ಲಕ್ನೋ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರಿಂದು ಉತ್ತರ ಪ್ರದೇಶದಲ್ಲಿನ ತಮ್ಮ ಮೂರು ದಿನಗಳ ಲೋಕಸಭಾ ಚುನಾವಣಾ ಪ್ರಚಾರಾಭಿಯಾನವನ್ನು ಇಂದು ಸೋಮವಾರ ಪ್ರಯಾಗ್ರಾಜ್ನಿಂದ ಆರಂಭಿಸಿದರು.
ಈ ಅಭಿಯಾನದಲ್ಲಿ ಪ್ರಿಯಾಂಕಾ ಗಾಂಧಿ ನಾಲ್ಕು ಜಿಲ್ಲೆಗಳಾದ ಪ್ರಯಾಗ್ರಾಜ್, ಭಡೋಹಿ, ಮಿರ್ಜಾಪುರ ಮತ್ತು ವಾರಾಣಸಿ ಯನ್ನು ಒಳಗೊಳಿಸಿಕೊಂಡ ಅಂತಿಮವಾಗಿ ವಾರಾಣಸಿಯ ಅಸ್ಸೀ ಘಾಟ್ ಮತ್ತು ದಶಾಶ್ವಮೇಧ ಘಾಟ್ನಲ್ಲಿ ಬುಧವಾರ ಸಂಜೆ
ಅಭಿಯಾನವನ್ನು ಕೊನೆಗೊಳಿಸುವರು.
ಕಾಲ್ನಡಿಗೆ, ಕಾರು ಮತ್ತು ಸ್ಟೀಮರ್ ಬೋಟ್ಗಳ ಮೂಲಕ ಪ್ರಿಯಾಂಕಾ ಅವರು 140 ಕಿ.ಮೀ. ಮಾರ್ಗವನ್ನು ಕ್ರಮಿಸುವರು. ಪ್ರಿಯಾಂಕಾ ತಮ್ಮ ಈ ಅಭಿಯಾನವನ್ನು ಕೈಗೊಳ್ಳುವ ನಾಲ್ಕು ಜಿಲ್ಲೆಗಳ ಆದ್ಯಂತ ರಾಹುಲ್ ಜತೆಗಿನ ಆಕೆಯ ಪೋಸ್ಟರ್ ಗಳು ರಾರಾಜಿಸುತ್ತಿವೆ.
ಜನರ ಕೈಗೆ ಉದ್ಯೋಗ, ಬಡ ರೈತರ ಸಾಲ ಮನ್ನಾ ಮುಂತಾಗಿ ನೀಡಲಾಗಿರುವ ಭರವಸೆಗಳನ್ನು ತನ್ನ ಸಹೋದರ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಡೇರಿಸುವರು ಎಂಬ ಭರವಸೆಯನ್ನು ಪ್ರಿಯಾಂಕಾ ಈ ಸಂದರ್ಭದಲ್ಲಿ ತಾನು ಭೇಟಿಯಾದ ಜನಸಮೂಹಕ್ಕೆ ನೀಡಿದರು.