ಹೊಸದಿಲ್ಲಿ : ಮಹಾತ್ಮ ಗಾಂಧೀಜಿ ಹತ್ಯೆಗೈದಿದ್ದ ನಾಥುರಾಮ್ ಗೋಡ್ಸೆ ಪರ ಸಹಾನುಭೂತಿ ತೋರಿ, ಹೊಗಳಿ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳು ಮತ್ತು ಟ್ವೀಟ್‌ಗಳು ಭಾರೀ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ, ಈ ಹೇಳಿಕೆಗಳು ವೈಯಕ್ತಿಕ, ಇದು ಬಿಜೆಪಿಯ ನಿಲುವಲ್ಲ ಎಂದು ಅಮಿತ್ ಶಾ ಟ್ವೀಟ್ ಮಾಡಿ ವಿವಾದಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.
ಶುಕ್ರವಾರ ಟ್ವೀಟ್ ಮಾಡಿರುವ ಅಮಿತ್ ಶಾ, ನಾಯಕರುಗಳು ತಮ್ಮ ಹೇಳಿಕೆಗಳಿಗೆ ಈಗಾಗಲೇ ಕ್ಷಮೆ ಕೋರಿದ್ದಾರೆ. ಆದರೆ ಪಕ್ಷ ಅವರ ಹೇಳಿಕೆಗಳನ್ನು ಶಿಸ್ತು ಸಮಿತಿಯ ಮುಂದು ಕಳುಹಿಸಲು ನಿರ್ಧರಿಸಿದೆ. ಸಮಿತಿ ನಾಯಕರಿಂದ 10 ದಿನಗಳ ಒಳಗೆ ಸ್ಪಷ್ಟನೆ ಕೋರಿ ಉತ್ತರವನ್ನು ಕೇಳಲಿದೆ ಎಂದರು.
ಅನಂತ್ ಕುಮಾರ್ ಹೆಗಡೆ, ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ನಳೀನ್ ಕುಮಾರ್ ಕಟೀಲ್ ಅವರು ನೀಡಿರುವ ಹೇಳಿಕೆಗಳು ವೈಯಕ್ತಿಕ. ಅವರ ಹೇಳಿಕೆ ಪಕ್ಷದ ನಿಲುವಲ್ಲ ಎಂದರು.
ಸಾಧ್ವಿ ಪ್ರಜ್ಞಾ ಸಿಂಗ್ ಅವರು ನಾಥುರಾಮ್ ಗೋಡ್ಸೆ ರಾಷ್ಟ್ರಭಕ್ತ ಎಂದಿದ್ದರು. ನಳೀನ್ ಕುಮಾರ್ ಕಟೀಲ್ ಮತ್ತುಅನಂತ್ ಕುಮಾರ್ ಹೆಗಡೆಗೋಡ್ಸೆ ಪರವಾಗಿ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದರು. ಸಚಿವ ಹೆಗಡೆ ನನ್ನ ಟ್ವೀಟರ್ ಖಾತೆ ಹ್ಯಾಕ್ ಆಗಿತ್ತು ಎಂದಿದ್ದರು. ನಳೀನ್ ಕ್ಷಮೆ ಯಾಚಿಸಿದ್ದರು.