Advertisement

ಭ್ರಷ್ಟರಿಗೆ ಮತ ಹಾಕುವುದೇ ಬೇಡ: ನವಲಗುಂದದಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಪ್ರಚಾರ

01:13 AM Apr 30, 2023 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರಕಾರ ಏನೆಲ್ಲ ಭ್ರಷ್ಟಾ ಚಾರ ಮಾಡಿದೆ ಎಂಬುದನ್ನು ನೋಡಿ ಯಾರಿಗೆ ಮತ ಎಂದು ನಿರ್ಧರಿಸಿ ಎಂಬುದಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

Advertisement

ನವಲಗುಂದದಲ್ಲಿ ಶನಿವಾರ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಅತ್ಯುತ್ತಮ ರಾಜ್ಯ ಎನಿಸಿಕೊಂಡಿದ್ದ ಕರ್ನಾಟಕದ ಗೌರವವನ್ನು ಹಾಳು ಮಾಡಿ ದ್ದಾರೆ. ತಮ್ಮ ಗೌರವದ ಜತೆಗೆ ಮತದಾರರ ಗೌರವವನ್ನೂ ಕಳೆದಿ ದ್ದಾರೆ ಎಂದರು.

ಕರ್ನಾಟಕದಲ್ಲಿ ಪ್ರತಿಯೊಂದು ಹುದ್ದೆಗಳಿಗೂ ಲಂಚ. ಅದನ್ನು ನೀಡದೆ ಯಾವುದೇ ನೌಕರಿ ಸಿಗದೆ ಇರುವ ಸ್ಥಿತಿ ನಿರ್ಮಾಣವಾಗಿದೆ. ಕಷ್ಟಪಟ್ಟು ಶಿಕ್ಷಣ ಪಡೆದರೂ ಹಣವಿಲ್ಲದೆ ಸರಕಾರಿ ಉದ್ಯೋಗ ಇಲ್ಲದಂತಾಗಿದೆ. ಭ್ರಷ್ಟಾಚಾರ, ಹಗರಣಗಳು ಹೆಚ್ಚಾಗಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ಜನರ ಸಮಸ್ಯೆಗಳು ಹೆಚ್ಚಾಗಿವೆ ಎಂದು ಟೀಕಿಸಿದರು.

ಯುವಕರು ಪ್ರಾಮಾಣಿಕವಾಗಿ ಶಿಕ್ಷಣ ಮುಗಿಸಿ ಸರಕಾರಿ ನೌಕರಿ ಬಯಸುತ್ತಾರೆ. ತಮ್ಮಂತೆಯೇ ತಾವು ಆಯ್ಕೆ ಮಾಡಿದ ಸರಕಾರ ಪ್ರಾಮಾಣಿಕವಾಗಿರಬೇಕು ಎಂದು ಇಷ್ಟಪಡುತ್ತಾರೆ. ಆದರೆ ಕೇಂದ್ರ-ರಾಜ್ಯದಲ್ಲಿ ಇರುವ ಸರಕಾರ ನಿಮ್ಮ ನಿರೀಕ್ಷೆಯಂತೆ ಆಡಳಿತ ಮಾಡುತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ಸರಕಾರಗಳಿಗೆ ಕಾಳಜಿಯಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ರಾಜ್ಯ ಸರಕಾರ ಇಲ್ಲಿಯವರೆಗೆ ಒಂದೂವರೆ ಲಕ್ಷ ಕೋಟಿ ರೂ. ಕೊಳ್ಳೆ ಹೊಡೆದಿದೆ. ರಾಜ್ಯದಲ್ಲಿ 2.5 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಿಕೊಳ್ಳಲಿಲ್ಲ. ಕರೆದ ಅಲ್ಪಸ್ವಲ್ಪ ಹುದ್ದೆಗಳಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆದಿರುವುದು ಪ್ರತಿಯೊಬ್ಬರಿಗೂ ಗೊತ್ತಾಗಿದೆ ಎಂದರು.

ಹಿಂದೆ ರಾಜ್ಯದಲ್ಲಿದ್ದ ಸರಕಾರ ಅನ್ನಭಾಗ್ಯ, ಆರೋಗ್ಯ ಭಾಗ್ಯ, ಕೃಷಿ ಭಾಗ್ಯ, ಉದ್ಯೋಗ ಭಾಗ್ಯದಂತಹ ಹಲವು ಯೋಜನೆಗಳನ್ನು ನೀಡಿದೆ. ಈಗಾಗಲೇ ಛತ್ತೀಸ್‌ಗಢ, ರಾಜಸ್ಥಾನದಲ್ಲಿ ಹಳೇ ಪಿಂಚಣಿ ಜಾರಿಗೆ ತರಲಾಗಿದೆ. ರೈತರಿಗೆ ಬೆಂಬಲ ಬೆಲೆ, ಪ್ರತಿ ಎಕ್ರೆಗೆ ಸಬ್ಸಿಡಿ ಸಹಿತ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇಲ್ಲಿಯೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಯುವನಿಧಿ, 200 ಯುನಿಟ್‌ ವಿದ್ಯುತ್‌ ಉಚಿತ, ಕುಟುಂಬದ ಮುಖ್ಯಸ್ಥೆಗೆ 2,000 ರೂ., ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ಸೇರಿದಂತೆ ಕಾಂಗ್ರೆಸ್‌ ಘೋಷಿಸಿರುವ ಗ್ಯಾರಂಟಿಗಳನ್ನು ನೂರಕ್ಕೆ ನೂರರಷ್ಟು ಈಡೇರಿಸುತ್ತೇವೆ ಎಂದು ಹೇಳಿದರು.

Advertisement

ಬೆಲೆ ಏರಿಕೆ
ಹೋದಲ್ಲೆಲ್ಲ ಸಾಮಾನ್ಯ ಜನರನ್ನು ಭೇಟಿಯಾಗಿ ಅವರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಕೇಳಿದಾಗ ಅಡುಗೆ ಅನಿಲ, ನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ಸರಕಾರ ಇದ್ದಾಗ ಸಿಗುತ್ತಿದ್ದ ಅನ್ನಭಾಗ್ಯದ ಅಕ್ಕಿ ಸರಿಯಾಗಿ ಸಿಗುತ್ತಿಲ್ಲ. ಅಕ್ಕಿಯ ಗುಣಮಟ್ಟದ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಡವರು, ಕಾರ್ಮಿಕರು, ನಿರ್ಗತಿಕರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್‌ ಮುಚ್ಚುವಂತೆ ಮಾಡಿದ್ದಾರೆ. ರಾಜ್ಯದ ಪರಿಸ್ಥಿತಿ ನೋಡಿದರೆ ಈ 40 ಪರ್ಸೆಂಟ್‌ ಭ್ರಷ್ಟ ಸರಕಾರವನ್ನು ಕಿತ್ತೂಗೆಯಬೇಕಾಗಿದೆ ಎಂದು ಪ್ರಿಯಾಂಕಾ ವಾದ್ರಾ ಮತದಾರರನ್ನು ಆಗ್ರಹಿಸಿದರು.

ಇದುವರೆಗೆ ಬಹಳಷ್ಟು ಪ್ರಧಾನಿಗಳನ್ನು ನೋಡಿದ್ದೇನೆ. ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ ಇಂದಿನ ಪ್ರಧಾನಿ ತಮ್ಮ ಸಮಸ್ಯೆಗಳು ಹಾಗೂ ಜನರಿಗೆ ಬೇಡವಾದ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಪ್ರಧಾನಿಯನ್ನು ನೋಡಿದ್ದು ಇದೇ ಮೊದಲು ಎಂದು ಹೇಳಿದರು.

ಲಿಂಗಾಯತರಿಗೆ ಅವಮಾನ
ಬಿಜೆಪಿಯಲ್ಲಿ ದುಡಿದ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಲಿಲ್ಲ. ಆದರೆ ಭ್ರಷ್ಟಾಚಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡವರಿಗೆ ಪ್ರಧಾನಿ ಕರೆ ಮಾಡಿ ಮಾತನಾಡುತ್ತಾರೆ. ಅಂದರೆ ಬಿಜೆಪಿಯಲ್ಲಿ ಪ್ರಾಮಾಣಿಕರಿಗೆ ಟಿಕೆಟ್‌ ಇಲ್ಲ. ಶೆಟ್ಟರ್‌ ಅವರಷ್ಟೇ ಅಲ್ಲ, ಇಂತಹ ನಾಯಕರನ್ನು ಅವ ಗಣಿಸುವ ಮೂಲಕ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಇಂತಹ ಪಕ್ಷಕ್ಕೆ ಮತದಾನದ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಪ್ರಿಯಾಂಕಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next