ನವದೆಹಲಿ/ಲಕ್ನೋ:ಉತ್ತರಪ್ರದೇಶದ ಹತ್ರಾಸ್ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಕೊನೆಗೂ ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿದಂತೆ ಐವರಿಗೆ ಉತ್ತರಪ್ರದೇಶ ಸರ್ಕಾರ ಅವಕಾಶ ನೀಡಿರುವುದಾಗಿ ವರದಿ ತಿಳಿಸಿದೆ.
ಎರಡು ದಿನಗಳ ಹಿಂದಷ್ಟೇ ಹತ್ರಾಸ್ ಸಂತ್ರಸ್ತೆ ಯುವತಿಯ ಕುಟುಂಬ ಸದಸ್ಯರನ್ನು ಭೇಟಿಯಾಗಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತೆರಳಿದ್ದ ವೇಳೆ ನೋಯ್ಡಾದ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಭಾರೀ ಹೈಡ್ರಾಮಾ ನಡೆದಿತ್ತು. ಈ ವೇಳೆ ಪೊಲೀಸರು ರಾಹುಲ್ ಗಾಂಧಿಯನ್ನು ತಡೆದಾಗ ನಡೆದ ತಳ್ಳಾಟದಲ್ಲಿ ಕೆಳಕ್ಕೆ ಬಿದ್ದ ಘಟನೆಯೂ ನಡೆದಿತ್ತು.
ಇದರಿಂದಾಗಿ ಉತ್ತರಪ್ರದೇಶ ಪೊಲೀಸರ ಕ್ರಮದ ವಿರುದ್ಧ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ಎರಡು ದಿನಗಳ ನಂತರ ಮತ್ತೆ ಹತ್ರಾಸ್ ಸಂತ್ರಸ್ತೆ ಕುಟುಂಬದ ಸದಸ್ಯರನ್ನು ಭೇಟಿಯಾಗಲು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.
ಇದನ್ನೂ ಓದಿ: ರಾಯಲ್ ಕದನದಲ್ಲಿ ಟಾಸ್ ಗೆದ್ದ ಸ್ಮಿತ್ ಪಡೆ ಬ್ಯಾಟಿಂಗ್ ಆಯ್ಕೆ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜತೆ ಇಂದು 30ಕ್ಕಿಂತಲೂ ಅಧಿಕ ಸಂಸದರು ಹತ್ರಾಸ್ ಗೆ ತೆರಳಲು ಸಾಥ್ ನೀಡಿದ್ದರು. ಪ್ರಿಯಾಂಕಾ ಗಾಂಧಿ ಕಾರನ್ನು ಚಲಾಯಿಸಿದ್ದು, ಪಕ್ಕದ ಸೀಟ್ ನಲ್ಲಿ ರಾಹುಲ್ ಗಾಂಧಿ ಕುಳಿತಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಏತನ್ಮಧ್ಯೆ ಉತ್ತರಪ್ರದೇಶ-ದಿಲ್ಲಿ ಗಡಿಯಲ್ಲಿ ಗಾಂಧಿ ವಾಹನವನ್ನು ಮತ್ತೆ ತಡೆದು ನಿಲ್ಲಿಸಲಾಗಿತ್ತು. ನಂತರ ಪೊಲೀಸರು ರಾಹುಲ್, ಪ್ರಿಯಾಂಕಾ ಸೇರಿದಂತೆ ಕೇವಲ ಐದು ಮಂದಿಗೆ ಮಾತ್ರ ತೆರಳಲು ಅವಕಾಶ ಮಾಡಿಕೊಟ್ಟಿರುವುದಾಗಿ ವರದಿ ವಿವರಿಸಿದೆ.
ರಾಹುಲ್ ಭೇಟಿಯ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೇ ದಿಲ್ಲಿ ನೋಯ್ಡಾ ಫ್ಲೈ ಓವರ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿರುವುದಾಗಿ ವರದಿ ತಿಳಿಸಿದೆ. ಬ್ಯಾರಿಕೇಡ್ ಅಳವಡಿಸಿ, ಗೌತಮ್ ಬುದ್ಧ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಹೇಳಿದೆ.