ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲಿಯೂ ಗೆಲುವು ಸಾಧಿಸಿದ್ದರು. ಈ ಹಿಂದೆ ಸಂಸದರಾಗಿದ್ದ ಕೇರಳದ ವಯನಾಡು ಮತ್ತು ತಾಯಿ ಸೋನಿಯಾ ಗಾಂಧಿ ಈ ಹಿಂದೆ ಸ್ಪರ್ಧಿಸಿದ್ದ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ರಾಹುಲ್ ಗೆಲುವು ಸಾಧಿಸಿದ್ದಾರೆ. ಇದೀಗ ರಾಹುಲ್ ಅವರು ಯಾವುದಾದರೂ ಒಂದು ಕ್ಷೇತ್ರವನ್ನು ತ್ಯಾಗ ಮಾಡಲೇಬೇಕು.
ಮೂಲಗಳ ಪ್ರಕಾರ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ರಾಯ್ ಬರೇಲಿ ಮತ್ತು ವಯನಾಡ್ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ ಎರಡೂ ಕ್ಷೇತ್ರಗಳಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರಾಯ್ ಬರೇಲಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರು ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಅವರನ್ನು 3,90,030 ಮತಗಳ ಅಂತರದಿಂದ ಸೋಲಿಸಿದ್ದರು. 2019 ರಲ್ಲಿ ಅಮೇಥಿಯಲ್ಲಿ ಸೋತ ನಂತರ ರಾಜ್ಯದಲ್ಲಿ ಪಕ್ಷದ ಏಕೈಕ ಭದ್ರಕೋಟೆಯನ್ನು ಉಳಿಸುವ ಉದ್ದೇಶದಿಂದ ರಾಹುಲ್ ಈ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇದೇ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ನಡೆಸಲಿದ್ದಾರೆ ಎನ್ನಲಾಗಿತ್ತು, ಆದರೆ ಕೊನೆಗೆ ಅವರು ಸ್ಪರ್ಧಿಸದೆ ದೂರ ಉಳಿದರು.
ಈ ಚುನಾವಣಾ ಪ್ರಚಾರದಲ್ಲಿ ಪ್ರಿಯಾಂಕಾ ಗಾಂಧಿ ಬಹುಪಾಲು ಕಾಂಗ್ರೆಸ್‌ನ ಕಾರ್ಯದ ಕೇಂದ್ರವಾಗಿದ್ದರು. ತಾಯಿ ಸೋನಿಯಾ ಗಾಂಧಿಯವರು ದೇಶಕ್ಕಾಗಿ ತಮ್ಮ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯವರ ಚಿನ್ನ ಮತ್ತು ಮಂಗಳಸೂತ್ರದ ಹೇಳಿಕೆಗೆ ತಿರುಗೇಟು ನೀಡಿದ್ದರು.
ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದಲ್ಲೂ ಗೆದ್ದಿದ್ದಾರೆ, ಇಲ್ಲಿ ಅವರು 2019 ರಲ್ಲಿ ಗೆದ್ದಿದ್ದರು. ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ ಅಭ್ಯರ್ಥಿ ಅನ್ನಿ ರಾಜಾ ಅವರನ್ನು 3,64,422 ಮತಗಳಿಂದ ಸೋಲಿಸಿದರು.