ಹೊಸದಿಲ್ಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಕ್ಕಳ ಇನ್ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಲಾಗಿಲ್ಲ ಎಂದು ಅಧಿಕೃತ ಮೂಲಗಳನ್ನು ಉದ್ದೇಶಿಸಿ ಎನ್ ಡಿಟಿವಿ ವರದಿ ಮಾಡಿದೆ. ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ನ ಆರಂಭಿಕ ತನಿಖೆಯು ಕಾಂಗ್ರೆಸ್ ನಾಯಕಿಯ ಮಕ್ಕಳ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್ ಮಾಡಿಲ್ಲ ಎಂದು ಕಂಡುಹಿಡಿದಿದೆ ಎಂದು ಮೂಲಗಳು ತಿಳಿಸಿವೆ.
ತನ್ನ ಮಕ್ಕಳಾದ 18 ವರ್ಷದ ಮಿರಾಯಾ ವಾದ್ರಾ ಮತ್ತು 20 ವರ್ಷದ ರೈಹಾನ್ ವಾದ್ರಾ ಅವರ ಇನ್ಸ್ಟಾಗ್ರಾಮ್ ಖಾತೆಗಳನ್ನು ಸರ್ಕಾರ ಹ್ಯಾಕ್ ಮಾಡಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಆರೋಪಿಸಿದ್ದರು.
“ಅವರು ಫೋನ್ ಟ್ಯಾಪಿಂಗ್ ಮಾಡುವುದನ್ನು ಬಿಟ್ಟು ನನ್ನ ಮಕ್ಕಳ ಇನ್ಸ್ಟಾಗ್ರಾಮ್ ಖಾತೆಗಳನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ, ಅವರಿಗೆ ಬೇರೆ ಕೆಲಸವಿಲ್ಲವೇ?” ಎಂದು ಆರೋಪಿಸಿದ್ದರು.
ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಔಪಚಾರಿಕ ದೂರು ದಾಖಲಿಸಿಲ್ಲ. ಆದರೆ ಸರಕಾರ ಈ ವಿಷಯವನ್ನು ಸ್ವಂತ ತನಿಖೆ ನಡೆಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ವಿಷಯವನ್ನು ಸಿಇಆರ್‌ಟಿ-ಇನ್ ಗೆ ಹಸ್ತಾಂತರಿಸಿದೆ.
ಇದನ್ನೂ ಓದಿ:ಕೈಲಾಸ-ಮಾನಸ ಸರೋವರ ಯಾತ್ರೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಫೋನ್ ಗಳನ್ನು ಕದ್ದಾಲಿಕೆ ಮಾಡುತ್ತಿದ್ದಾರೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರತಿದಿನ ಸಂಜೆ ಧ್ವನಿಮುದ್ರಿಕೆಗಳನ್ನು ಕೇಳುತ್ತಾರೆ ಎಂದು ಆರೋಪಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಪ್ರಿಯಾಂಕಾ ಗಾಂಧಿ ಈ ಆರೋಪ ಮಾಡಿದ್ದರು. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಈ ಆರೋಪಗಳು ರಾಜಕೀಯವಾಗಿ ಮಹತ್ವ ಪಡೆದಿದೆ.