ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ಪಿಎಸ್ ಐ ನೇಮಕ ಹಗರಣದ ಆರೋಪಿ ದಿವ್ಯಾ ಹಾಗರಗಿ ಮನೆಗೆ ಹೋಗಿ ಬಂದಿದ್ದಾರೆ. ಸ್ವಾಮಿ ಸುನೀಲ್ ಕುಮಾರ್ ಅವರೇ ಮೊದಲು ನಿಮ್ಮ ಗೃಹ ಸಚಿವರನ್ನು ವಿಚಾರಣೆಗೆ ಒಳಪಡಿಸಿ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದ್ದಾರೆ.
ನನಗೆ ನಿನ್ನೆ ಸಿಐಡಿಯಿಂದ ನೊಟೀಸ್ ನೀಡಲಾಗಿದೆ. ಪಿಎಸ್ ಐ ನೇಮಕಾತಿ ಅಕ್ರಮದ ಬಗ್ಗೆ ಮಾಹಿತಿ ಕೇಳಿದ್ದಾರೆ.ನೊಟೀಸ್ ನೋಡಿದರೆ ಸರ್ಕಾರದ ಕಾರ್ಯವೈಖರಿ ಏನೆಂಬುದು ಗೊತ್ತಾಗುತ್ತದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಸುನೀಲ್ ಕುಮಾರ್ ಅವರು ನನ್ನನ್ನು ವಿಚಾರಣೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಸ್ವಾಮಿ, ಸುನೀಲ್ ಅವರೇ ಈಪ್ರಕರಣದಲ್ಲಿ ನಿಮ್ಮ ಗೃಹ ಸಚಿವರನ್ನು ಮೊದಲು ವಿಚಾರಣೆ ನಡೆಸಬೇಕು. ಆರೋಪಿ ದಿವ್ಯಾ ಹಾರಗಿ ಮನೆಗೆ ಹೋಗಿ ಗೋಡಂಬಿ ತಿಂದು ಬಂದವರು ಅವರೇ ಅಲ್ಲವೇ ? ಎಂದು ವ್ಯಂಗ್ಯವಾಡಿದರು.
ಹೋಂ ಮಿನಿಸ್ಟರ್ ಗೆ ಉತ್ತರ ಕೊಡುವವರು ಯಾರು? ಪೊಲೀಸ್ ಅಧಿಕಾರಿಗಳೇ ತಾನೇ ? ಯಾಕೆ ಅಕ್ರಮದ ಬಗ್ಗೆ ಮಾಹಿತಿ ಸರ್ಕಾರದ ಬಳಿ ಇಲ್ಲವೇ ಎಂದು ಪ್ರಶ್ನಿಸಿದರು.
ರೇಣುಕಾಚಾರ್ಯ ಯುವಕರ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಎಸ್ ಸಿ ಸರ್ಟಿಪಿಕೆಟ್ ಪಡೆದವರು ಯಾರು ? ದಲಿತ ಯುವಕರ ಅವಕಾಶ ಕಿತ್ತವರು ಯಾರು ? ಕಿವಿಮೇಲೆ ಲಾಲ್ ಬಾಗ್ ಇಟ್ಟಿದ್ದಾರೆ ಅಂತಾರೆ. ದಲಿತರ ಮೀಸಲಾತಿ ಕಿತ್ತುಕೊಂಡವರು ನೀವಲ್ವೇ?ನಿಮ್ಮದೇ ಸರ್ಕಾರ,ನಿಮ್ಮದೇ ಅಧಿಕಾರಿ ಇದ್ದಾರೆ. ಸರಿಯಾದ ತನಿಖೆ ಯಾಕೆ ನಡೆಯುತ್ತಿಲ್ಲ ಎಂದರು.
ನೀವೇನು ಕತ್ತೆ ಕಾಯ್ತಿದ್ದೀರ,ಕಡ್ಲೆಪುರಿ ತಿನ್ನುತ್ತಿದ್ದೀರ ? ಆರೋಪಿ ಮೇಲೆ ಯಾಕೆ ಎಫ್ ಐಆರ್ ಮಾಡಿಲ್ಲ.ಇದರಲ್ಲಿ ಡಿಪಾರ್ಟ್ ಮೆಂಟ್ ಶಾಮೀಲಾಗಿದೆ ಅಂದುಕೊಳ್ಳಬಹುದಾ?ಗೃಹ ಸಚಿವರು ಆರೋಪಿ ಮನೆಗೆ ಹೋಗಿರ್ತಾರೆ.ದಿವ್ಯಾ ಹಾರಗಿ ಮನೆಗೆ ಹೋಗಿದ್ದಾರೆ. ಅವರ ಮನೆಯಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ.ಬದಾಮಿ,ಗೋಡಂಬಿ ತಿಂದು ಬರ್ತಾರೆ. ಯಾಕೆ ಗೃಹ ಸಚಿವರಿಗೆ ನೋಟೀಸ್ ಕೊಟ್ಟಿಲ್ಲ ? ಎಂದು ಆಕ್ರೋಶ ವ್ಯಕ್ತಪಡಿಸಿದರು.