ಯೋಧಾಸ್ ಕೂಡ ಪ್ರಶಸ್ತಿ ಹತ್ತಿರ ತೆರಳಬಹುದು.
ಹೈ ಪ್ಲೈಯರ್ ಪವನ್ ಸೆಹ್ರಾವತ್ ಅವರನ್ನು ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಖರೀದಿಸಿ ಅವರ ನಾಯಕತ್ವದಲ್ಲಿ ಆಡಲಿಳಿದ ತಮಿಳ್ ತಲೈವಾಸ್ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ದುರದೃಷ್ಟವಶಾತ್ ಪವನ್ ಮೊದಲ ಪಂದ್ಯದಲ್ಲಿಯೇ ಗಾಯಾಳಾಗಿ ಕೂಟದಿಂದಲೇ ನಿರ್ಗಮಿಸುವಂತಾಯಿತು. ಪವನ್ ಇಲ್ಲದೆ ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿದ ತಂಡ ಅನಂತರ ರೈಡರ್ ನರೇಂದರ್, ಡಿಫೆಂಡರ್ ಸಾಗರ್ ಅವರ ಉತ್ತಮ ಪ್ರದರ್ಶನ ಹಾಗೂ ತಂಡದ ಸದಸ್ಯರ ಸಾಂಘಿಕ ಪ್ರದರ್ಶನದ ಮೂಲಕ ಪ್ಲೇ ಆಪ್‌ಗೆ ಲಗ್ಗೆ ಇಟ್ಟಿದೆ. ಯುವಕರೇ ತುಂಬಿರುವ ತಂಡದಲ್ಲಿ ಅನುಭವದ ಕೊರತೆಯಿದ್ದರೂ, ಸಾಮರ್ಥ್ಯಕ್ಕೆ ಕೊರತೆಯಿಲ್ಲ.
ಹಾಲಿ ಚಾಂಪಿಯನ್ ದಂಬಾಗ್ ಡೆಲ್ಲಿ ಸಂಪೂರ್ಣವಾಗಿ ಸ್ಟಾರ್ ರೈಡರ್ ನಾಯಕ ನವೀನ್ ಕುಮಾರ್ ಅವರ ಮೇಲೆ ಅವಲಂಬಿತವಾಗಿದೆ. ಡಿಫೆನ್ಸ್ ನಲ್ಲಿ ವಿಶಾಲ್ ಉತ್ತಮ ಪ್ರರ್ಶನ ತೋರುತ್ತಿದ್ದಾರಾದರೂ ಕಪ್ ಗೆಲ್ಲಲು ಇದು ಸಾಲದು. ಕಷ್ಟಪಟ್ಟು ಪ್ಲೇ ಆಪ್ ಪ್ರವೇಶಿಸಿರುವ ದಂಬಾಗ್ ತನ್ನ ಚಾಂಪಿಯನ್ ಆಟವನ್ನು ತೋರದೆ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ಅಂದ ಮಾತ್ರಕ್ಕೆ ದಬಾಂಗ್ ಅನ್ನು ಕಡೆಗಣಿಸುವಂತಿಲ್ಲ. ಅದು ಯಾವ ಸಂದರ್ಭದಲ್ಲಿಯೂ ಎದುರಾಳಿಯ ಮೇಲೆ ಎರಗಿ ಕಪ್ ಅನ್ನು ತನ್ನಲ್ಲಿ ಉಳಿಸಿಕೊಳ್ಳಲುಬಹುದು.
ಇಂದಿನಿಂದ ಪ್ಲೇ ಆಪ್ ಪಂದ್ಯಗಳು ಆರಂಭವಾಗಲಿದ್ದು, ಯಾವ ತಂಡ ಉತ್ತಮ ಪ್ರದರ್ಶದ ಮೂಲಕ ಫೈನಲ್ ಪ್ರವೇಶಿಸಿ ಕಪ್ ಎತ್ತಿ ಸಂಭ್ರಮಿಸುವುದೋ ಕಾದು ನೋಡಬೇಕಾಗಿದೆ.
ಸುಶ್ಮಿತಾ ನೇರಳಕಟ್ಟೆ